ADVERTISEMENT

‘ನಿಷ್ಠಾವಂತ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ’

ಶಹಾಪುರ: ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 7:20 IST
Last Updated 4 ಡಿಸೆಂಬರ್ 2020, 7:20 IST
ಶಹಾಪುರ ನಗರದ ಸಿದ್ದಪ್ಪ ಆರಬೋಳ ಕಲ್ಯಾಣ ಮಂಟಪದಲ್ಲಿ ಗುರುವಾರ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು
ಶಹಾಪುರ ನಗರದ ಸಿದ್ದಪ್ಪ ಆರಬೋಳ ಕಲ್ಯಾಣ ಮಂಟಪದಲ್ಲಿ ಗುರುವಾರ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು   

ಶಹಾಪುರ: ‘ಗ್ರಾಮದ ಎಲ್ಲಾ ಸಮುದಾಯ ಒಳಗೊಂಡ ಪಂಚರತ್ನ ಸದಸ್ಯರು ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ನಿಲ್ಲಿಸೋಣ. ಪಕ್ಷ ಬೆಂಬಲಿಸುವ ನಿಷ್ಠಾವಂತ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲಾ ಕಾರ್ಯಕರ್ತರ ಮೇಲಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಸಿದ್ದಪ್ಪ ಆರಬೋಳ ಕಲ್ಯಾಣ ಮಂಟಪದಲ್ಲಿ ಗುರುವಾರ ಯಾದಗಿರಿ ಜಿಲ್ಲಾ ಮಟ್ಟದ ಗ್ರಾಮ ಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದು 74 ವರ್ಷ ಕಾಲ ಮತ್ತೊಬ್ಬರಿಗೆ ಜೈ ಕಾರ ಹಾಕುತ್ತಾ ಬಂದಿದ್ದಿರಿ. ಈಗ ನಾವೆಲ್ಲ ನಾಯಕರು ನಿಮಗೆ ಜೈಕಾರ ಹಾಕುತ್ತೇವೆ. ಗ್ರಾಮ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿದರೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಸಹಕಾರಿಯಾಗುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮ ಪಕ್ಷ ಮುನ್ನಡೆಯಬೇಕು. ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ. ಆ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡದಷ್ಟು ಗೋಜಲು ತುಂಬಿಕೊಂಡಿದೆ. ಅಪ್ಪ, ಅಮ್ಮ, ಮಗನಿಗೆ ಅಸ್ತಿತ್ವ ಇಲ್ಲವಾಗಿದೆ‘ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಛೇಡಿಸಿದರು.

ADVERTISEMENT

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ರಾಜಕೀಯ ಪಕ್ಷದ ನಾಡಿಮಿಡಿತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಗ್ರಾಮದಲ್ಲಿ ಸಾಮರಸ್ಯ ಹಾಗೂ ಆತ್ಮವಿಶ್ವಾಸದ ದಿಕ್ಸೂಚಿಯಾಗಲಿ. ಗ್ರಾಮ ವಿಕಾಸದ ಚಿಂತನೆ ಹಾಗೂ ಗ್ರಾಮದ ಅಭಿವೃದ್ದಿಗೆ ಶ್ರಮಿಸುವಂತಾಗಬೇಕು. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಲಿ ಎನ್ನುವ ಉದ್ದೇಶದಿಂದ ಕಾರ್ಯಕರ್ತರನ್ನು ಹುರುದುಂಬಿಸಲು ಸಮಾವೇಶ ಹಮ್ಮಿಕೊಂಡಿರುವುದು ಸಾರ್ಥಕವಾಗುತ್ತದೆ ಎಂದರು.

ಸಂಸದ ಭಗವಂತ ಖುಬಾ, ಶಾಸಕರಾದ ರಾಜೂಗೌಡ, ವೆಂಕಟರಡ್ಡಿಗೌಡ ಮುದ್ನಾಳ, ಬಿ.ಜಿ.ಪಾಟೀಲ್, ಶಶಿಲ್‌ ನಮೋಶಿ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ, ಮಾಜಿ ಶಾಸಕ ಗುರು ಪಾಟೀಲ್, ಆಶ್ವಥ ನಾರಾಯಣ ಮಾತನಾಡಿ, ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ, ಬಡ ಜನತೆಗೆ ಉಚಿತವಾಗಿ ಗ್ಯಾಸ್ ಮತ್ತು ಒಲೆ ಹಂಚಿಕೆ, ರೈತರ ಕಲ್ಯಾಣಕ್ಕಾಗಿ ಕೃಷಿ ಸಮ್ಮಾನ ಯೋಜನೆ ಅಡಿಯಲ್ಲಿ ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ₹ 10 ಸಾವಿರ ಬ್ಯಾಂಕ್‌ ಖಾತೆಯ ಮೂಲಕ ಪಾವತಿ ಹೀಗೆ ಹಲವಾರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಹೊಸ ಮೈಲುಗಲ್ಲು ಆಗಿದೆ ಎಂದರು.

ಗೈರು: ಗ್ರಾಮ ಸ್ವರಾಜ್ ಸಮಾವೇಶದಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಗೈರು ಹಾಜರಿ ಸಮಾವೇಶದಲ್ಲಿ ಎದ್ದು ಕಾಣುತ್ತಿತ್ತು.

ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಶರಣಪ್ಪ ತಳವಾರ, ಚಂದ್ರಶೇಖರ ಮಾಗನೂರ, ದೇವಿಂದ್ರ ನಾದ,ಸುರೇಶ ಸಜ್ಜನ, ರಾಜೂಗೌಡ ಉಕ್ಕಿನಾಳ, ಲಲತಾ ಅನಪೂರ, ನಾಗರತ್ನ ಕುಪ್ಪಿ, ರಾಜಾ ಹಣಮಪ್ಪ ನಾಯಕ, ಅಮಾತೆಪ್ಪ ಕಂದಪೂರ,ಡಾ.ಮಲ್ಲಣ್ಣಗೌಡ ಉಕ್ಕನಾಳ, ಮಲ್ಲಣ್ಣ ಮಡ್ಡಿ ಸಾಹು,ಯಲ್ಲಯ್ಯ ನಾಯಕ ವನದುರ್ಗ, ಚಂದ್ರಶೇಖರ ಸುಬೇದಾರ, ಗುರು ಕಾಮಾ, ಭೀಮಾಶಂಕರ ಬಿಲ್ಲವ್, ದೊಡ್ಡ ದೇಸಾಯಿ ಗೋನಾಲ, ದೇವರಾಜ ಮಕಾಶಿ, ಶ್ರೀನಿವಾಸ ನಾಯಕ, ರಾಘವೇಂದ್ರ ಯಕ್ಷಿಂತಿ,ದೇವಿಂದ್ರ ಕೊನೆರ, ಕರಿಬಸಪ್ಪ ಬಿರಾಳ, ಭೀಮರಾಯ ಜಂಗಳಿ, ಮೌನೇಶ, ಸುರೇಶ ಅಂಬಿಗೆರ ಇದ್ದರು.

***
ಚೆಕ್‌ಗೆ ಸಹಿ ಮಾಡುವ ಅಧಿಕಾರ
ಶಹಾಪುರ:
ಸರ್ಕಾರದಿಂದ ಬರುವ ಅನುದಾನವನ್ನು ಬಿಡುಗಡೆ ಮಾಡಲು ಚೆಕ್‌ಗೆ ಸಹಿ ಮಾಡುವ ಅಧಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇದೆ. ಆದರೆ ಸಂಸದರಿಗೆ, ಸಚಿವರಿಗೆ, ಶಾಸಕರಿಗೆ ಅಂತಹ ಅಧಿಕಾರವಿಲ್ಲ. ಕೇಂದ್ರದಿಂದ ನೇರವಾಗಿ ಗ್ರಾಮ ಪಂಚಾಯಿತಿಗೆ ಬರುವ ಅನುದಾನ ಸದ್ಬಳಕೆಯಾಗಬೇಕು ಎಂದರೆ ನಿಷ್ಠಾವಂತ ಕಾರ್ಯಕರ್ತನ್ನು ಗೆಲ್ಲಿಸಿದಾಗ ಗ್ರಾಮಾಭಿವೃದ್ದಿ ಹೊಂದಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಪ್ರವಾಹ ಪರಿಹಾರ ಒದಗಿಸಿ
ಶಹಾಪುರ:
ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಆದ ಪ್ರವಾಹದ ನಷ್ಟದಷ್ಟು ಯಾದಗಿರಿ ಜಿಲ್ಲೆಯಲ್ಲಿ ಆಗಿದೆ. ಎರಡು ವರ್ಷದಿಂದ ಪ್ರವಾಹ ಮತ್ತು ಅತಿವೃಷ್ಟಿಯಿಂದ ನಾವೆಲ್ಲರೂ ತತ್ತರಿಸಿ ಹೋಗಿದ್ದೇವೆ. ಪರಿಹಾರ ನೀಡಿ ಸಂಕಷ್ಟದಿಂದ ಪಾರು ಮಾಡಿ ಎಂದು ಉಪ ಮುಖ್ಯಮಂತ್ರಿ ಅವರಿಗೆ ಕಾರ್ಯಕರ್ತ ಮಲ್ಲಿಕಾರ್ಜುನ ನಾಯ್ಕಲ್ ನಿವೇದಿಸಿಕೊಂಡಾಗ ಕೆಲ ಕ್ಷಣ ಸಭೆ ಮೌನಕ್ಕೆ ಜಾರಿತು. ನಂತರ ಪಕ್ಷದ ನಾಯಕರು ಸಮಜಾಯಿಸಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.