ADVERTISEMENT

ಸುರಪುರ: ದಲಿತ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 15:38 IST
Last Updated 5 ಸೆಪ್ಟೆಂಬರ್ 2020, 15:38 IST
ಸುರಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ದಲಿತ ಸಂಘಟನೆ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು
ಸುರಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ದಲಿತ ಸಂಘಟನೆ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು   

ಸುರಪುರ: ತಾಲ್ಲೂಕಿನ ಅರಕೇರಾ ಜೆ. ಗ್ರಾಮದಲ್ಲಿ ಪಂಚಾಯಿತಿಯವರು ಕೆಲ ದಲಿತ ಕುಟುಂಬಗಳಿಗೆ ಕಟ್ಟಡ ಪರವಾನಗಿ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆ ಕ್ರಾಂತಿಕಾರಿ ಬಣದ ಕಾರ್ಯಕರ್ತರು ಶನಿವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಿದರು.

ಸಮಿತಿ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಗ್ರಾಮದ ಹಲವರು ನಿವೇಶನ ಖರೀದಿಸಿದ್ದಾರೆ. ಅದರಲ್ಲಿ 20 ಜನ ದಲಿತರೂ ಇದ್ದಾರೆ. ಆಸ್ತಿ ವರ್ಗಾವಣೆಯೊಂದಿಗೆ ಎಲ್ಲಾ ದಾಖಲೆಗಳಿದ್ದು ಇಲ್ಲಿಯವರೆಗೂ ನಿವೇಶನದ ಕರ ಕಟ್ಟಿದ್ದಾರೆ. ಈಗ ಮನೆ ಕಟ್ಟಿಕೊಳ್ಳಲು ಪರವಾನಗಿ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಗ್ರಾಮದ ಕೆಲ ರಾಜಕೀಯ ಪುಢಾರಿಗಳ ಪಿತೂರಿಯಿಂದ ಪಿಡಿಒ ಮತ್ತು ಕಾರ್ಯದರ್ಶಿ ದಲಿತ ಕುಟುಂಬಗಳಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದು, ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕೂಡಲೇಕಟ್ಟಡ ಪರವಾನಗಿ ನೀಡಬೇಕು. ಪಿಡಿಒ ಮತ್ತು ಕಾರ್ಯದರ್ಶಿ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಸೆ.10ರಂದು ತಾಲ್ಲೂಕು ಪಂಚಾಯಿತಿ ಕಚೇರಿ ಮತ್ತು ಅರಕೇರಾ ಜೆ. ಗ್ರಾಮ ಪಂಚಾಯಿತಿ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ವೆಂಕೋಬ ಬಾಕಲಿ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಸಮಿತಿ ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಜಟ್ಟೆಪ್ಪ ನಾಗರಾಳ, ಮರಿಲಿಂಗಪ್ಪ ಹುಣಸಿಹೊಳೆ, ಮಹೇಶ ಯಾದಗಿರಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.