ADVERTISEMENT

ಸಬ್ಸಿಡಿ ಅನುದಾನ ಕಡಿತ: ಆಕ್ರೋಶ

ಅನ್ಯಾಯ ಸರಿಪಡಿಸದಿದ್ದರೆ ಶಾಸಕರ ಮನೆ ಮುಂದೆ ಪ್ರತಿಭಟನೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 16:06 IST
Last Updated 23 ಆಗಸ್ಟ್ 2020, 16:06 IST
ಅನುದಾನ ಕಡಿತಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದಿಂದ ಶುಕ್ರವಾರ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು
ಅನುದಾನ ಕಡಿತಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದಿಂದ ಶುಕ್ರವಾರ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿನಿಗಮದ ಅಡಿಯಲ್ಲಿ ನೀಡಲಾಗುವ ವಿವಿಧ ಉದ್ಯಮಶೀಲತಾ ಯೋಜನೆಯ ಸಬ್ಸಿಡಿ ಅನುದಾನ ಕಡಿತಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು, ಸರ್ಕಾರ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತಿದ್ದ ಫಲಾನುಭವಿಗಳ ಸಬ್ಸಿಡಿ ಮೊತ್ತವನ್ನು ಐದು ಲಕ್ಷದಿಂದ ಒಂದು ಲಕ್ಷದವರೆಗೆ ಇಳಿಕೆ ಮಾಡಿರುವುದು ಫಲಾನುಭವಿಗಳಿಗೆ ಅನ್ಯಾಯವಾಗಿದ್ದು, ಇದನ್ನು ಕೂಡಲೇ ಕೈಬಿಟ್ಟು ಎಂದಿನಂತೆ ಸಬ್ಸಿಡಿ ನೀಡಬೇಕು. ಸಬ್ಸಿಡಿ ಕಡಿತಗೊಳಿಸಬಾರದು ಎಂದು ಆಗ್ರಹಿಸಿದರು.

ಸರ್ಕಾರದ ನಿಲುವು ಖಂಡಿಸಿ ಜನಪ್ರತಿನಿಧಿಗಳು, ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದುಎಚ್ಚರಿಸಿದದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಇದೇ ತಿಂಗಳ ಆಗಸ್ಟ್‌ 24 ರಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ನಿವಾಸದ ಮುಂದೆ, ಆ. 26 ರಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಮನೆ ಮುಂದೆ, ಆ.28 ರಂದು ಸುರಪುರ ಶಾಸಕ ರಾಜೂಗೌಡ ಮನೆ ಮುಂದೆ ಹಾಗೂ ಆ.31 ರಂದು ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ADVERTISEMENT

ಕೂಡಲೇ ಸರ್ಕಾರ ಈ ಕ್ರಮ ಕೈಬಿಟ್ಟು ಎಂದಿನಂತೆ ಸಬ್ಸಿಡಿ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಈ ವೇಳೆ ತಿಪ್ಪಣ್ಣ ಲಂಡನಕರ್, ಜಟ್ಟೆಪ್ಪ ನಾಗರಾಳ, ಚಂದ್ರಕಾಂತ ಹಂಪಿನ, ದೇವೀಂದ್ರಪ್ಪ ಮೈಲಾಪುರ, ಮಲ್ಲಪ್ಪ ಅರಿಕೇರಿ, ಮಲ್ಲಿಕಾರ್ಜುನ ಬಸಂತಪುರ, ಬಸವರಾಜ ಗೋನಾಲ, ರಮೇಶ ಹುಂಡೇಕಲ್, ಮಾನಪ್ಪ ಬಿಜಾಸ್ಪುರ, ಮಹೇಶ ಸುಂಗಲ್ಕರ್, ಭೀಮಣ್ಣ ಕ್ಯಾತನಾಳ, ಹಣಮಂತ ದೊರಿ, ಮಲ್ಲಿಕಾರ್ಜುನ ಉಕ್ಕಿನಾಳ, ಖಾಜಾ ಪಟೇಲ, ಮಲ್ಲಿಕಾರ್ಜುನ ಆಶನಾಳ, ಮಲ್ಲಿಕಾರ್ಜುನ ಮಳ್ಳಳ್ಳಿ, ಗೌತಮ ಕ್ರಾಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.