ADVERTISEMENT

ಪ್ರಿಯಾಂಕ್ ಖರ್ಗೆ ಜತೆಗೆ ನಿಲ್ಲುತ್ತೇವೆ: ದಲಿತ ಸಂಘರ್ಷ ಸಮಿತಿ

ಸಚಿವರಿಗೆ ಜೀವಬೆದರಿಕೆ ಖಂಡಸಿ ದಸಂಸ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 7:33 IST
Last Updated 24 ಅಕ್ಟೋಬರ್ 2025, 7:33 IST
ಯಾದಗಿರಿ ನಗರದ ನೇತಾಜಿ ಸುಭಾಷ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಯಾದಗಿರಿ ನಗರದ ನೇತಾಜಿ ಸುಭಾಷ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.   

ಯಾದಗಿರಿ: ‘ಸಚಿವ ಪ್ರಿಯಾಂಕ್ ಖರ್ಗೆಯವರು ಬುದ್ಧ, ಬಸವ, ಅಂಬೇಡ್ಕರ್ ತತ್ವ-ಸಿದ್ಧಾಂತಗಳಲ್ಲಿ ಅಚಲ ನಂಬಿಕೆಯಿಟ್ಟ ರಾಜಕೀಯ ನಾಯಕ. ಅವರಿಗೆ ಆರ್.ಎಸ್.ಎಸ್. ಕಾರ್ಯಕರ್ತರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು ಖಂಡನೀಯ. ಸಚಿವ ಪ್ರಿಯಾಂಕ್ ಖರ್ಗೆ ಜತೆಗೆ ನಿಲ್ಲುತ್ತವೆ’ ಎನ್ನುವ ಫ್ಲೆಕ್ಸ್ ಹಿಡಿದು ಗುರುವಾರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಸುಭಾಷ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಜಾತಿ, ವರ್ಗ, ಶೋಷಣೆ ರಹಿತ ಸಮಾಜಕ್ಕಾಗಿ ಶ್ರಮಿಸುತ್ತಿರುವ ಪ್ರಿಯಾಂಕ್ ಖರ್ಗೆಯವರನ್ನು ಕಂಡರೆ ಜಾತಿವಾದಿಗಳಿಗೆ ಸಹಿಸಲಾಗುತ್ತಿಲ್ಲ. ಬೆದರಿಕೆ ಕರೆ ಮಾಡಿದ್ದ ದಿನೇಶ ನರೋಣಿಗೆ ಶೀಘ್ರ ಶಿಕ್ಷೆಯಾಗಲಿ, ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಮತ್ತು ಖರ್ಗೆ ಕುಟುಂಬಕ್ಕೆ ‘ಝೆಡ್’ ಶ್ರೇಣಿ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ಮನುವಾದಿ ಆರ್‌ಎಸ್‌ಎಸ್ ಶತಮಾನೋತ್ಸವದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಕೋಲು ಹಿಡಿದು ಪಥಸಂಚಲನ ಮಾಡುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ವಿಷಬೀಜ ಬಿತ್ತುತ್ತಿದ್ದಾರೆ. ಅದನ್ನು ವಿರೋಧಿಸಿ, ಸಿಎಂ ಅವರಿಗೆ ಸರ್ಕಾರಿ ಸ್ಥಳಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆ ನಿಲ್ಲಿಸಲು ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಆದರೆ, ಆರ್.ಎಸ್.ಎಸ್.ನವರು ಅದನ್ನು ತಪ್ಪಾಗಿ ತಿಳಿದು, ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ADVERTISEMENT

ರಾಜ್ಯದ ಮನುವಾದಿಗಳು, ಆರ್.ಎಸ್.ಎಸ್.ನವರು ಪ್ರಿಯಾಂಕ್ ಖರ್ಗೆಯವರಿಗೆ ನಿರಂತರ ಕರೆ ಮಾಡಿ, ನಿಮ್ಮ ಪತ್ರದಿಂದ ರಾಜ್ಯದಲ್ಲಿ ದಂಗೆ ಏಳುತ್ತದೆ ಎಂದಿದ್ದಾರೆ. ಮಹಾರಾಷ್ಟ್ರದಿಂದ ಕರೆ ಮಾಡಿದವರು ಪ್ರಿಯಾಂಕ್ ಖರ್ಗೆಯವರಿಗೆ ಮಾನಸಿಕ ಹಿಂಸೆ, ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ ಎಂದು ಪ್ರತಿಭಟನ ನಿರತರು ಆರೋಪಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಸಮಿತಿಯ ಮಾನಪ್ಪ ಕಟ್ಟಿಮನಿ, ಮರೆಪ್ಪ ಚಟ್ಟೇರಕರ್, ಹೊನ್ನಪ್ಪ ನಾಟೇಕರ, ಭೀಮರಾಯ ಹೊಸಮನಿ, ಪರಶುರಾಮ ಒಡೆಯರ, ಸೈದಪ್ಪ ಕೊಲೂರು, ಬಾಲರಾಜ ಖಾನಾಪುರ, ಪ್ರಭು ಬುಕ್ಕಲ್, ರಾಯಪ್ಪ ಸಾಲಿಮನಿ, ಮಹಾದೇವ ದಿಗ್ಗಿ, ಭೀಮಾಶಂಕರ ಯರಗೋಳ, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ ಉಪಸ್ಥಿತರಿದ್ದರು.

ಆರ್‌ಎಸ್‌ಎಸ್ ಪಥಸಂಚಲನ ನಡೆಸಿದರೆ ನಾವೂ ನಡೆಸಲು ಸಿದ್ಧ. ಅವರು ನ್ಯಾಯಾಲಯದಲ್ಲಿ ಅನುಮತಿ ಕೇಳಿದ್ದಾರೆ. ಅವರಿಗೆ ಅನುಮತಿ ನೀಡಿದರೆ ನಮಗೂ ನೀಡಲಿದೆ. ಜಾತಿ-ಧರ್ಮದ ಹೆಸರಲ್ಲಿ ದೇಶ ವಿಭಜನೆ ಬೇಡ
ಜಾನಪ್ರಕಾಶ ಸ್ವಾಮೀಜಿ ಉರಿಲಿಂಗಪೆದ್ದಿ ಮಠ

ಚಿತ್ತಾಪುರವೇ ಟಾರ್ಗೆಟ್ ಯಾಕೆ?

ಆರ್.ಎಸ್.ಎಸ್.ನವರು ಚಿತ್ತಾಪುರ ನಗರವನ್ನೇ ಟಾರ್ಗೆಟ್ ಮಾಡಿದೆ ಏಕೆ? ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು. ಗುರುವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಜರುಗಿದ ಪ್ರತಿಭಟನೆಯ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಂವಿಧಾನ ಬಾಹಿರವಾದ ಪ್ರತಿಯೊಂದೂ ನಿಷೇಧಿಸಬೇಕು. ಯಾವ ಪಕ್ಷವನ್ನು ತೆಗೆದುಕೊಂಡರೇನು? ಬಡವರ ಬದುಕು ಬೀದಿಪಾಲಾಗಿದೆ. ನಮಗೆ ದೇಶವೇ ಮುಖ್ಯವಾಗಬೇಕು ಧರ್ಮ ಮನೆಯಲ್ಲಿರಲಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.