ADVERTISEMENT

ಭೀಮಾ ನದಿ ಬಳಿ ಪೂಜೆ ಸಲ್ಲಿಸಲು ಹೋಗಿದ್ದ ವ್ಯಕ್ತಿ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 7:52 IST
Last Updated 13 ಅಕ್ಟೋಬರ್ 2021, 7:52 IST

ಯಾದಗಿರಿ: ನಗರ ಹೊರವಲಯದ ಭೀಮಾ ನದಿಯಲ್ಲಿ ವ್ಯಕ್ತಿಯೊಬ್ಬರು ಪೂಜೆ ಸಲ್ಲಿಸಲು ಹೋಗಿ ನೀರು ಪಾಲದ ಘಟನೆ ಮಂಗಳವಾರ ಸಂಭವಿಸಿದೆ.

ಮೂಲತಃ ತಾಲ್ಲೂಕಿನ ಮುದ್ನಾಳ ಗ್ರಾಮದ, ಸದ್ಯ ನಗರದ ಕೋಟಗಾರವಾಡ ನಿವಾಸಿ ಯುವಕ ಸಾಬಣ್ಣ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸುಮಾರು 30ರಿಂದ 35 ವಯಸ್ಸಿನವರಾಗಿದ್ದು, ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.

ಘಟನೆ ವಿವರ:
ತಾಲ್ಲೂಕಿನ ಮುದ್ನಾಳ ಗ್ರಾಮದ ಸ್ನೇಹಿತರಿಬ್ಬರು ಪೂಜೆ ಸಲ್ಲಿಸಲು ನದಿ ತೀರಕ್ಕೆ ಬಂದಿದ್ದರು. ಈ ವೇಳೆ ನದಿ ತೀರದಲ್ಲಿದ್ದ ಸಾಬಣ್ಣ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ನೀರು ಪಾಲಾಗುತ್ತಿರುವ ದೃಶ್ಯ ಕಂಡು ಸ್ನೇಹಿತ ಭೀಮರಾಯ ರಕ್ಷಣೆ ಮಾಡಲು ನದಿಗಿಳಿದ ವೇಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ನದಿಯ ಮಧ್ಯಭಾಗದಲ್ಲಿರುವ ಬೃಹತ್ ಕಲ್ಲಿನ ಆಶ್ರಯ ಪಡೆದು ರಕ್ಷಣೆಗಾಗಿ ಅಂಗಲಾಚಿದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಯುವಕ ಸಾಬಣ್ಣ ಪತ್ತೆಗಾಗಿ ಅಗ್ನಿಶಾಮಕದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ADVERTISEMENT

ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ಭೇಟಿ ನೀಡಿದ್ದಾರೆ. ಬೋಟ್ ಮೂಲಕ ನೀರು ಪಾಲಾದ ವ್ಯಕ್ತಿಯ ಶೋಧ ಕಾರ್ಯಾಚರಣೆ ಮಾಡಲಾಗಿದೆ.

ಬಿಜೆಪಿ ಯುವ ಮುಖಂಡ ಭೇಟಿ:

ಭೀಮಾ ನದಿ ಬಳಿ ವ್ಯಕ್ತಿ ಕೊಚ್ಚಿಕೊಂಡ ಹೋದ ವಿಷಯ ತಿಳಿದ ಬಿಜೆಪಿ ಯುವ ಮುಖಂಡ, ಶಾಸಕರ ಪುತ್ರ ಮಹೇಶಗೌಡ ಮುದ್ನಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಣಸಗಿ: ಬೈಕ್‌ ಕಳ್ಳನ ಬಂಧನ

ಹುಣಸಗಿ:7 ಬೈಕ್‌ ಕಳವು ಮಾಡಿದ್ದ ಆರೋಪಿಯನ್ನುನಾರಾಯಣಪುರಪೊಲೀಸರು ಬಂಧಿಸಿ, ₹1.50 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿಳೆಬಾವಿ ನಿವಾಸಿ ಮೌನೇಶ ಗುರಣ್ಣ ಬಡಿಗೇರ ಬಂಧಿತ ಆರೋಪಿ. ಅ.12ರಂದು ಬೆಳಿಗ್ಗೆ 5.30ಕ್ಕೆ ಪೊಲೀಸರು ಪೆಟ್ರೋಲಿಂಗ್‌ ಮಾಡುವ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸಂಶಯ ಬಂದು ವಿಚಾರಣೆ ಮಾಡಿದ ನಂತರ ವಿವಿಧ ಕಂಪನಿಯ ಬೈಕ್‌ಗಳನ್ನು ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಕಾರ್ಯಾಚರಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಯಲ್ಲಪ್ಪ, ಪ್ರಕಾಶ,ಕಾನ್‌ಸ್ಟೆಬಲ್‌ ದೇವಿಂದ್ರಪ್ಪ, ವಿಶ್ವನಾಥ ಇದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ, ಸಿಪಿಐ ದೌಲತ್ ಎನ್‌.ಕೆ., ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಾರಾಯಣಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.