ಸುರಪುರ: ‘ಸಮೀಪದ ರಂಗಂಪೇಟೆಯ ತಕ್ಷಶಿಲಾ ಇಂಟರ್‌ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲ್ಲಿ ಜನವರಿ 11ರಂದು ಸಂಜೆ 5 ಗಂಟೆಗೆ ಪ್ರಥಮ ವರ್ಷದ ತಕ್ಷ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷೆ ಅಂಬಿಕಾ ಯನಗುಂಟಿ ಹೇಳಿದರು.
ನಗರದಲ್ಲಿ ಮಂಗಳವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸುರಪುರದ ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ಅವರು ಉದ್ಘಾಟಿಸುವರು. ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರು ಸಾನಿಧ್ಯ ವಹಿಸುವರು. ಶಾಸಕ ರಾಜಾ ವೇಣುಗೋಪಾಲ ನಾಯಕ, ಶಿಕ್ಷಣ ತಜ್ಞ ಗುರುರಾಜ ಕರಜಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಡಿವೈಎಸ್‍ಪಿ ಜಾವೇದ್ ಇನಾಮದಾರ್, ಎಸಿಟಿ ಸಂಸ್ಥೆಯ ಎನ್.ಎಂ.ಪಾಟೀಲ, ಡಿಡಿಪಿಐ ಚನ್ನಬಸಪ್ಪ ಮುಧೋಳ, ತಹಶೀಲ್ದಾರ್ ಎಚ್.ಎ.ಸರಕವಾಸ್, ಡಾ.ಸುದತ್ ದರ್ಶನಾಪುರ, ಟಿಎಚ್‍ಓ ಡಾ.ಆರ್.ವಿ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು’ ಎಂದು ಎಂದು ತಿಳಿಸಿದರು.
‘ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕಲಿ ಎಂಬ ಸದುದ್ದೇಶದಿಂದ ನಮ್ಮ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ಇಲ್ಲಿಯ ಮಕ್ಕಳು ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕಾಗಿತ್ತು. ಆ ಕೊರತೆಯನ್ನು ನಮ್ಮ ಸಂಸ್ಥೆ ನೀಗಿಸಿದೆ. 220 ವಿದ್ಯಾರ್ಥಿಗಳ ಅಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಮೊದಲ ವರ್ಷ ರಾಜ್ಯಪಠ್ಯಕ್ರಮವಾಗಿದ್ದು ಮುಂದಿನ ವರ್ಷ ಸಿಬಿಎಸ್‌ಸಿ ಪಠ್ಯಕ್ರಮ ಪ್ರಾರಂಭವಾಗಲಿದೆ’ ಎಂದರು.
ಪ್ರಾಚಾರ್ಯ ರಾಕೇಶ್ ನಾಯರ್ ಮಾತನಾಡಿ, ‘ಶಾಲೆಯ ಪ್ರಥಮ ವಾರ್ಷಿಕೋತ್ಸವ ಅದ್ಧೂರಿಯಾಗಿ ಆಯೋಜಿಸಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆ ಇರುತ್ತದೆ. ಶಿಕ್ಷಕರಾದ ನಾವು ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ತಕ್ಷ ಉತ್ಸವ ಇದಕ್ಕೆ ವೇದಿಕೆಯಾಗಲಿದೆ’ ಎಂದರು.
ಸಂಸ್ಥೆಯ ಕಾರ್ಯದರ್ಶಿ ಗೌರಿಶಂಕರ ಯನಗುಂಟಿ, ಪ್ರಮುಖರಾದ ಶಂಕರ ಬಡಿಗೇರ ಹಸನಾಪುರ, ಬಸವರಾಜ ದೋರನಹಳ್ಳಿ, ರಂಗಣ್ಣ ಪೂಜಾರಿ ದೇವಿಕೇರಾ, ರಂಗನಾಥ ಬಿರಾದಾರ್ ಕವಡಿಮಟ್ಟಿ, ರಾಜು ಎಂ.ಜಿ. ಗೋನಾಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.