ADVERTISEMENT

‘ಇಂಟೆಲಿಜೆಂಟ್‌’ ಕ್ಯಾಮೆರಾ ಕಣ್ಗಾವಲು

ಸಂಚಾರ ವ್ಯವಸ್ಥೆಯ ಸುಧಾರಣೆ, ಪ್ರಯಾಣಿಕರ ಸುರಕ್ಷಿತ ರಸ್ತೆ ಸಂಚಾರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:48 IST
Last Updated 26 ಅಕ್ಟೋಬರ್ 2025, 7:48 IST
ಯಾದಗಿರಿ ನಗರದ ನೇತಾಜಿ ಸುಭಾಷ್‌ ವೃತ್ತದಲ್ಲಿನ ವಾಹನಗಳ ಸಂಚಾರ
ಯಾದಗಿರಿ ನಗರದ ನೇತಾಜಿ ಸುಭಾಷ್‌ ವೃತ್ತದಲ್ಲಿನ ವಾಹನಗಳ ಸಂಚಾರ   

ಯಾದಗಿರಿ: ಸಂಚಾರ ವ್ಯವಸ್ಥೆಯ ಸುಧಾರಣೆ ಹಾಗೂ ಪ್ರಯಾಣಿಕರ ಸುರಕ್ಷಿತ ರಸ್ತೆ ಸಂಚಾರದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಇಂಟೆಲಿಜೆಂಟ್‌ ಅಥವಾ ಇಂಟಿಗ್ರೇಟೆಡ್‌ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ ಸಿಸ್ಟಮ್ (ಐಟಿಎಂಎಸ್‌) ಅಳವಡಿಕೆಗೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.

ರಾಜ್ಯ ಸರ್ಕಾರವು ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ (ಸಿಟಿಆರ್‌ಎಸ್‌) ಅಡಿ ಜಿಲ್ಲೆಗೆ ₹ 2.40 ಕೋಟಿ ಅನುದಾನ ನೀಡಿದೆ. ಇದನ್ನು ಜಿಲ್ಲೆಯ ಸಂಚಾರ ವ್ಯವಸ್ಥೆಯ ಸುಧಾರಣೆಗೆ ಬಳಸಿಕೊಳ್ಳಲು ಉದ್ದೇಶಿಸಿದ್ದು, ಐಟಿಎಂಎಸ್‌ ಅಳವಡಿಕೆ ಸಂಬಂಧ ಪೊಲೀಸ್ ಇಲಾಖೆಯು ಟೆಂಡರ್ ಕರೆಯುವ ಹಂತದಲ್ಲಿದೆ.

ಈ ಬಗ್ಗೆ ಶನಿವಾರ ಮಾಹಿತಿ ಹಂಚಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು, ‘ಪ್ರಸ್ತುತ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳನ್ನು ಮ್ಯಾನುವಲ್ ಮೂಲಕ ಪತ್ತೆ ಮಾಡುತ್ತಿದ್ದೇವೆ. ಟ್ರಾಫಿಕ್ ರೂಲ್ಸ್ ಮುರಿದವರನ್ನು ಮೊಬೈಲ್‌ಗಳಲ್ಲಿ ಫೋಟೊ ತೆಗೆದು, ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ದಂಡ ಹಾಕುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಸ್ಥಾನದಲ್ಲಿ ಜಿಲ್ಲೆಯಾದ್ಯಂತ ಸುಧಾರಿತ ಸಿಟಿಆರ್‌ಎಸ್‌ ಸಾಧನಗಳು ಬರಲಿವೆ’ ಎಂದರು.

ADVERTISEMENT

‘ಯಾದಗಿರಿ ನಗರ, ಶಹಾಪುರ, ಸುರಪುರ, ಭೀಮರಾಯನಗುಡಿ ಸೇರಿದಂತೆ ಏಳು ಕಡೆಗಳಲ್ಲಿ ಐಟಿಎಂಎಸ್‌ ಸಾಧನಗಳ ಅಳವಡಿಕೆ ಮಾಡಲಾಗುವುದು. ಪ್ರತಿಯೊಂದು ಕೇಂದ್ರಕ್ಕೆ ₹ 25 ಲಕ್ಷ ವೆಚ್ಚ ತಗಲುತ್ತದೆ. ಇದು ಸಾಫ್ಟ್‌ವೇರ್ ಆಧಾರಿತ ಸಾಧನವಾಗಿದ್ದು, ನಿಯಮ ಉಲ್ಲಂಘಿಸಿದ ಎರಡು ನಿಮಿಷಗಳಲ್ಲಿ ತಪ್ಪಿತಸ್ಥರ ಮೊಬೈಲ್‌ಗೆ ದಂಡದ ಸಂದೇಶ ಹೋಗುತ್ತದೆ’ ಎಂದು ತಿಳಿಸಿದರು.

‘ಐಟಿಎಂಎಸ್‌ ಅಡಿ ಹೈ ಡೆಫಿನಿಷನ್‌ ಸಿ.ಸಿ.ಟಿ.ವಿ ಕ್ಯಾಮೆರಾ, ಅಟೊಮೇಟಿಕ್ ನಂಬರ್ ಪ್ಲೇಟ್‌ ರಿಕಗ್ನಿಷನ್ (ಎಎನ್‌ಪಿಆರ್‌), ರಸ್ತೆಗಳಲ್ಲಿ ವಾಹನಗಳ ವೇಗವನ್ನು ಮಾಪನ ಮಾಡಿ ಅಳೆಯುವ ಸ್ಪೀಡ್ ರಾಡಾರ್ ತಂತ್ರಜ್ಞಾನದ ಗನ್, ಕ್ಯಾಟ್ ಐಸ್ ಉಪಕರಣ, ಡಿಜಿಟಲ್ ಸೈನ್ ಬೋರ್ಡ್‌ಗಳಂತಹ ಸಾಧನಗಳನ್ನು ಒಳಗೊಂಡಿರಲಿದೆ. ಈ ಸಾಧನಗಳ ಮೂಲಕ ತ್ರಿಬಲ್ ರೈಡ್, ಮೊಬೈಲ್ ಬಳಸುತ್ತಾ ವಾಹನಗಳ ಚಾಲನೆ, ಮಿತಿಗಿಂತ ವೇಗವಾಗಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ನಿಯಮಬಾಹಿರ ಪಾರ್ಕಿಂಗ್, ರ‌್ಯಾಶ್ ರೈಡಿಂಗ್, ತ್ರಿಬಲ್ ರೈಡಿಂಗ್, ರಾಂಗ್ ರೂಟ್, ಓವರ್ ಸ್ಪೀಡ್‌ ಸೇರಿದಂತೆ ಯಾವುದೇ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಮಾಲೀಕರಿಗೆ ಆನ್‌ಲೈನ್ ಮೂಲಕವೇ ದಂಡದ ಮೊತ್ತದ ಸಂದೇಶ ಹೋಗುತ್ತದೆ’ ಎಂದರು.

ಚೆಕ್‌ ಪೋಸ್ಟ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ: ‘ಅಂತರ ಜಿಲ್ಲೆಗಳು ಹಾಗೂ ಅಂತರ ರಾಜ್ಯ ಸೇರಿ ಜಿಲ್ಲೆಯ ಗಡಿಯಲ್ಲಿ 14 ಚೆಕ್‌ ಪೋಸ್ಟ್‌ಗಳಿವೆ. ಎಲ್ಲ ಚೆಕ್‌ ಪೋಸ್ಟ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಜಿಲ್ಲೆಯ ಒಳ ಬರುವ ಹಾಗೂ ಹೊರ ಹೋಗುವ ವಾಹನಗಳ ಪತ್ತೆಗೆ ಅನುಕೂಲ ಆಗಲಿದೆ’ ಎಂದು ತಿಳಿಸಿದರು.

ಪೃಥ್ವಿಕ್ ಶಂಕರ್

‘750 ಪ್ರಕರಣಗಳು ಪತ್ತೆ’

ವಾಹನ ಚಾಲನ ವೇಳೆ ಮೊಬೈಲ್ ಬಳಕೆ ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಓವರ್ ಸ್ಪೀಡ್ ಸೇರಿ ಇತರೆ ಟ್ರಾಫಿಕ್ ನಿಯಮ ಉಲ್ಲಂಘನೆಯಡಿ ಕಳೆದ ಮೂರು ವಾರಗಳಲ್ಲಿ 750 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ’ ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ತಿಳಿಸಿದರು. ‘750ರಲ್ಲಿ ಬಹುತೇಕ ಪ್ರಕರಣಗಳು ಚಾಲನ ವೇಳೆ ಮೊಬೈಲ್ ಬಳಕೆಗೆ ಸಂಬಂಧಿಸಿವೆ. ಹೀಗಾಗಿ ಡ್ರೈವಿಂಗ್‌ನಲ್ಲಿ ಮೊಬೈಲ್‌ ಬಳಸುವ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಕನಿಷ್ಠ ₹ 500 ದಂಡ ವಿಧಿಸಲಾಗುವುದು. ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಮೂವರು ಪೋಷಕರಿಗೆ ತಲಾ ₹ 25 ಸಾವಿರ ದಂಡ ಹಾಕಲಾಗಿದೆ. ಚಾಲಕರು ಬೈಕ್ ಸವಾರರು ತಪ್ಪದೇ ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದರು.