ಹುಣಸಗಿ: ತಾಲ್ಲೂಕಿನ ಅಲ್ಲಲ್ಲಿ ಭತ್ತ ಕಟಾವು ಕಾರ್ಯ ನಡೆದಿದೆ. ರೈತರು ಭತ್ತ ಖರೀದಿದಾರರಿಗೆ ಮಾರಾಟ ಮಾಡಿ ಸಾಗಿಸುವ ವೇಳೆ ಲಾರಿ ಮಾಲೀಕರ ಸಂಘದ ಕೆಲ ಸದಸ್ಯರು ಭತ್ತದ ಲಾರಿಗಳನ್ನು ನಿಲ್ಲಿಸಿ ಚಾಲಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಭತ್ತ ಖರೀದಿದಾರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಭತ್ತ ಖರೀದಿದಾರರ ಸಂಘದ ಪ್ರಮುಖ ಸಂಗಣ್ಣ ವೈಲಿ ಮಾತನಾಡಿ,‘ಹಿಂದಿ ನಿಂದಲೂ ರೈತರು ಭತ್ತ ಕಟಾವು ಮಾಡಿ ಭತ್ತ ಖರೀದಿದಾರರಿಗೆ ಸೂಕ್ತ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರು ಮಾರಾಟ ಮಾಡಿದ ಭತ್ತ ಸಾಗಿಸುವ ಸಂದರ್ಭದಲ್ಲಿ ಲಾರಿ ಸಂಘದವರು ಎಂದು ಹೇಳಿಕೊಂಡು ಕೆಲವರು ಅನಗತ್ಯವಾಗಿ ನಿಲ್ಲಿಸಿ ಚಾಲಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ರೈತರು ಮತ್ತು ಖರೀದಿದಾರರ ನಡುವೆ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವನಗೌಡ ಪಾಟೀಲ ಮಾತನಾಡಿ,‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂದಿನಿಂದಲೂ ರೈತರ ಫಸಲು ಸಾಗಣೆ ಮಾಡುತ್ತ ಬರಲಾಗಿದೆ. ಆದರೆ ಇದೇ ಬಾರಿ ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ’ ಎಂದರು. ಸಂಗನಗೌಡ ಪೊಲೀಸ್ ಪಾಟೀಲ, ವಿರೂಪಾಕ್ಷಯ್ಯ ಸ್ಥಾವರಮಠ, ಹೊನ್ನಕೇಶವ ದೇಸಾಯಿ, ಶರಣು ಪಡಶೆಟ್ಟಿ, ಪ್ರಭು ದೇಸಾಯಿಗುರು, ಪ್ರದೀಪ ಅಯ್ಯ ಕಾರಟಗಿ, ಶರಣು ಹೂಗಾರ, ಮಲ್ಲು ಜಾಲಹಳ್ಳಿ ಕಕ್ಕೇರಾ, ಕೆ.ಬಿ.ಹಿರೇಮಠ ಬಲಶೆಟ್ಟಿಹಾಳ, ಶಾಂತಪ್ಪ ಸಜ್ಜನ್, ಆದಯ್ಯ ಮಠ ಆನಂದಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.