ADVERTISEMENT

ಕೆಂಭಾವಿ: ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:38 IST
Last Updated 26 ಅಕ್ಟೋಬರ್ 2024, 14:38 IST
ಕೆಂಭಾವಿ ಪಟ್ಟಣದ ಜಮೀನೊಂದರಲ್ಲಿ ಶನಿವಾರ ಡ್ರೋನ್ ಯಂತ್ರದ ಸಹಾಯದಿಂದ ತೊಗರಿ ಬೆಳೆಗಳಿಗೆ ಕ್ರಿಮಿ ನಾಶಕ ಔಷಧ ಸಿಂಪರಣೆ ಮಾಡಲಾಯಿತು
ಕೆಂಭಾವಿ ಪಟ್ಟಣದ ಜಮೀನೊಂದರಲ್ಲಿ ಶನಿವಾರ ಡ್ರೋನ್ ಯಂತ್ರದ ಸಹಾಯದಿಂದ ತೊಗರಿ ಬೆಳೆಗಳಿಗೆ ಕ್ರಿಮಿ ನಾಶಕ ಔಷಧ ಸಿಂಪರಣೆ ಮಾಡಲಾಯಿತು    

ಕೆಂಭಾವಿ: ಎತ್ತಿನ ಬಂಡಿ ಹೋಗಿ ಸೈಕಲ್ ಬಂತು, ಸೈಕಲ್ ಹೋಗಿ ಬೈಕ್‌ ಬಂತು, ಬೈಕ್ ಹೋಗಿ ಟ್ರ್ಯಾಕ್ಟರ್‌ ಬಂತು, ಈಗ ಟ್ರ್ಯಾಕ್ಟರೂ ಹೋಗಿ ಡ್ರೋನ್ ಬಂದಿದೆ.

ಕಾಲಕ್ಕೆ ತಕ್ಕಂತೆ ಎಲ್ಲ ಕ್ಷೇತ್ರಗಳೂ ಆಧುನಿಕತೆಗೆ ತೆರೆದುಕೊಳ್ಳುತ್ತಿವೆ. ಇದಕ್ಕೆ ಕೃಷಿ ಕ್ಷೇತ್ರವೂ ಹೊರತಾಗಿಲ್ಲ. ಈಗ ಡ್ರೋನ್ ಮೂಲಕ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪರಣೆ ಮಾಡಿ ರೈತ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾನೆ.

ಈ ವರ್ಷ ಸಮೃದ್ಧ ಮಳೆಯಾಗಿದ್ದರಿಂದ ರೈತರು ಬಂಪರ್‌ ತೊಗರಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ ಬಂದಿದ್ದರಿಂದ ತೊಗರಿ ಬೆಳೆ ಮನುಷ್ಯನ ಎತ್ತರಕ್ಕೂ ಮೀರಿ ಬೆಳೆದು ನಿಂತಿದ್ದು ಕ್ರಿಮಿನಾಶಕ ಔಷಧ ಸಿಂಪರಣೆ ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿತ್ತು. ಔಷಧ ಸಿಂಪರಣೆ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು ಸಣ್ಣ ಚಕ್ರದ ಟ್ರ್ಯಾಕ್ಟರ್ ಮೂಲಕ ಹಲವು ರೈತರು ಔಷಧ ಸಿಂಪರಣೆ ಮಾಡಿದ್ದಾರೆ.

ADVERTISEMENT

ಆದರೆ ಬೆಳೆಗಳ ಸಾಲಿನಲ್ಲಿ ಟ್ರ್ಯಾಕ್ಟರ್‌ ಓಡಾಡುವುದರಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಕಂಡುಕೊಂಡ ಕೆಲ ರೈತರು ಅತಿ ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ನೀರು ಮತ್ತು ಕಡಿಮೆ ಅವಧಿಯಲ್ಲಿ ಡ್ರೋನ್ ಯಂತ್ರದ ಮೂಲಕ ಔಷಧ ಸಿಂಪರಣೆ ಮಾಡಿ ಆಧುನಿಕ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಒಂದು ಎಕರೆಗೆ ಕೇವಲ 10 ಲೀಟರ್ ನೀರಿನಲ್ಲಿ ಈ ಡ್ರೋನ್ ಔಷಧ ಸಿಂಪರಣೆ ಮಾಡುತ್ತದೆ. ಎಕರೆಗೆ ₹400 ವೆಚ್ಚ ತಗಲುವ ಈ ಆಧುನಿಕತೆಯ ಔಷಧ ಸಿಂಪರಣೆ ಮಾರ್ಗ ಹಲವಾರು ರೈತರಿಗೆ ವರದಾನವಾಗಿದೆ.

ಆರು ಎಕರೆ ಪ್ರದೇಶದ ತೊಗರಿ ಬೆಳೆಗಳಿಗೆ ಕೇವಲ 6 ಲೀಟರ್ ನೀರಿನಲ್ಲಿ ಮತ್ತು ಕಡಿಮೆ ಸಮಯದಲ್ಲಿ ಡ್ರೋನ್ ಸಹಾಯದಿಂದ ಕ್ರಿಮಿನಾಶಕ ಸಿಂಪರಣೆ ಮಾಡಲಾಗಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು ರೈತರಿಗೆ ಕಡಿಮೆ ಖರ್ಚಿನಲ್ಲಿ ಕೆಲಸ ಪೂರ್ಣಗೊಳ್ಳುವುದು ಮತ್ತು ಕಾರ್ಮಿಕರ ಕೊರತೆ ನೀಗಿಸುವುದು
ಡಾ.ಕಿರಣ ಜಕರೆಡ್ಡಿ ವೈದ್ಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.