ADVERTISEMENT

ಯಾದಗಿರಿ: ಬೀದಿ ಬದಿ ವ್ಯಾಪಾರಕ್ಕೆ ಬಿಸಿಲಿನ ಸಂಚಕಾರ!

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ: ವ್ಯಾಪಾರಸ್ಥರ ಪರದಾಟ

ಬಿ.ಜಿ.ಪ್ರವೀಣಕುಮಾರ
Published 15 ಏಪ್ರಿಲ್ 2024, 4:32 IST
Last Updated 15 ಏಪ್ರಿಲ್ 2024, 4:32 IST
ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿನ ರಸ್ತೆ ಬದಿಯಲ್ಲಿ ತರಕಾರಿ, ಸೊಪ‍್ಪು ಮಾರುತ್ತಿರುವ ಮಹಿಳೆ
ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ್‌
ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿನ ರಸ್ತೆ ಬದಿಯಲ್ಲಿ ತರಕಾರಿ, ಸೊಪ‍್ಪು ಮಾರುತ್ತಿರುವ ಮಹಿಳೆ ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ್‌   

ಯಾದಗಿರಿ: ಜಿಲ್ಲೆಯಲ್ಲಿ ಕೆಂಡದಂತಹ ಬಿಸಿಲಿನ ತಾಪಕ್ಕೆ ತರಕಾರಿ ಹಾಗೂ ಬೀದಿ ಬದಿಯ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದೆ. ಅಧಿಕ ತಾಪಮಾನದಿಂದಾಗಿ ತಳ್ಳು ಗಾಡಿಯಲ್ಲಿನ ಹೂವು, ಹಣ್ಣು, ಸೊಪ್ಪು, ತರಕಾರಿ ಕೆಲ ಗಂಟೆಗಳಲ್ಲೇ ಬಾಡಿ ಹೋಗುತ್ತಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದರಿಂದ ನಷ್ಟ ಅನುಭವಿಸುತ್ತಿದ್ದಾರೆ.

ತಲೆ ಮೇಲೆ ಬುಟ್ಟಿಹೊತ್ತು ವ್ಯಾಪಾರ ಮಾಡುವವರು, ತಳ್ಳುಗಾಡಿಯವರು, ಬೀದಿ ಬದಿಯಲ್ಲಿ ಕುಳಿತು ಮಾರುವವರು, ತರಕಾರಿ, ಹೂವು, ಹಣ್ಣು, ತೆಂಗಿನಕಾಯಿ, ಮಣ್ಣಿನ ಮಡಕೆ, ಚಿಕನ್, ಬಟ್ಟೆ, ಚಪ್ಪಲಿ, ವಿಳ್ಳೆದೆಲೆ, ಪಾಲಿಶ್ ಮಾಡುವವರು, ಟೀ ಪಾಯಿಂಟ್‌ನವರು ಬಿಸಿಲಿಗೆ ಬಸವಳಿಯುತ್ತಿದ್ದಾರೆ.

ADVERTISEMENT

‘ಬಿಸಿಲು ಹಾಗೂ ಬಿಸಿಗಾಳಿಯಿಂದಾಗಿ ತರಕಾರಿ, ಸೊಪ್ಪು ಖರೀದಿಸಲೂ ಗ್ರಾಹಕರು ಆಗಮಿಸುತ್ತಿಲ್ಲ. ಅಂದಿನ ತರಕಾರಿ ಅವತ್ತೆ ಮಾರಾಟ ಮಾಡಬೇಕು. ಇಟ್ಟುಕೊಂಡರೆ ಬಡಿ, ಕೊಳೆತು ಹೋಗುತ್ತದೆ. ಇದರಿಂದ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ’ ಎನ್ನುತ್ತಾರೆ ತರಕಾರಿ ಮಾರಾಟ ಮಾಡುವ ಖೈರುನ್ನಿಸಾಬೇಗಂ.

‘ಬೇಸಿಗೆ ಕಾಲ ಇರುವುದರಿಂದ ಜನ ಮನೆ ಬಿಟ್ಟು ಹೊರ ಬರುತ್ತಿಲ್ಲ. ವ್ಯಾಪಾರ ಕಡಿಮೆ ಆಗುತ್ತಿದೆ. ಚಳಿಗಾಲದಲ್ಲಿ ಎರಡು ದಿನ ಸೊಪ್ಪು ಇಟ್ಟರೂ ಹಾಳಾಗಲ್ಲ. ಈಗ ಕೊತ್ತಂಬರಿ ಸೊಪ್ಪು ₹10ಗೆ ಒಂದು ಕಟ್ಟು ಮಾರಾಟ ಮಾಡಲಾಗುತ್ತಿದೆ. ಮದುವೆ ಸೀಸನ್‌ ಇದ್ದರೂ ವ್ಯಾಪಾರ ಆಗುತ್ತಿಲ್ಲ’ ಎಂದು ವ್ಯಾಪಾರಿ ಮಹಮ್ಮದ್‌ ಹನೀಫ್‌ ಬೇಸರಿಸುತ್ತಾರೆ.

ಬೀದಿ ಬದಿ ವ್ಯಾಪಾರಿಗಳು ಬಿಸಿಲಿಗೆ ಹೆದರಿ ಮನೆಯಲ್ಲಿ ಇರುವಂತೆಯೂ ಇಲ್ಲ, ಇತ್ತ ಸುಡುಬಿಸಿಲಿಗೆ ಬೆನ್ನೊಡ್ಡಿ ವ್ಯಾಪಾರ ಮಾಡಲೂ ಆಗದಂತಹ ಪರಿಸ್ಥಿತಿ. ತರಕಾರಿ, ಸೊಪ್ಪು, ಹೂವು, ಹಣ್ಣುಗಳ ತಾಜಾತನ ಉಳಿಸಿಕೊಳ್ಳಲೂ ಆಗುತ್ತಿಲ್ಲ. ಬಾಡಿ ಹೋಗಿರುವ ತರಕಾರಿಯನ್ನು ಗ್ರಾಹಕರು ಖರೀದಿಸಲು ಆಸಕ್ತಿ ತೋರುವುದಿಲ್ಲ. ನೀರಿನಲ್ಲಿ ನೆನೆಸಿದ ಗೋಣಿಚೀಲ ಹಾಕಿದರೂ ಕೆಂಡದಂತಹ ಬಿಸಿಲಿಗೆ ಕ್ಷಣಾರ್ಧದಲ್ಲಿ ಒಣಗಿ ಹೋಗುತ್ತಿದೆ. ಬಿಸಿಲಿನಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಆಹಾರ ಪದಾರ್ಥ ಬಾಡದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿಗಳು.

ಬಿಸಿಲಿನ ತಾಪಕ್ಕೆ ಕಂಗೆಟ್ಟಿರುವ ವ್ಯಾಪಾರಿಗಳು ತಮ್ಮ ವ್ಯಾಪಾರದ ಅವಧಿ ಬದಲಿಸಿಕೊಂಡಿದ್ದಾರೆ. ಈ ಹಿಂದೆ ಬೆಳಿಗ್ಗೆಯಿಂದ ಸಂಜೆಯವರೆಗೂ ಬೀದಿಗಳಲ್ಲಿ ತಳ್ಳು ಬಂಡಿ ಮೂಲಕ ವ್ಯಾಪಾರ ಮಾಡುತ್ತಿದ್ದರು. ಈಗ ಸಮಯ ಬದಲಾವಣೆ ಮಾಡಿಕೊಂಡು ಬಿಸಿಲು ಹೆಚ್ಚಾದಾಗ ವ್ಯಾಪಾರಕ್ಕೆ ಇಳಿಯುತ್ತಿಲ್ಲ.

ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿನ ರಸ್ತೆ ಬದಿಯಲ್ಲಿ ತರಕಾರಿ ಸೊಪ‍್ಪು ಮಾರುತ್ತಿರುವ ಮಹಿಳೆಯರು ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ್‌
ಯಾದಗಿರಿ ನಗರದ ಸುಭಾಷಚಂದ್ರ ಬೋಸ್‌ ವೃತ್ತದಲ್ಲಿನ ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿರುವುದು ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ್‌
ಸುರಪುರದ ಗಾಂಧಿವೃತ್ತದ ಬೀದಿ ಬದಿಯಲ್ಲಿ ಬಿಸಿಲಿನಲ್ಲೇ ತರಕಾರಿ ಮಾರಾಟ ಮಾಡುತ್ತಿರುವ ಮಹಿಳೆ

ಹಸಿರು ಸೊಪ್ಪು ಒಂದು ದಿನಕ್ಕೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ನಮಗೆ ನಷ್ಟವಾಗುತ್ತದೆ. ಪ್ರತಿದಿನ ₹10 ಸಾವಿರ‌ ಮೊತ್ತದ ತರಕಾರಿ ತರುತ್ತಿದ್ದೆ. ಈಗ ₹7 ಸಾವಿರ ಮಾಲು ತರುತ್ತೇನೆ. ವ್ಯಾಪಾರ ಡಲ್‌ ಇದೆ -ಬಸವರಾಜ ಚಿಂತನಹಳ್ಳಿ ತರಕಾರಿ ವ್ಯಾಪಾರಿ ಯಾದಗಿರಿ

ಬೇಸಿಗೆಯಲ್ಲಿ ಶೇ 40 ರಷ್ಟು ಬೀದಿ ಬದಿ ವ್ಯಾಪಾರ ಇಳಿಕೆಯಾಗಿದೆ. ಜನರು ತಂಪುಪಾನಿಯಗಳ ಮೊರೆ ಹೋಗಿದ್ದಾರೆ. ಇದರಿಂದ ಫಾಸ್ಟ್‌ಪುಡ್‌ ತಳ್ಳುಬಂಡಿ ಬೀದಿ ಬದಿಯ ವ್ಯಾಪಾರ ನಡೆಯುತ್ತಿಲ್ಲ. ಸರ್ಕಾರ ನೆರವಿನ ಹಸ್ತ ಚಾಚಬೇಕು

- ‌ಶಶಿಕುಮಾರ ಅಚ್ಚೋಲ ತಾಲ್ಲೂಕು ಅಧ್ಯಕ್ಷ ಬೀದಿ ಬದಿ ವ್ಯಾಪಾರಿಗಳ ಸಂಘ ಯಾದಗಿರಿ

ಬೀದಿ ಬದಿ ವ್ಯಾಪಾರಿಗಳಿಗೆ ಬೆಲೆ ಇಲ್ಲ. ನೆಲೆ ಅಂತೂ ಇಲ್ಲವೇ ಇಲ್ಲ. ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲು ಶಕ್ತಿ ಇಲ್ಲ. ಮಳಿಗೆ ಬಾಡಿಗೆ ದುಬಾರಿ

-ಈರಣ್ಣ ಎಲಿಗಾರ ನಗರ ಮಾರಾಟ ಸಮಿತಿ ಸದಸ್ಯ ಸುರಪುರ

ಬೀದಿ ಬದಿ ವ್ಯಾಪಾರಿಗಳನ್ನು ಸಂಘಟಿಸಿ ನೋಂದಣಿ ಮಾಡಿಸಲಾಗಿದೆ. ಶೇ 90 ರಷ್ಟು ಜನರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಂಚಾರಕ್ಕೆ ಅಡಚಣೆ ಆಗದಂತೆ ವ್ಯಾಪಾರಿಗಳು ಕುಳಿತುಕೊಳ್ಳಬೇಕು

-ತಿಪ್ಪಮ್ಮ ಬಿರಾದಾರ ಸಮುದಾಯ ಸಂಘಟಕಿ ನಗರಸಭೆ ಸುರಪುರ

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ

ಪ್ರಧಾನಮಂತ್ರಿ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸುಭದ್ರತೆಗಾಗಿ 3 ಕಂತುಗಳಲ್ಲಿ ಸಾಲ ನೀಡಲಾಗುತ್ತಿದೆ. ಮೊದಲ ಕಂತಿನಲ್ಲಿ ₹10 ಸಾವಿರದಷ್ಟು ಸಾಲ ನೀಡಿ 12 ತಿಂಗಳ ಅವಧಿಯಲ್ಲಿ ಸಾಲ ಮರು ಪಾವತಿ ಮಾಡಿದಲ್ಲಿ ₹20ಸಾವಿರ ಸಾಲ ನೀಡಲಾಗುವುದು. ಈ ಸಾಲವನ್ನು 18 ತಿಂಗಳ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ ₹50 ಸಾವಿರದಷ್ಟು ಸಾಲ ಸೌಲಭ್ಯ ನೀಡಲಾಗುವುದು ಎಂಬುದು ಜಿಲ್ಲಾ ಕೌಶಲ ಮಿಷನ್ ಇಲಾಖೆ ಅಧಿಕಾರಿಗಳ ಮಾಹಿತಿ.

ಬೆಳಿಗ್ಗೆ ಹತ್ತು ಗಂಟೆಯೊಳಗೇ ವ್ಯಾಪಾರ

ಶಹಾಪುರ: ಬೆಳಿಗ್ಗೆಯಿಂದಲೇ ಸೂರ್ಯದೇವ ಉಡಿಯಲ್ಲಿ ಕೆಂಡದುಂಡೆ ಕಟ್ಟಿಕೊಂಡು ಬಂದಂತೆ ಆಗುತ್ತಿದೆ. ಪ್ರಖರವಾದ ಬಿಸಿಲಿನ ತಾಪಕ್ಕೆ ತರಕಾರಿ ಹಾಗೂ ಬೀದಿ ಬದಿಯ ವ್ಯಾಪಾರಸ್ಥರ ಅನ್ನವನ್ನು ಕಸಿದುಕೊಂಡಿದ್ದಾನೆ. ಬೆಳಿಗ್ಗೆ ಹತ್ತು ಗಂಟೆ ಒಳಗೆ ಮಾರಾಟ ಮಾಡಬೇಕು. ಇಲ್ಲದೆ ಹೋದರೆ ಅದನ್ನು ಚರಂಡಿಗೆ ಹಾಕಬೇಕು. ಸಂಜೆ ಖರೀದಿಸಲು ಯಾರೂ ಬರುವುದಿಲ್ಲ. ಅಲ್ಲದೆ ಒಂದು ತಿಂಗಳ ಕಾಲ ರಂಜಾನ್‌ ಹಬ್ಬದಿಂದಲೂ ನಮಗೆ ತುಸು ವ್ಯಾಪಾರದಲ್ಲಿ ಏರುಪೇರು ಉಂಟಾಗಿತ್ತು ಎನ್ನುತ್ತಾರೆ ವ್ಯಾಪಾರಿಗಳು.ಬೀದಿ ಬದಿಯ ಹಣ್ಣಿನ ವ್ಯಾಪಾರಕ್ಕೂ ಬಿಸಿಲು ಸಂಚಕಾರ ತಂದಿದೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸುವ ಜನತೆಯ ಸಂಖ್ಯೆಯು ಕಡಿಮೆಯಾಗಿದೆ. ಶಾಲಾ ಕಾಲೇಜು ರಜೆ ಇರುವುದರಿಂದ ವಿದ್ಯಾರ್ಥಿಗಳ ಓಡಾಟವೂ ಇಲ್ಲ. ಹೀಗಾಗಿ ಹಣ್ಣುಗಳನ್ನು ಹೆಚ್ಚು ದಿನ ಇಡುವಂತೆ ಇಲ್ಲ. ನಗರದ ಬಡಾವಣೆಯಲ್ಲಿ ತಳ್ಳು ಬಂಡಿಯಲ್ಲಿ ಹಣ್ಣು ತೆಗೆದುಕೊಂಡು ಹೋದಾಗ ಮಧ್ಯಾಹ್ನ ಯಾರೂ ಸುಳಿಯುವದಿಲ್ಲ. ಸಂಜೆಯಾದಂತೆ ಹಣ್ಣು ಬಾಡಿದಂತೆ ಆಗುತ್ತವೆ. ಇದರಿಂದ ಖರೀದಿ ಮಾಡಲು ಗ್ರಾಹಕರು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ರಾಜಕುಮಾರ.

ಬೀದಿಬದಿ ವ್ಯಾಪಾರಿಗಳಿಗೆ ಬಿಸಿಲಿನ ತಾಪ

ಸುರಪುರ: ನೆರಳಿನ ವ್ಯವಸ್ಥೆಯೂ ಇಲ್ಲದೆ ರಸ್ತೆಯಲ್ಲೇ ಕುಳಿತು ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳು ಬಿಸಿಲಿನ ಪ್ರಖರತೆಯಿಂದ ಬಳಲಿ ಹೋಗುತ್ತಿದ್ದಾರೆ. ನಗರಸಭೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು 1005 ಬೀದಿ ಬದಿ ವ್ಯಾಪಾರಿಗಳು ನಗರಸಭೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿಯೇ 678 ವ್ಯಾಪಾರಿಗಳು ಇದ್ದಾರೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ 876 ಬೀದಿ ಬದಿ ವ್ಯಾಪಾರಿಗಳು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಅದರಲ್ಲಿ ಬಹುತೇಕರು ಸಾಲ ಮರುಪಾವತಿಸಿ ಹೆಚ್ಚಿನ ಸಾಲದ ನೆರವು ಪಡೆದಿರುವುದು ವಿಶೇಷ. ನಗರಸಭೆ ಆಯುಕ್ತರ ಅಧ್ಯಕ್ಷತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸೌಕರ್ಯ ಒದಗಿಸಲೆಂದೇ ನಗರ ಮಾರಾಟ ಸಮಿತಿ ರಚಿಸಲಾಗಿದೆ. ಸಮುದಾಯ ಸಂಘಟಕರು ಸದಸ್ಯ ಕಾರ್ಯದರ್ಶಿಯಾಗಿದ್ದು ಬೀದಿ ಬದಿ ವ್ಯಾಪಾರಿಗಳ ಆಯ್ದ 10 ಜನ ಸದಸ್ಯರಿರುತ್ತಾರೆ. ಬಿಸಿಲಿನ ಏರಿಕೆಯಿಂದ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ. ಆಗಾಗ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಪೊಲೀಸರು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದು ನಡೆದಿರುತ್ತದೆ.

ಸೂರಿಲ್ಲದೆ ವ್ಯಾಪಾರಿಗಳು ಕಂಗಾಲು

ವಡಗೇರಾ: ವಡಗೇರಾ ತಾಲ್ಲೂಕು ಕೇಂದ್ರವಾಗಿ ಎಂಟು ವರ್ಷ ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ತರಕಾರಿ ಮಾರುಕಟ್ಟೆಯಿಲ್ಲದೆ ಬೀದಿ ಬದಿಯಲ್ಲಿಯೇ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಪಕ್ಕದ ಗ್ರಾಮಗಳಿಂದ ಹಾಗೂ ಯಾದಗಿರಿಯಿಂದ ತರಕಾರಿ ಖರೀದಿಸಿ ಪಟ್ಟಣದಲ್ಲಿ ಮಾರಾಟ ಮಾಡುತ್ತಾರೆ. ಜಿಲ್ಲಾ ಮುಖ್ಯ ರಸ್ತೆಯ ಬದಿಯಲ್ಲಿ ಇರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೆ ಪಟ್ಟಣಕ್ಕೆ ಬರುವ ಹೋಗುವ ವಾಹನಗಳ ದೂಳಿನಲ್ಲಿ ಬೀದಿ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಾರೆ. ಒಂದು ವೇಳೆ ಯಾವುದಾದರೂ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಹರಿದರೆ ವ್ಯಾಪಾರಿಗಳು ಅಪಾಯಕ್ಕೆ ಸಿಲುಕುತ್ತಾರೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ತಾಲ್ಲೂಕು ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ವ್ಯಾಪಾರಿಗಳು ದೂರುತ್ತಾರೆ‌. ಹೀಗಾಗಿ ಮಳಿಗೆಗಳನ್ನು ನಿರ್ಮಿಸಿಕೊಡಬೇಕು ಎಂಬುದು ಅವರ ಬೇಡಿಕೆಯಾಗಿದೆ. 

ಮಧ್ಯಾಹ್ನ ವ್ಯಾಪಾರ– ವಹಿವಾಟು ಮಂದ

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿಯೂ ಬಿಸಿಲಿನ ತಾಪಕ್ಕೆ ವ್ಯಾಪಾರ ಕ್ಷೀಣಿಸಿದೆ. ಮಧ್ಯಾಹ್ನದ ಸಮಯದಲ್ಲಿ ಗ್ರಾಹಕರಿಲ್ಲದೆ ವ್ಯಾಪಾರ ಮಂದವಾಗಿರುತ್ತದೆ ಎಂದು ಪಟ್ಟಣದಲ್ಲಿರುವ ಸಣ್ಣ ವ್ಯಾಪಾರಿಗಳು ತಳ್ಳುಗಾಡಿ ಹಾಗೂ ತರಕಾರಿ ವ್ಯಾಪಾರಸ್ಥರ ಅಳಲು. ‘ಬೇಸಿಗೆ ಆರಂಭಕ್ಕೂ ಮುನ್ನ ಮಧ್ಯಾಹ್ನದ ಸಮಯದಲ್ಲಿ ಕೂಡ ವ್ಯಾಪಾರ ವಹಿವಾಟು ಚೆನ್ನಾಗಿರುತ್ತಿತ್ತು. ಆದರೆ ಕಳೆದ ಎರಡು ವಾರ ಬಿಸಿಲು ಹೆಚ್ಚಾಗಿದ್ದರಿಂದಾಗಿ ಅಷ್ಟಾಗಿ ವ್ಯಾಪಾರ ವಹಿವಾಟು ಇರಲಿಲ್ಲ’ ಎಂದು ತರಕಾರಿ ವ್ಯಾಪಾರಸ್ಥೆ ಪದ್ದಮ್ಮ ಹೇಳಿದರು. ಬೆಳಿಗ್ಗೆ ಹಾಗೂ ಸಂಜೆ ಜನರು ತರಕಾರಿ ಕೊಳ್ಳಲು ಆಗಮಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬಿಸಿಲು ಕಡಿಮೆಯಾಗಿದ್ದು ಶನಿವಾರ ವ್ಯಾಪಾರ ವಹಿವಾಟು ಕಂಡುಬಂತು’ ‌ಎಂದು ನಾರಾಯಣ ಹೇಳಿದರು.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ನಾಮದೇವ ವಾಟ್ಕರ್‌, ಭೀಮಶೇನರಾವ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.