ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ನಾಟಿ ಮಾಡುತ್ತಿರುವುದು ಒಂದಡೆಯಾದರೆ ಅಧಿಕ ನೀರು ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗಿರುವುದು ಇನ್ನೊಂದು ಕಡೆಯಾಗಿದೆ. ಜಿಲ್ಲೆಯ ಕೃಷಿ ಇಲಾಖೆಯಿಂದ 16 ಹೋಬಳಿಗಳಲ್ಲಿ 10,000 ಮಣ್ಣು ಪರೀಕ್ಷೆ ಮಾಡುವ ಗುರಿ ಹೊಂದಲಾಗಿದೆ.
ಯಾದಗಿರಿ–ಗುರುಮಠಕಲ್ ತಾಲ್ಲೂಕಿನ ಯಾದಗಿರಿ, ಹತ್ತಿಕುಣಿ, ಬಳಿಚಕ್ರ, ಸೈದಾಪುರ, ಗುರುಮಠಕಲ್, ಕೊಂಕಲ್, ಸುರಪುರ–ಹುಣಸಗಿ ತಾಲ್ಲೂಕಿನಲ್ಲಿ ಕಕ್ಕೇರಾ, ಕೆಂಭಾವಿ, ಸುರಪುರ, ಹುಣಸಗಿ, ಕೋಡೆಕಲ್, ಶಹಾಪುರ–ವಡಗೇರಾ ತಾಲ್ಲೂಕಿನಲ್ಲಿ ದೋರನಹಳ್ಳಿ, ಗೋಗಿ, ಶಹಾಪುರ, ಹೈಯಾಳ ಬಿ., ವಡಗೇರಾ ಪಟ್ಟಣದಲ್ಲಿ ಮಣ್ಣಿನ ಪರೀಕ್ಷೆ ಮಾಡಲಾಗುತ್ತಿದೆ.
ಶಹಾಪುರ ತಾಲ್ಲೂಕಿನಲ್ಲಿ 3,332, ಸುರಪುರ ತಾಲ್ಲೂಕಿನಲ್ಲಿ 3,332, ಯಾದಗಿರಿ ತಾಲ್ಲೂಕಿನಲ್ಲಿ 3,336 ಮಣ್ಣು ಪರೀಕ್ಷೆ ಗುರಿ ಇದೆ. 454 ಮಾತ್ರ ಇನ್ನೂ ಬಾಕಿ ಇದೆ.
‘ಶಹಾಪುರ ತಾಲ್ಲೂಕಿನಲ್ಲಿ ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಯಾದ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ಹಲವು ವರ್ಷದಿಂದ ಬೆಳೆಯುತ್ತಾ ಬರುತ್ತಿದ್ದಾರೆ. ಇದರಿಂದ ಭೂಮಿಯಲ್ಲಿ ಸತ್ವ ಕಡಿಮೆಯಾಗುವುದರ ಜತೆಗೆ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ರೈತರು ಪರ್ಯಾಯ ಬೆಳೆ ಬೆಳೆಯಬೇಕು‘ ಎಂದು ಸಲಹೆ ನೀಡುತ್ತಿದ್ದೇವೆ‘ ಎನ್ನುತ್ತಾರೆ ಶಹಾಪುರದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕೃಷಿ ವಿಜ್ಞಾನಿಗಳು.
'ಮಣ್ಣಿನ ಪರೀಕ್ಷೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಇಳಿಮುಖ, ಮಣ್ಣಿನ ರಚನೆಯ ಹಾಳಾಗುವಿಕೆ, ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕುಂಠಿತ, ಮಣ್ಣಿನ ಕೊಚ್ಚಣೆ, ಮಣ್ಣಿನ ಆಳ ಕಡಿಮೆ, ಮಣ್ಣಿನಲ್ಲಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಕಡಿಮೆ, ಚೌಳು ಮತ್ತು ಕ್ಷಾರ ಮಣ್ಣಾಗುವಿಕೆ ಮತ್ತು ಬಸಿಯುವಿಕೆ ಕಡಿಮೆಯಾಗುತ್ತದೆ. ಇದು ಮಣ್ಣಿನ ಮೇಲಾಗುತ್ತಿರುವ ದುಷ್ಪರಿಣಾಮ ಉಂಟಾಗುವ ಬಗ್ಗೆ ತಿಳಿದು ಬರಲಿದೆ’ ಎನ್ನುವುದು ವಿಜ್ಞಾನಿಗಳ ಮಾತಾಗಿದೆ.
ಹಲವಾರು ವರ್ಷದಿಂದ ಒಂದೇ ಬೆಳೆ ಪದ್ಧತಿಯನ್ನು ರೈತರು ಅನುಸರಿಸುತ್ತಿರುವುದರಿಂದ ಇಳುವರಿ ಕುಂಠಿತವಾಗಿದೆ. ಬೆಳೆಗಳಿಗೆ ಪೋಷಕಾಂಶಗಳನ್ನು ಬಳಸುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿ, ಅದರ ಫಲಿತಾಂಶ ಆಧರಿಸಿ ಬೆಳೆಗಳಿಗೆ ಪೋಷಕಾಂಶ ಬಳಸಬೇಕು. ಹೆಚ್ಚು ರಸಾಯನಿಕ ಬಳಕೆ ಮಾಡುವುದರಿಂದ ಬೆಳೆಗಳ ವೈವಿಧ್ಯತೆ ಕಡಿಮೆ, ಬೆಳೆಗಳ ಬರ ನಿರೋಧಕ ಶಕ್ತಿ ಕುಂಠಿತ, ಆರ್ಥಿಕ ಬೆಳೆಗಳು ಪೌಷ್ಟಿಕ ಬೆಳೆಗಳ ಸ್ಥಳ ಆಕ್ರಮಿಸುತ್ತಿರುವುದು, ಉಪಕಾರಿ ಕೀಟಗಳ ಸಂಖ್ಯೆ ಕಡಿಮೆ, ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ, ಒಂದೇ ಜಾತಿಯ ಕಳೆಗಳು ಮತ್ತು ನಿಯಂತ್ರಿಸಲು ಕಷ್ಟವಾದ ಕಳೆಗಳ ಉದ್ಬವವಾಗುತ್ತಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಉನ್ನತ ಮಟ್ಟದ ಕೃಷಿ ವಿಜ್ಞಾನಿಗಳ ನೇತೃತ್ವದಲ್ಲಿ ಸಮಿತಿ ಮಾಡಿ ಮಣ್ಣು ನೀರಿನ ಸದ್ಬಳಕೆ ಬೆಳೆ ಬದಲಾವಣೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ವಿಷದ ಭೂಮಿಯನ್ನು ಮಂದಿನ ಪೀಳಿಗೆಗಾಗಿ ಬಿಟ್ಟು ಹೋಗಬೇಕಾಗುಬಹುದು
-ಅಶೋಕ ಮಲ್ಲಾಬಾದಿಕಾರ್ಯದರ್ಶಿಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ
ಜಿಲ್ಲೆಯ 16 ಹೋಬಳಿಗಳಲ್ಲಿ ಮಣ್ಣು ಪರೀಕ್ಷೆ ಮಾಡುತ್ತಿದ್ದು ಜಿಲ್ಲೆಗೆ 10000 ಗುರಿ ಇದೆ. ಅದರಲ್ಲಿ ಇಲ್ಲಿಯವರೆಗೆ 9546 ಗುರಿ ತಲುಪಲಾಗಿದೆ. ಈ ಮೂಲಕ ರೈತರಿಗೆ ಮಣ್ಣಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ
-ರತೇಂದ್ರನಾಥ ಸೂಗೂರು ಜಂಟಿ ಕೃಷಿ ನಿರ್ದೇಶಕ
ವಿಶ್ವ ಮಣ್ಣು ದಿನಾಚರಣೆ: 2013 ರ ಡಿಸೆಂಬರ್ 5 ರಂದು ವಿಶ್ವಸಂಸ್ಥೆಯು ವಿಶ್ವ ಮಣ್ಣಿನ ದಿನಾಚರಣೆಗೆ ಸಮ್ಮತಿ ಸೂಚಿಸಿತು. 2014 ರಿಂದ ಡಿಸೆಂಬರ್ 5 ರಿಂದ ವಿಶ್ವ ಮಣ್ಣು ದಿನಾಚರಣೆ ಆಚರಿಸಲಾಗುತ್ತಿದೆ. ಮಣ್ಣಿನ ಆರೈಕೆ ಮಾಪನ ಮೇಲ್ವಿಚಾರಣೆ ಮತ್ತು ಮಣ್ಣಿನ ನಿರ್ವಹಣೆ ಎಂಬ ಧ್ಯೇಯದೊಂದಿಗೆ ದಿನಾಚರಣೆ ಆಚರಿಸಲಾಗುತ್ತಿದೆ. ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯದಲ್ಲಿ ಮಣ್ಣು ಪರೀಕ್ಷೆ ಗುರಿ ಹೆಚ್ಚಾಗಿದ್ದು ಸಂತೋಷದ ವಿಷಯ. ಬೆಳೆ ಬದಲಾವಣೆ ಬಗ್ಗೆ ಮಣ್ಣಿನ ಫಲವತ್ತತೆ ಬಗ್ಗೆ ಇನ್ನೂ ಹೆಚ್ಚಿನ ಜಾಗ್ರತೆಯನ್ನು ಕೃಷಿ ಇಲಾಖೆ ಕೃಷಿ ವಿಶ್ವ ವಿದ್ಯಾಲಯಗಳು ಹೆಚ್ಚು ಮುತುವರ್ಜಿ ವಹಿಸಬೇಕು ಎನ್ನುತ್ತಾರೆ ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ ಕಾರ್ಯದರ್ಶಿ ಅಶೋಕ ಮಲ್ಲಾಬಾದಿ. ‘ಈ ಭಾಗದಲ್ಲಿ ಬಿಟಿ ಹತ್ತಿ ಮೆಣಿಸಿನಕಾಯಿ ಬೆಳೆ ಭತ್ತ ಇವು ಮೂರೇ ಮೂರು ಬೆಳೆ ಬಿತ್ತುತ್ತಿರುವುದರಿಂದ ಫಲವತ್ತಾದ ಭೂಮಿಗೆ ಕೃಷಿ ಇಲಾಖೆ ಶಿಫಾರಸಿಗಿಂತ 10ಪಟ್ಟು ರಸಾಯನಿಕ ಗೊಬ್ಬರ ಕ್ರಿಮಿನಾಶಕ ಸಿಂಪರಣೆಯಿಂದ ಭೂಮಿಯು ಫಲವತ್ತತೆ ಕಳೆದುಕೂಂಡು ಬಿತ್ತಿದ ಬೆಳೆಯಲ್ಲಿ ಗಣನೀಯ ಪ್ರಮಾಣದ ಇಳುವರಿ ಕಡಿಮೆ ಮಾಡಿ ಕೊಂಡಿದ್ದೇವೆ. ಮತ್ತೆ ಯಥಾಸ್ಥಿತಿಗೆ ತರಬೇಕು’ ಎನ್ನುವ ಆಗ್ರಹ ಅವರದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.