ADVERTISEMENT

ಸುರಪುರ: ಲಾಕ್‍ಡೌನ್ ಪರಿಣಾಮದಿಂದ ಬಾಡುತ್ತಿದೆ ಹೂವು ಬೆಳೆಗಾರರ ಬದುಕು

ಅಶೋಕ ಸಾಲವಾಡಗಿ
Published 24 ಮೇ 2021, 19:30 IST
Last Updated 24 ಮೇ 2021, 19:30 IST
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದ ಕುಮಾರ ಹೂಗಾರ ಹೊಲದಲ್ಲಿ ಬೆಳೆದಿರುವ ಹೂವಿಗೆ ಗ್ರಾಹಕರು ಇಲ್ಲದಂತಾಗಿದೆ
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದ ಕುಮಾರ ಹೂಗಾರ ಹೊಲದಲ್ಲಿ ಬೆಳೆದಿರುವ ಹೂವಿಗೆ ಗ್ರಾಹಕರು ಇಲ್ಲದಂತಾಗಿದೆ   

ಸುರಪುರ: ಕೊರೊನಾ ಸೋಂಕನ್ನು ನಿಯಂತ್ರಿಸಲು ವಿಧಿಸಿರುವ ಲಾಕ್‍ಡೌನ್ ಕಾರಣದಿಂದ ಹೂವು ಬೇಸಾಯಗಾರರ ಬದುಕು ಹೂವಿನೊಂದಿಗೆ ಬಾಡುವಂತೆ ಆಗಿದೆ. ಈ ಕೃಷಿಯನ್ನೇ ನಂಬಿಕೊಂಡಿರುವ ರೈತರ ಬದುಕು ಬೀದಿಗೆ ಬಿದ್ದಿದೆ. ಹೊಲದಲ್ಲೆ ಹೂ ಬಾಡಿ ಹೋಗುತ್ತಿವೆ.

ತಾಲ್ಲೂಕಿನಲ್ಲಿ ಹೆಚ್ಚಾಗಿ ಹೂಗಾರ ಸಮಾಜದವರು ಪುಷ್ಪ ಕೃಷಿ ಮಾಡುತ್ತಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ಇತರ ಜಾತಿಯವರು ಹೂ ಬೇಸಾಯ ನೆಚ್ಚಿಕೊಂಡಿದ್ದಾರೆ. ಹೂಗಾರ ಸಮಾಜದ ಇತರರು ಹೂ ಮಾರಾಟ ಮಾಡಿ ಸಂಸಾರದ ಬಂಡಿ ತೂಗಿಸುತ್ತಾರೆ. ಇವರೆಲ್ಲರಿಗೂ ಲಾಕ್‍ಡೌನ್ ಕಳೆದ ವರ್ಷದಂತೆ ಈ ಸಲವೂ ಬೆಂಬಿಡದೆ ಕಾಡುತ್ತಿದೆ.

ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳ ರೈತರು ಪುಷ್ಪ ಕೃಷಿ ನಡೆಸುತ್ತಿದ್ದಾರೆ. ಅಂದಾಜು 150ಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಪುಷ್ಪ ಬೆಳೆಯಲಾಗುತ್ತಿದೆ. ಸೂಜಿ ಮಲ್ಲಿಗೆ, ಸಾದಾ ಮಲ್ಲಿಗೆ, ನಾಗಸಂಪಿಗೆ, ದುಂಡು ಮಲ್ಲಿಗೆ, ಕನಕಾಂಬರಿ, ಸೇವಂತಿಗೆ, ಚೆಂಡು ಹೂಗಳನ್ನು ಈ ಭಾಗದಲ್ಲಿ ಬೆಳೆಯುತ್ತಾರೆ.

ADVERTISEMENT

ಹೂವು ಬೇಸಾಯ ವರ್ಷಕ್ಕೆ ಮೂರು ತಿಂಗಳು ಭರ್ಜರಿಯಾಗಿರುತ್ತದೆ. ಉಳಿದ ತಿಂಗಳು ಅಷ್ಟಕಷ್ಟೆ. ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ಮದುವೆ, ಶುಭ ಸಮಾರಂಭಗಳಿರುವುದರಿಂದ ಕೃಷಿ ವ್ಯಾಪಾರ ಜೋರಾಗಿರುತ್ತದೆ. ಈ ಸಮಯದಲ್ಲಿ ಹೂ ಇಳುವರಿಯೂ ಚೆನ್ನಾಗಿ ಬರುತ್ತದೆ. ಆದರೆ ಕಳೆದ ವರ್ಷದಿಂದ ಇದೇ ಸಮಯದಲ್ಲಿ ಲಾಕ್‍ಡೌನ್ ಆಗುತ್ತಿರುವುದರಿಂದ ಹೂ ಬೆಳೆಗಾರರು ಭ್ರಮನಿರಸನಗೊಂಡಿದ್ದಾರೆ.

ಹೂ ಮಾರಾಟಗಾರರ ಬದುಕು ಇದಕ್ಕಿಂತ ಭಿನ್ನವಾಗಿಲ್ಲ. ಕೃಷಿ ಬೆಳೆಗಾರರಲ್ಲಿ ಹೂ ಖರೀದಿಸಿ ಮನೆ ಮನೆಗೆ ತಿರುಗಿ ಮಾರಾಟ ಮಾಡುವ ಹೂ ಮಾರಾಟಗಾರರಿಗೆ ಲಾಕ್‍ಡೌನ್‍ನಿಂದ ತಿರುಗಾಡದಂತಾಗಿದೆ. ಅಂಗಡಿ ಇಟ್ಟು ಹೂ ಮಾರುವ ವ್ಯಾಪಾರಸ್ಥರಿಗೂ ಅವಕಾಶ ನೀಡದಿರುವುದು ಹೂ ನಂಬಿಕೊಂಡಿರುವವರ ಜೀವನ ಚಿಂತಾಜನಕವಾಗಿದೆ.

ಸೀಸನ್ ಸಮಯದಲ್ಲಿ ಒಂದು ಎಕರೆಗೆ ಅಂದಾಜು ತಿಂಗಳಿಗೆ 300 ಕೆ.ಜಿ ವರೆಗೂ ಹೂ ಬರುತ್ತದೆ. ಸದ್ಯ ಕೆ.ಜಿಗೆ ₹ 300 ಬೆಲೆ ಇದೆ. ₹ 90 ಸಾವಿರ ಹಣ ದೊರೆಯುತ್ತದೆ. ಅದರಲ್ಲಿ ₹ 50 ಸಾವಿರ ಖರ್ಚು ತೆಗೆದು ₹ 40 ಸಾವಿರ ಲಾಭ ಉಳಿಯುತ್ತಿತ್ತು ಎಂದು ವಿವರಿಸುತ್ತಾರೆ ರೈತರು. ಇದು ಕೇವಲ ಮೂರು ತಿಂಗಳಿಗೆ ಮಾತ್ರ. ಉಳಿದ ತಿಂಗಳು ಬಂದ ಹಣ ಖರ್ಚಿಗೆ ಸಮನಾಗುತ್ತದೆ ಎನ್ನುತ್ತಾರೆ.

ಹೂ ಮಾರಾಟಗಾರರು ಒಂದು ಕೆ.ಜಿ ಹೂವಿಂದ 80 ಮೊಳ ಹೂ ಕಟ್ಟುತ್ತಾರೆ. ₹800 ಸಂಗ್ರಹವಾಗುತ್ತದೆ. ₹ 300 ಕೆ.ಜಿ ಹೂವಿಗೆ ಕೊಟ್ಟರೆ ₹ 500 ಲಾಭವಾಗುತ್ತದೆ. ಮಾರಾಟಗಾರರ ಈ ದಿನದ ಆದಾಯ ಈಗ ಕೈಸೇರುತ್ತಿಲ್ಲ.

ಬಹುತೇಕ ರೈತರು ಹೊಲದಲ್ಲಿನ ಹೂವನ್ನೆ ಬಿಡಿಸುತ್ತಿಲ್ಲ. ಇದರಿಂದ ಹೂವುಗಳು ಗಿಡದಲ್ಲೆ ಬಾಡುತ್ತಿವೆ. ಇನ್ನು ಕೆಲ ರೈತರು ಹೂಗಿಡಗಳನ್ನು ತೆಗೆದು ಹಾಕಿದ್ದಾರೆ. ಪುಷ್ಪ ಕೃಷಿಯೇ ಸಾಕಾಗಿದೆ. ಮುಂದಿನ ಬಾರಿ ಬೇರೆ ಕೃಷಿ ಮಾಡೋಣ ಎಂದು ಯೋಚಿಸುತ್ತಿದ್ದಾರೆ.

ಕಡಿಮೆ ಸಹಾಯಧನ: ಕಳೆದ ವರ್ಷ ಪುಷ್ಪ ಕೃಷಿ ರೈತರಿಗೆ ಪ್ರತಿ ಹೆಕ್ಟೆರ್‌ಗೆ ₹25 ಸಾವಿರ ಸಹಾಯಧನವನ್ನು ಸರ್ಕಾರ ನೀಡಿತ್ತು. ಆದರೆ ಈ ಸಲ ಕೇವಲ ₹10 ಸಾವಿರ ಘೋಷಿಸಿದೆ. ಸರ್ಕಾರದ ಈ ನೀತಿ ಪುಷ್ಪ ಕೃಷಿಕರನ್ನು
ಹೈರಾಣಾಗಿಸಿದೆ.

***

ಸರ್ಕಾರ ಪುಷ್ಪ ಬೇಸಾಯಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹ 50 ಸಾವಿರ ಸಹಾಯಧನ ನೀಡಬೇಕು. ಹೂವನ್ನೆ ಅವಲಂಬಿಸಿರುವವರ ಬದುಕು ಕಷ್ಟದಲ್ಲಿದೆ
ಕುಮಾರ ಹೂಗಾರ, ಪುಷ್ಪ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.