ADVERTISEMENT

ಸಾರಿಗೆ ನೌಕರರ ಮುಷ್ಕರ: ಮೂರನೇ ದಿನವೂ ತಪ್ಪದ ಸಂಕಷ್ಟ

ಯಾದಗಿರಿ ವಿಭಾಗದಲ್ಲಿ 8 ಬಸ್‌ಗಳ ಕಾರ್ಯಾಚರಣೆ; ಕರ್ತವ್ಯಕ್ಕೆ ಬಾರದ ಟ್ರೇನಿಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 4:23 IST
Last Updated 10 ಏಪ್ರಿಲ್ 2021, 4:23 IST
ಯಾದಗಿರಿಯ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಮೂಲಕ ಜನರು ಪ್ರಯಾಣಿಸಿದರು
ಯಾದಗಿರಿಯ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಮೂಲಕ ಜನರು ಪ್ರಯಾಣಿಸಿದರು   

ಯಾದಗಿರಿ: ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕರ್ತವ್ಯಕ್ಕೆ ಹಾಜರಾಗಲು ಟ್ರೇನಿಗಳಿಗೆ ನೋಟಿಸ್‌ ನೀಡಲಾಗಿದೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವ ಕಾರಣ ಮುಷ್ಕರಕ್ಕೆಇನ್ನೂ ತೆರೆಬಿದ್ದಿಲ್ಲ.

ಜಿಲ್ಲೆಯಲ್ಲಿ 12 ಟ್ರೇನಿಗಳು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಕರ್ತವ್ಯಕ್ಕೆ ಹಾಜರಾಗಲು ಮೇಲಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

8 ಬಸ್‌ಗಳ ಕಾರ್ಯಾಚರಣೆ: ಶುಕ್ರವಾರ ಯಾದಗಿರಿ ವಿಭಾಗದಲ್ಲಿ 8 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಯಾದಗಿರಿ–ಗುರುಮಠಕಲ್‌ 1, ಸುರಪುರ–ಯಾದಗಿರಿ 1, ಶಹಾಪುರ–ಯಾದಗಿರಿ 1, ಶಹಾಪುರ–ಗೋಗಿ 1, ಯಾದಗಿರಿ–ವಡಗೇರಾ–1, ಶಹಾಪುರ–ಸುರಪುರ–2, ಸುರಪುರ–ಶಹಾಪುರ 1 ಬಸ್‌ ಕಾರ್ಯಾಚರಣೆ ಮಾಡಿವೆ. ಕೆಲ ಬಸ್‌ಗಳು ಒಂದು, ಎರಡು, ಮೂರು ಬಾರಿ ಕಾರ್ಯಾಚರಣೆ
ಮಾಡಿವೆ.

ADVERTISEMENT

ತೆಲಂಗಾಣದಿಂದ 15 ಬಸ್‌ ಕಾರ್ಯಾಚರಣೆ: ನೆರೆಯ ರಾಜ್ಯ ತೆಲಂಗಾಣದಿಂದ 15 ಬಸ್‌ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡಿವೆ. ತೆಲಂಗಾಣದಿಂದ ಯಾದಗಿರಿಗೆ 10, ಗುರುಮಠಕಲ್‌ಗೆ 5 ಬಸ್‌ಗಳು ಪ್ರತಿ ನಿತ್ಯ ಬರುತ್ತಿವೆ.

‘ಹೆಚ್ಚು ಬಸ್‌ಗಳ ಕಾರ್ಯಾಚರಣೆ ನಡೆಸಲು ತೆಲಂಗಾಣ ಬಸ್‌ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ. ಆದರೆ, ಅವರು ಬೇಡಿಕೆಗಳ ಅನುಸಾರ ಕಾರ್ಯಾಚರಣೆ ಮಾಡುತ್ತಿದ್ದಾರೆ’ ಎಂದು ಎನ್‌ಇಕೆಆರ್‌ಟಿಸಿ ವಿಭಾಗೀಯ ಸಂಚಾನಾಧಿಕಾರಿ ರಮೇಶ ಪಾಟೀಲ ಮಾಹಿತಿ ನೀಡಿದರು.

ಬಸ್‌ಗಳು ಸಮರ್ಪಕವಾಗಿ ಓಡಾಟ ಇಲ್ಲದಿದ್ದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಗಂಟು ಮೂಟೆ ಹೊತ್ತುಕೊಂಡು ಆಟೊ, ಟಂಟಂ, ಕ್ರೂಸರ್‌ ವಾಹನಗಳಲ್ಲಿ ಜೀವ ಭಯಬಿಟ್ಟು ಪ್ರಯಾಣ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಇಂತಿಷ್ಟೇ ಹಣ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದರೂ ಮನಸಿಗೆ ಬಂದಂತೆ ಹಣ ಸುಲಿಗೆ ಮಾಡುತ್ತಿದ್ದಾರೆ. ಇತ್ತ ಅಧಿಕಾರಿಗಳು ಗಮನಹರಿಸಿ ಇದನ್ನು ತಡೆಗಟ್ಟಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

***

ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನ

ನಗರದ ಕೇಂದ್ರ ಮತ್ತು ಗ್ರಾಮಾಂತರ ಬಸ್‌ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ದರ್ಬಾರ್ ಜೋರಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ವಾಹನಗಳನ್ನು ಬಸ್‌ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬಸ್‌ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ಓಡಾಟ ಜೋರಾಗಿದೆ.

ಬಸ್‌ಗಳ ಮುಷ್ಕರದಿಂದ ವಾಹನಗಳ ಮೇಲೆ ಕುಳಿತು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಮೊದಲೆಲ್ಲ ಬಸ್‌ಗಳು ಹೆಚ್ಚಿದ್ದರಿಂದ ಟಾಪ್‌ ಪ್ರಯಾಣ ಕಡಿಮೆ ಇತ್ತು. ಈಗ ಬಸ್‌ ಬಂದ್‌ನಿಂದ ಖಾಸಗಿ ವಾಹನಗಳಲ್ಲಿ ಎಲ್ಲ ಕಡೆ ಟಾಪ್‌ ಪ್ರಯಾಣ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.