ADVERTISEMENT

ಕಣ್ವ ಮಠದಲ್ಲಿಂದು ಕಾಯಿ ಹಸ್ತಾಂತರ

ನಾಳೆ ಪಟ್ಟಾಭಿಷೇಕ, ನೂತನ ಯತಿಗಳಿಂದ ಮಠದಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 20:24 IST
Last Updated 16 ಅಕ್ಟೋಬರ್ 2019, 20:24 IST

ಕಕ್ಕೇರಾ: ಇಲ್ಲಿಗೆ ಸಮೀಪದಹುಣಸಿಹೊಳೆ ಕಣ್ವ ಮಠಕ್ಕೆ ನೂತನ ಪೀಠಾಧಿಕಾರಿಯನ್ನಾಗಿ ರವೀಂದ್ರಾಚಾರ್ಯ ಜೋಷಿ ಅವರ ಹೆಸರನ್ನು ಸುರಪುರ ಸಂಸ್ಥಾನಿಕರು ಘೋಷಣೆ ಮಾಡಿದ್ದು, ಮಠದಲ್ಲಿ ಗುರುವಾರ ಪ್ರಸ್ತುತ ಪೀಠಾಧಿಪತಿ ವಿದ್ಯಾವಾರಿಧಿ ತೀರ್ಥರಿಂದ ರವೀಂದ್ರಾಚಾರ್ಯ ಜೋಷಿ ಅವರಿಗೆ ಬೃಂದವನದಲ್ಲಿ ಕಾಯಿ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ನಂತರ ವಿರಜಾ ಹೋಮ, ವಪನ, ಆತ್ಮಶ್ರಾದ್ಧ, ವಿಧಿ ವಿಧಾನಗಳು ಜರುಗಲಿವೆ.ಅಕ್ಟೋಬರ್18 ರಂದು ಬೆಳಿಗ್ಗೆ 10 ಗಂಟೆಗೆ ಸಂಸ್ಥಾನ ದೀಕ್ಷಾಂಗ, ನಾನಾ ವಿಧ ಸ್ನಾನ, ಗ್ರಹಸ್ಥಾಶ್ರಮ ತ್ಯಾಗ, ಸನ್ಯಾಸ ದೀಕ್ಷೆ, ನೂತನಶ್ರೀಗಳ ನಾಮಕರಣ, ಮಧ್ಯಾಹ್ನ 12 ಗಂಟೆಗೆ ಪಟ್ಟಾಭಿಷೇಕ, ನೂತನ ಯತಿಗಳಿಂದ ಪೂಜೆ ನಡೆಯಲಿದೆ.ನಂತರ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

13ನೇ ಪೀಠಾಧಿಪತಿ:ಪ್ರಸ್ತುತ ಪೀಠಾಧಿಪತಿ ವಿದ್ಯಾವಾರಿಧಿ ತೀರ್ಥರು ಜೀವಂತ ಇರುವುದರಿಂದ ಅವರ ಸ್ಥಾನಕ್ಕೆ ಮುಂದುವರಿಯುವದರಿಂದ ನೂತನ ಪೀಠಾಧಿಪತಿ ವೀಂದ್ರಾಚಾರ್ಯ ಜೋಷಿ ಅವರು 13ನೇಯವರಾಗಿ ನೇಮಕಗೊಳ್ಳಲಿದ್ದಾರೆ. ಅನಿವಾರ್ಯವಾಗಿ ಪೀಠ ತ್ಯಾಗ ಮಾಡುವುದರಿಂದ ಅವರ ಸ್ಥಾನದಲ್ಲಿ ಮುಂದುವರೆಯುತ್ತೇನೆ ಎಂದು ನೂತನ ಪೀಠಾಧಿಪತಿ ರವೀಂದ್ರಾಚಾರ್ಯ ಜೋಷಿ ತಿಳಿಸಿದರು.

ADVERTISEMENT

ದೇಶದಲ್ಲಿರುವ ಏಕೈಕ ಕಣ್ವ ಮಠ, ಆಚಾರ, ನೇಮ, ವಿಚಾರ, ಶುಕ್ಲ ಯಜುರ್ವೇದ ಪಠಣದಲ್ಲಿ ವಿಶಿಷ್ಟತೆ ಹೊಂದಿದೆ.ಬೆಳಕನ್ನು ಕೊಡುವಂತ ವೇದಶುಕ್ಲ ಯಜುರ್ವೇದ ಪಠಣವನ್ನು ಮಠದ ಶಿಷ್ಯರೆ ಮಾಡುತ್ತಾರೆ ಎಂದು ಮಠದ ಭಕ್ತರು ಹೇಳಿದರು.

ಎರಡು ದಿನಗಳ ಕಾರ್ಯಕ್ರಮಕ್ಕೆ ಯಾದಗಿರಿ, ಸುರಪುರ, ರಾಯಚೂರು, ಕಲಬುರ್ಗಿ,ಬೆಂಗಳೂರು, ಮಹಾರಾಷ್ಟ್ರ ಸೇರಿದಂತೆ ಜಿಲ್ಲೆಯ ವಿವಿಧೆಡ ಮತ್ತು ಇತರೆಡೆಯಿಂದ ಭಕ್ತರು ಭಾಗವಹಿಸುತ್ತಾರೆ ಎಂದು ಮಠದ ಮೂಲಗಳು ತಿಳಿಸಿವೆ.

‘ಸಮಾಜದ ಅಂದ ಮೇಲೆ ಭಿನ್ನಾಭಿಪ್ರಾಯಗಳು ಇರುತ್ತವೆ. ಈಗ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಸುರಪುರ ಸಂಸ್ಥಾನದವರ ಜೊತೆ ಎರಡು ಮೂರು ಕುಳಿತು ಮಾತುಕತೆ ಮಾಡಲಾಗಿದೆ. ಇದರಲ್ಲಿ ವಾದ ವಿವಾದಗಳು ನಡೆದಿವೆ. ಸೂಕ್ತ ವ್ಯಕ್ತಿಯನ್ನು ಮಠದ ಪೀಠಾಧಿಪತಿಗೆ ಮಠದವರು ಸೂಚಿಸಿದ್ದರಿಂದ ನಮ್ಮ ಹೆಸರನ್ನು ಘೋಷಣೆ ಮಾಡಿದ್ದಾರೆ. ಗುರುವಾರ ಪೀಠರೋಹಣದ ಪ್ರಥಮ ಕಾರ್ಯ ಜರುಗಲಿದೆ. ಗ್ರಹಸ್ಥಾಶ್ರಮ ಹವನ, ಹೋಮ ಕಾರ್ಯಕ್ರಮ ನಡೆಯಲಿದೆ’ ಎಂದು ನೂತನ ಪೀಠಾಧಿಪತಿರವೀಂದ್ರಾಚಾರ್ಯ ಜೋಷಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***
ಕಣ್ವ ಮಠದ ಪರಂಪರೆ ಮಹತ್ವದ್ದುಳ್ಳಾಗಿದೆ. ಪೀಠಾಧಿಪತಿ ಸ್ಥಾನಕ್ಕೆ ಈ ಹಿಂದೆಯು ನಮ್ಮ ಹೆಸರು ಪ್ರಸ್ತಾವನೆಗೆ ಬಂದಿತ್ತು.ವಾದ ವಿವಾದಗಳು ಇಂದಿಗೆ ಮುಗಿತು, ಸ್ಪಷ್ಟವಾದ ತೀರ್ಮಾನ ಬಂದಿದೆ. ಸಮಾಜವು ಒಗ್ಗಟ್ಟಾಗಿ ಮುನ್ನೆಡೆಯಲಿದೆ.
-ರವೀಂದ್ರಾಚಾರ್ಯ ಜೋಷಿ, ನೂತನ ಪೀಠಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.