ADVERTISEMENT

ಹುಣಸಗಿ: ಪ್ರಧಾನಿ ನಮೋ ಆಗಮನಕ್ಕೆ ಸಕಲ ಸಿದ್ದತೆ ಕೈಗೊಂಡ ಜಿಲ್ಲಾಡಳಿತ

ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ತಂಡದಿಂದ ಸ್ಥಳ ಪರಿಶೀಲನೆ, 3 ಹೆಲಿಪ್ಯಾಡ್‌ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 16:04 IST
Last Updated 16 ಜನವರಿ 2023, 16:04 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯದಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಕಾರ್ಯ ಭರದಿಂದ ನಡೆದಿರುವುದು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯದಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಕಾರ್ಯ ಭರದಿಂದ ನಡೆದಿರುವುದು   

ಯಾದಗಿರಿ/ ಹುಣಸಗಿ: ಜನವರಿ 19 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವೇದಿಕೆ ಸೇರಿದಂತೆ ಇತರ ವ್ಯವಸ್ಥೆಗಳ ತಯಾರಿ ಭರದಿಂದ ನಡೆದಿದೆ.

ತಾಲ್ಲೂಕಿನ ನಾರಾಯಣಪುರಕ್ಕೆ ಹೊಸ ಸ್ಕಾಡಾ ತಂತ್ರಜ್ಞಾನದ ಮೂಲಕ ಬಸವಸಾಗರ ಜಲಾಶಯದ ಕಾಲುವೆಯ ಗೇಟ್‌ಗಳನ್ನು ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವ ಯೋಜನೆಯ ಉದ್ಘಾಟನಾ ಹಾಗೂ ಇನ್ನಿತರ ಯೋಜನೆಗಳಿಗೆ ಅಡಿಗಲ್ಲು ಹಾಕಲು ಆಗಮಿಸಲಿದ್ದು, ಕೊಡೇಕಲ್ಲ ಹೊರವಲಯದ ಹುಣಸಗಿ–ನಾರಾಯಣಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಜಿಲ್ಲಾಡಳಿತ ವತಿಯಿಂದ ಬೃಹತ್ ವೇದಿಕೆ ಸಜ್ಜುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ತಂಡದವರು ಭದ್ರತಾ ದೃಷ್ಟಿಯಿಂದ ಸಭೆ ನಡೆಸಿ ಬಳಿಕ ವೇದಿಕೆ ಪರಿಶೀಲನೆ ನಡೆಸಿದರು.

ADVERTISEMENT

ವಿಶೇಷ ಭದ್ರತಾ ಸಿಬ್ಬಂದಿ ಜೊತೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಂದೋಬಸ್ತ್ ವ್ಯವಸ್ಥೆಗೆ ಸಿದ್ಧತೆ ಕುರಿತು ಸಭೆ ನಡೆಸಲಾಗುತ್ತಿದೆ.

ಕಾರ್ಯಕ್ರಮದ ಮುಖ್ಯ ವೇದಿಕೆ ಹೊಸ ತಂತ್ರಜ್ಞಾನದ ಚಪ್ಪರದಿಂದ ನಿರ್ಮಿಸುತ್ತಿದ್ದು, ಗಣ್ಯರು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೆ ಸೂಕ್ತ ಸೌಲಭ್ಯ ಹಾಗೂ ಸುರಕತ್ಷೆ ಒತ್ತು ನೀಡುವ ನಿಟ್ಟಿನಲ್ಲಿ ಅಗತ್ಯ ತಯಾರಿ ನಡೆಸಲಾಗುತ್ತಿದೆ.

ಈಗಾಗಲೇ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ತುರ್ತು ಆರೋಗ್ಯ ಚಿಕಿತ್ಸಾ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಎಸ್‌ಪಿಜಿ ಭದ್ರತೆ:

ಪ್ರಧಾನ ಮಂತ್ರಿಯವರು ಎಸ್‌ಪಿಜಿ ಭದ್ರತೆ ಹೊಂದಿದವರು. ಹಾಗಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಬರದಂತೆ ನೋಡಿಕೊಂಡು, ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗುತ್ತದೆ.

ಪ್ರಧಾನಿಗಳ ಸುರಕ್ಷಿತ ಮತ್ತು ಸುಲಲಿತ ಸಂಚಾರ, ಪ್ರತಿಯೊಬ್ಬ ಸಾರ್ವಜನಿಕರಿಗೂ ಅತೀ ಹತ್ತಿರದಿಂದ ವಾಹನದಿಂದ ಇಳಿದು ಸಭಾ ಕಾರ್ಯಕ್ರಮಕ್ಕೆ ಬರಲು ಅವಕಾಶ, ಕಾರ್ಯಕ್ರಮ ಮುಗಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪುವ ಹಿನ್ನೆಲೆಯಲ್ಲಿ ಸಂಚಾರ ನಿಷೇಧ, ಸಂಚಾರ ಬದಲಾವಣೆ, ಪಾರ್ಕಿಂಗ್‌ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳತ್ತಿದ್ದು, ಅದರಂತೆ ತುರ್ತು ಆರೋಗ್ಯ ಚಿಕಿತ್ಸಾ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಸುರಪುರ ಶಾಸಕ ರಾಜೂಗೌಡ (ನರಸಿಂಹ ನಾಯಕ), ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮರೇಶ ಆರ್ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿವೈಎಸ್ಪಿ ಮಂಜುನಾಥ, ಹುಣಸಗಿ ತಹಶೀಲ್ದಾರ್ ಜಗದೀಶ ಚೌರ್, ಡಿಎಚ್ಒ ಡಾ.ಗುರುರಾಜ ಹಿರೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಸೇರಿದಂತೆ ಇನ್ನಿತರ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

****

ಹೊಸ ತಂತ್ರಜ್ಞಾನದ ಚಪ್ಪರ

ಪ್ರಧಾನಿ ಭಾಗವಹಿಸುವಲ್ಲಿ ಹೊಸ ತಂತ್ರಜ್ಞಾನದ ಚಪ್ಪರ, ವೇದಿಕೆ ನಿರ್ಮಿಸುತ್ತಿದ್ದು, ಅಲ್ಲದೇ ಲಕ್ಷಾಂತರ ಜನ ಸೇರುವ ನೀರಿಕ್ಷೆ ಇದ್ದು, ಎಲ್ಲರಿಗೂ ಊಟ, ಉಪಾಹಾರ ಪಾರ್ಕಿಂಗ್ ಹಾಗೂ ಇನ್ನಿತರ ಮೂಲ ಸೌಕರ್ಯ ವ್ಯವಸ್ಥೆಯನ್ನು ಎಲ್ಲಾ ಇಲಾಖೆಗಳ ಸಮನ್ವಯ ಮೂಲಕ ಸಿದ್ಧತೆ ನಡೆಸಲಾಗುತ್ತಿದೆ.

ಕಾರ್ಯಕ್ರಮಕ್ಕೆ ಪ್ರಧಾನಿ ಹಾಗೂ ಇನ್ನಿತರ ಗಣ್ಯರು ಆಗಮಿಸುತ್ತಿರುವ ಹಿನ್ನಲೆ ವೇದಿಕೆ ಬಳಿಯೇ 3 ಪ್ರಮುಖ ಹೆಲಿಪ್ಯಾಡ್ ಗಳನ್ನು ನಿರ್ಮಿಸುತ್ತಿದ್ದು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ನಿಗಮದ ಎಂಡಿ ಶಿವಕುಮಾರ, ಜಲಸಂಪನ್ಮೂಲ ಹೆಚ್ಚುವರಿ ಕಾರ್ಯದರ್ಶಿ ಕೆ.ಬಿ.ಕುಲಕರ್ಣಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಆಗಮಿಸಿ ಸ್ಥಳವನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.