ಯಾದಗಿರಿ ನಗರದಲ್ಲಿ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಾಹನದಲ್ಲಿ ಗೋಶಾಲೆಗೆ ಸಾಗಿಸಲಾಯಿತು
ಯಾದಗಿರಿ: ರಸ್ತೆ ಉದ್ದಕ್ಕೂ ಓಡಾಡಿ, ಎಲ್ಲೆಂದರಲ್ಲಿ ನಿಂತು ವಾಹನ ಸಂಚಾರಿಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿ, ರಸ್ತೆ ಅಪಘಾತಗಳಿಗೂ ಕಾರಣ ಆಗುತ್ತಿದ್ದ ಬಿಡಾಡಿ ದನಗಳನ್ನು ಕಾರ್ಯಾಚರಣೆ ನಡೆಸಿ ಅವುಗಳನ್ನು ಗೋಶಾಲೆಗೆ ಸಾಗಿಸಲಾಯಿತು.
ನಗರದ ರಸ್ತೆಗಳಲ್ಲಿ ನಿಂತು, ಮಲಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವು. ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಅವರ ನೇತೃತ್ವದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿ, ನೆರೆಯ ರಾಯಚೂರು ಹೊರವಲಯದ ಆಲೂರ ಸಮೀಪದ ಜ್ಯೋರ್ತಿಲಿಂಗೇಶ್ವರ ಗೋಶಾಲೆಯಲ್ಲಿ ಬಿಟ್ಟು ಬರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇತಾಜಿ ವೃತ್ತ, ಶಾಸ್ತ್ರಿ ವೃತ್ತ, ಗಂಜ್ ಸರ್ಕಲ್, ಮೈಲಾಪುರ ಅಗಸಿ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಗಾಂಧಿ ಚೌಕ್, ರಾಯಚೂರು ರಸ್ತೆ, ಸೇಡಂ ರಸ್ತೆ ಸೇರಿದಂತೆ ಹಲವು ಕಡೆಗಳ ರಸ್ತೆಗಳಲ್ಲಿ ಗುಂಪು–ಗುಂಪಾಗಿ ಬಿಡಾಡಿ ದನಗಳು ನಿಲ್ಲುತ್ತಿವೆ. ಆ ಮೂಲಕ ಜನರ ಸಂಚಾರಕ್ಕೆ ತೊಂದರೆ ನೀಡುತ್ತಿವೆ ಎಂದಿದ್ದಾರೆ.
ಬಸ್ ನಿಲ್ದಾಣಗಳಲ್ಲಿ ರಾತ್ರಿ ಮಲಗಿ ನಿಲ್ದಾಣದ ಆವರಣವನ್ನು ಗಲೀಜು ಮಾಡುತ್ತಿವೆ. ಈ ಬಗ್ಗೆ ಜನರಿಂದ ಸಾಕಷ್ಟು ದೂರುಗಳ ಬರುತ್ತಿರುವುದರಿಂದ ನಗರಸಭೆ, ಪಶು ಸಂಗೋಪನಾ ಇಲಾಖೆ, ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆ ನಡೆಸಿ 22 ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಬಿಟ್ಟು ಬರಲಾಗಿದೆ ಎಂದು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಪಿಐ ಮಹಮದ್ ಮುಸ್ತಾಕ್, ಪರಿಸರ ಎಂಜಿನಿಯರ್ ಪ್ರಶಾಂತ, ಆರೋಗ್ಯ ನಿರೀಕ್ಷಕರಾದ ಶಿವಪುತ್ರ, ಸಿದ್ದಾರ್ಥ, ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.