ಯಾದಗಿರಿ: ಕನ್ನಡ ಸಾಹಿತ್ಯ ಲೋಕಕ್ಕೆ ದಲಿತ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಹೊಸಬರು ಬರಲಿ, ಅವರಲ್ಲಿರುವ ಸಾಹಿತ್ಯ ಪ್ರತಿಭೆ ಸಮಾಜಕ್ಕೆ ತಿಳಿಯಲಿ ಎಂಬ ಉದ್ದೇಶದಿಂದ ಇದನ್ನು ಹುಟ್ಟು ಹಾಕಲಾಗಿದೆ ಎಂದು ದಸಾಪ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೋಳಸಂಗಿ ಹೇಳಿದರು.
ಜಿಲ್ಲಾ ಕಸಾಪ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಳೆದ 31 ವರ್ಷಗಳಿಂದ ಶ್ರಮ ಸಂಸ್ಕೃತಿಯ ಆಧಾರದ ಮೇಲೆ ದಲಿತ ಸಾಹಿತಿಗಳನ್ನು ಗುರುತಿಸುವ ಕೆಲಸ ಮಾಡುತ್ತಿರುವ ರಾಜ್ಯ ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಪತ್ತಿನ ಪರ್ಯಾಯ ಅಲ್ಲ, ಬದಲಿಗೆ ಅದರ ಸಹಕಾರದೊಂದಿಗೆ ಕೆಲಸ ಮಾಡುವ ಕಾಯಕ ಸಂಘಟನೆ ಎಂದು ತಿಳಿಸಿದರು.
ಇಲ್ಲಿಯವರಿಗೂ 10 ಸಮ್ಮೇಳನಗಳನ್ನು ಮಾಡಲಾಗಿದೆ. ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೂ 31 ಘಟಕಗಳನ್ನು ಸ್ಥಾಪಿಸಲಾಗಿದೆ. ಮಹಿಳಾ ಘಟಕಗಳು ಇವೆ. ವಿದ್ಯಾರ್ಥಿಗಳ ಘಟಕಗಳು ಸ್ಥಾಪಿಸಲಾಗುತ್ತಿದೆ. ಈ ಎಲ್ಲ ಕೆಲಸಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರ ಬಹಳವಿದೆ ಎಂದು ಹೇಳಿದರು.
ಕಸಾಪದ ಹಿಂದಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮತ್ತು ಮನು ಬಳಗಾರ ಅವರು ದಲಿತ ಸಾಹಿತಿಗಳಿಗೆ ಮತ್ತು ದಲಿತ ಸಾಹಿತ್ಯಕ್ಕೆ ಮಾಡಿದ ಕೆಲಸಗಳನ್ನು ವಿವರಿಸಿ ಶ್ಲಾಘಿಸಿದರು. ಜಿಲ್ಲೆಯಲ್ಲಿ ಎಲ್ಲ ಸಹಕಾರದಿಂದ ಪರಿಷತ್ತನ್ನು ಬೆಳೆಸಿದ, ಇಲ್ಲಿನ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಸಹಕಾರ ಮನೋಭಾವನೆಯುಳ್ಳವರಾಗಿದ್ದಾರೆ. ಸಾಹಿತಿಗಳು ಧೈರ್ಯದಿಂದ ಬರೆಯಿರಿ. ಜ್ಞಾನ ಯಾರ ಸ್ವತ್ತಲ್ಲ ಎಂಬುವುದನ್ನು ಅರಿಯರಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ದಸಾಪ ತನ್ನ ಜಿಲ್ಲಾ ಘಟಕ ಆರಂಭಿಸಿದ್ದು ಒಳ್ಳೆಯದು. ಆದರೆ, ಆರಂಭಶೂರತ್ವ ಆಗದೇ ನಿರಂತರ ಕೆಲಸ ಮಾಡಲಿ, ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದರು.
ಜಿಲ್ಲಾಧ್ಯಕ್ಷ ಎಸ್.ಎಚ್.ಮುದ್ನಾಳ ಪ್ರಾಸ್ತಾವಿಕ ಮಾತನಾಡಿ ಜಿಲ್ಲೆಯಲ್ಲಿ ಎಲ್ಲರ ಸಹಕಾರದಿಂದ ಪರಿಷತ್ತ್ ಬೆಳೆಸಲಾಗುವುದೆಂದರು.
ಇದನ್ನೂ ಮುನ್ನ ಹಿರಿಯ ಕವಿ, ಸಾಹಿತಿ ದಿ. ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಜಿಲ್ಲಾ ಕಸಾಪ ಮತ್ತು ದಸಾಪ ಶ್ರದ್ಧಾಂಜಲಿ ಸಲ್ಲಿಸಿತು.
ಸಹ ಪ್ರಾಧ್ಯಾಪಕಿ ಶಿವಲಿಂಗಮ್ಮ, ಸಹಾಯಕ ಪ್ರಾಧ್ಯಾಪಕ ಉಮೇಶ ತೇಜಪ್ಪ ಮಾತನಾಡಿದರು. ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಭೀಮರಾಯ ಲಿಂಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೆಂಕಟೇಶ್ವರ ಕೊಲ್ಲಿ ನಿರೂಪಿಸಿದರು. ಮಲ್ಲಿಕಾರ್ಜುನ ಸಾಗರ ಪ್ರಾರ್ಥಿಸಿದರು. ಶಿವಶರಣಪ್ಪ ಮುದ್ನಾಳ ವಂದಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಸಿ.ಆರ್.ಕಂಬಾರ, ನರಸಪ್ಪ ಚಿತ್ತಾಪುರ, ಭೀಮಪ್ಪ ಭಂಡಾರಿ, ರಾಘವೆಂದ್ರ ದ್ರಾಕ್ಷಿ, ಶಾಂತಾ ಸೊಂಟಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.