ADVERTISEMENT

ಯಾದಗಿರಿ| ನಗರದ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ

ರಸ್ತೆ ಮಧ್ಯದಲ್ಲಿ ನಿಲ್ಲುವ ಬಿಡಾಡಿ ದನಗಳು, ರಸ್ತೆ ವಿಭಜಕವೇ ಮಲಗುವ ಸ್ಥಳ

ಬಿ.ಜಿ.ಪ್ರವೀಣಕುಮಾರ
Published 9 ಜೂನ್ 2019, 16:43 IST
Last Updated 9 ಜೂನ್ 2019, 16:43 IST
ಯಾದಗಿರಿಯ ರಸ್ತೆ ಮಧ್ಯದಲ್ಲಿ ಬಿಡಾಡಿ ದನಗಳು ಮಲಗಿರುವುದು
ಯಾದಗಿರಿಯ ರಸ್ತೆ ಮಧ್ಯದಲ್ಲಿ ಬಿಡಾಡಿ ದನಗಳು ಮಲಗಿರುವುದು   

ಯಾದಗಿರಿ: ನಗರದ ವಿವಿಧೆಡೆ ಬಿಡಾಡಿ ದನಗಳು ರಸ್ತೆಯ ಮಧ್ಯದಲ್ಲಿಯೇ ಮಲಗುವುದರಿಂದ ಬೈಕ್‌ ಸವಾರರು, ಆಟೊ ಚಾಲಕರು ರೋಸಿಹೋಗಿದ್ದಾರೆ.

ನಗರದ ಹೊಸ ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ, ಚಿತ್ತಾಪುರ ರಸ್ತೆ, ಸುಭಾಸ್ ಚೌಕ್, ಅಂಬೇಡ್ಕರ್‌ ವೃತ್ತ, ಗಾಂಧಿ ಚೌಕ್, ಹೊಸಳ್ಳಿ ಕ್ರಾಸ್‌, ಗಂಜ್‌ ಪ್ರದೇಶ ಇನ್ನಿತರ ಕಡೆ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿಕೊಂಡು ಸಂಚಾರಕ್ಕೆ ತೊಂದರೆ ಮಾಡುತ್ತಿವೆ.

ಕೆಲವೆಡೆ ರಸ್ತೆ ಮಧ್ಯದಲ್ಲಿ ನಿಂತು ಎಷ್ಟು ಹಾರ್ನ್‌ ಮಾಡಿದರೂ ಕದಲುವುದಿಲ್ಲ. ಇದರಿಂದ ವಾಹನ ಸವಾರರು ಕೆಳಗೆ ಇಳಿದು ಓಡಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ರಸ್ತೆ ವಿಭಜದ ಮೇಲೆ ಮಲಗಿಕೊಂಡು ದಿಢೀರನೇ ಎದ್ದು ವಾಹನ ಸವಾರರು ಗೊಂದಲಕ್ಕೀಡು ಆಗುವಂತೆ ಮಾಡುತ್ತವೆ. ಮೈಮರೆತರೆ ನೇರವಾಗಿ ವಾಹನಗಳಿಗೆ ಡಿಕ್ಕಿ ಹೊಡೆಯುತ್ತವೆ.

ಬಿಡಾದಿ ದನಗಳು ರಸ್ತೆ ಬದಿ ಬಿಸಾಡಿರುವ ತ್ಯಾಜ್ಯ ವಸ್ತುಗಳನ್ನು ಸೇವಿಸುತ್ತವೆ. ಆ ಬದಿ ರಸ್ತೆಯಿಂದ ಈ ಬದಿ ರಸ್ತೆವರೆಗೆ ಯಾವುದೇ ಆತಂಕವಿಲ್ಲದೇ ಸರಾಗವಾಗಿ ರಸ್ತೆ ದಾಟುತ್ತವೆ. ವಾಹನ ಸವಾರರು ಇದರಿಂದ ಕೊಂಚ ಮೈಮರೆತರೂ ಆಸ್ಪತ್ರೆ ಸೇರುವುದು ಗ್ಯಾರಂಟಿ.

ರಸ್ತೆ ಬದಿಯಲ್ಲಿ ಸಿಗುವ ತ್ಯಾಜ್ಯ, ಪ್ಲಾಸ್ಲಿಕ್, ಇನ್ನಿತರ ತರಕಾರಿ ಸೇವಿಸುವ ದನಗಳು ರಸ್ತೆ, ಫುಟ್ ಪಾತ್‌ನಲ್ಲಿಯೇ ಮೂತ್ರ, ಸೆಗಣಿ ಹಾಕುತ್ತವೆ. ಈ ವೇಳೆ ಪಾದಚಾರಿಗಳು ರಸ್ತೆಯಲ್ಲಿ ನಡೆದಾಡಲು ತೊಂದರೆ ಪಡುವಂತಾಗಿದೆ.

‌ಸಚಿವರ ಕಾರಿಗೆ ಅಡ್ಡ ಬಂದು ಹಸು: ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ ನಗರದ ದೊಡ್ಡಕೆರೆ ಹೂಳೆತ್ತುವ ಕಾಮಗಾರಿ ವಿಕ್ಷೀಸಿದ ನಂತರ ಗುರುಸಣಗಿ ಬ್ಯಾರೇಜ್ ಜಾಕ್‌ವೆಲ್ ಮತ್ತು ಪ್ಲಾಂಟೇಷನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸುಭಾಷ್ ವೃತ್ತದಲ್ಲಿ ಅವರ ವಾಹನಕ್ಕೆ ಬಿಡಾಡಿ ದನವೊಂದು ಅಡ್ಡಲಾಗಿ ನಿಂತಿತು. ಹಾರ್ನ್‌ ಮಾಡಿದರೂ ಕದಲದೇ ಅಲ್ಲೇ ನಿಂತಿತು. ಈ ವೇಳೆ ಪೊಲೀಸರು ದನವನ್ನು ಕೈ ಹಿಡಿದು ತಳ್ಳುವ ಮೂಲಕ ಸಚಿವರ ಕಾರಿಗೆ ದಾರಿ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.