ಗುರುಮಠಕಲ್: ತಾಲ್ಲೂಕಿನ ಎಂ.ಟಿ. ಪಲ್ಲಿ ಗ್ರಾಮಕ್ಕೆ ಬುಧವಾರ ಆರ್‌ಎಫ್‌ಒ ಬುರಾನುದ್ದೀನ್, ಎಆರ್‌ಎಫ್‌ಒ ಸಂಗಮೇಶ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಭೇಟಿ ನೀಡಿ, ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿದ್ದು, ಚಿರತೆ ಮಾತ್ರವಲ್ಲದೆ ಹುಲಿ ಇರುವುದೂ ಖಚಿತವಾಗಿದೆ.
ಕಳೆದ ಹದಿನೈದು ದಿನಗಳಿಂದ ಅಲ್ಲಲ್ಲಿ ಚಿರತೆ ಮತ್ತು ಹುಲಿ ಇರುವುದನ್ನು ಕಂಡ ಗ್ರಾಮಸ್ಥರು ಭೀತಿಯಲ್ಲೇ ಕೃಷಿ ಚಟುವಟಿಕೆಗಳು ನಡೆಸುತ್ತಿದ್ದರು. ಸೋಮವಾರ (ಸೆ.15) ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡಿತ್ತು. ಮಂಗಳವಾರ (ಸೆ.16) ಸಂಜೆ ಗ್ರಾಮದ ಹೊರವಲಯದ ಪೊದೆಗಳಲ್ಲಿ ಚಿರತೆ ಕಂಡಿದೆ. ಇದರಿಂದ ಗ್ರಾಮದಲ್ಲಿ ಭಯದ ನೆರಳು ಕವಿದಿದೆ.
ಸಹಾಯವಾಣಿಗೆ ಸಂಪರ್ಕಿಸಿ: ಗ್ರಾಮಗಳಲ್ಲಿ ಚಿರತೆ ಸಂಚರಿಸುವುದು ಕಂಡುಬಂದರೆ ಅರಣ್ಯ ಇಲಾಖೆಯ ಸಹಾಯವಾಣಿ (ಮೊ.9481993303) ಗೆ ಸಂಪರ್ಕಿಸಿ. ಮಾಹಿತಿ ನೀಡಿ ಇಲಾಖೆಗೆ ಸಹಕರಿಸುವಂತೆ ಆರ್‌ಎಫ್‌ಒ ಬುರಾನೋದ್ದೀನ್ ತಿಳಿಸಿದ್ದಾರೆ.
ಚಿರತೆ ಕಂಡ ಗ್ರಾಮಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಕತ್ತಲಿರುವ ವೇಳೆ ಒಬ್ಬಂಟಿಯಾಗಿ ಸಂಚರಿಸುವುದು, ಜಾನುವಾರುಗಳನ್ನು ಮೇಯಿಸುವಾಗ ಪೊದೆಗಳ ಹತ್ತಿರ ನಿಲ್ಲುವುದು, ದನಗಳ ಮೇಲೆ ದಾಳಿ ಮಾಡಿದಾಗ ಅಡ್ಡಿಪಡಿಸುವ, ಅನವಶ್ಯಕ ಗದ್ದಲ, ಸಿಡಿಮದ್ದು ಬಳಕೆ ಮಾಡದಿರಿ ಎಂದು ಸಲಹೆ ನೀಡಿದರು.
ಎಂ.ಟಿ. ಪಲ್ಲಿಯಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡಿವೆ. ಬೋನು ಅಳವಡಿಸಲಾಗಿದೆ. ಹುಲಿಯಿರುವ ಕುರಿತು ಪರಿಶೀಲನೆ ಮಾಡುತ್ತೇವೆ. ಪಂಚಾಯಿತಿ ಸಹಕಾರದಲ್ಲಿ ಜಾಗೃತಿ ಮೂಡಿಸಲಾಗುವುದು.ಬುರಾನೋದ್ದೀನ್ ಆರ್.ಎಫ್.ಒ.
ಸೋಮವಾರ ದನಗಳನ್ನು ಮೇಯಿಸುತ್ತ ಸ್ವಲ್ಪ ದೂರ ನಿಂತಿದ್ದೆ. ನಮ್ಮ ಎತ್ತು ಮತ್ತು ಕರುಗಳ ಮೇಲೆ ದಾಳಿ ನಡೆಸಿದ ವೇಳೆ ಜತೆಯಲ್ಲಿದ್ದವರನ್ನು ಕೂಗಿದೆ. ನಮ್ಮ ಗದ್ದಲ ಕೇಳಿ ಹಿಂದಿರುಗಿತು. ಅದೃಷ್ಟಕ್ಕೆ ಯಾವ ಅಪಾಯವೂ ಆಗಲಿಲ್ಲ.ನಾಗೇಂದ್ರ ಕೊಲ್ಲೂರು ಎತ್ತು ಮೇಯಿಸುತ್ತಿದ್ದ ಯುವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.