ADVERTISEMENT

ಕ್ಷಯ ರೋಗ: 19ನೇ ಸ್ಥಾನಕ್ಕೆ ಇಳಿದ ಯಾದಗಿರಿ ಜಿಲ್ಲೆ

ಜಿಲ್ಲೆಯಲ್ಲಿದ್ದಾರೆ 1,110 ಕ್ಷಯರೋಗಿಗಳು, 2019ರಲ್ಲಿ 28ನೇ ಸ್ಥಾನ

ಬಿ.ಜಿ.ಪ್ರವೀಣಕುಮಾರ
Published 24 ಮಾರ್ಚ್ 2021, 3:30 IST
Last Updated 24 ಮಾರ್ಚ್ 2021, 3:30 IST
ಯಾದಗಿರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಒಳಭಾಗದಲ್ಲಿ ಹುಬ್ಬು ಚಿತ್ರ, ಬರಹದ ಮೂಲಕ ಕ್ಷಯರೋಗದ ಜಾಗೃತಿ ಮೂಡಿಸಲಾಗುತ್ತಿದೆ
ಯಾದಗಿರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಒಳಭಾಗದಲ್ಲಿ ಹುಬ್ಬು ಚಿತ್ರ, ಬರಹದ ಮೂಲಕ ಕ್ಷಯರೋಗದ ಜಾಗೃತಿ ಮೂಡಿಸಲಾಗುತ್ತಿದೆ   

ಯಾದಗಿರಿ: ಕ್ಷಯರೋಗ ಪತ್ತೆಯಲ್ಲಿ ಜಿಲ್ಲೆಯೂ 19ನೇ ಸ್ಥಾನಕ್ಕೆ ಇಳಿದಿದೆ. 2019ರಲ್ಲಿ 28ನೇ ಸ್ಥಾನದಲ್ಲಿತ್ತು. 2020ರಲ್ಲಿ ಹೆಚ್ಚು ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಮೂಲಕ ಕ್ಷಯ ರೋಗ ನಿರ್ಮೂಲನೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಮಾರ್ಚ್‌ 24ರಂದು ವಿಶ್ವ ಕ್ಷಯ ರೋಗ ದಿನ ಆಚರಿಸಲಾಗುತ್ತಿದೆ. ‘ಕ್ಷಯರೋಗ ನಿರ್ಮೂಲನೆಗೆ ಕಾಲ ಘಟಿಸುತ್ತಿದೆ’ ಎನ್ನುವುದು ಈ ವರ್ಷದ ಘೋಷ ವಾಕ್ಯವಾಗಿದೆ.

ಕ್ಷಯರೋಗ (ಟಿಬಿ) ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯೂಲೋಸಿಸ್‌ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಕೆಮ್ಮುವುದರ ಮೂಲಕ ಗಾಳಿಯ ಮೂಲಕ ಹರಡುತ್ತದೆ. ನಿರಂತರವಾಗಿ ವಾಸಿಯಾಗದ ಕೆಮ್ಮು ಟಿಬಿಯ ಅತಿ ಸಾಮಾನ್ಯ ಲಕ್ಷಣವಾಗಿದೆ.

ADVERTISEMENT

ಜಿಲ್ಲೆಯ ಸಾರ್ವಜನಿಕರು ಮಹಾನಗರಗಳಿಗೆ ವಲಸೆ ಹೋಗುವುದು ಸಾಮಾನ್ಯ ಸಂಗತಿ. ಇಂಥ ವೇಳೆ ಕ್ಷಯರೋಗಿಗಳು ಔಷಧಿ ಬಿಟ್ಟರೆ ಅದು ಮತ್ತೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

‘ಎಚ್‌ಐವಿ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗ ಬಂದೆ ಸಾಯುತ್ತಾರೆ. ಹೀಗಾಗಿ ಕನಿಷ್ಠ 6 ತಿಂಗಳು ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯ. ಹೀಗಾಗಿ ಕ್ಷಯರೋಗಿಗಳು ತಪ್ಪದೇ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ’ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು.

ಮರಣ ಪ್ರಮಾಣ: ಜಿಲ್ಲೆಯಲ್ಲಿ ಸಾವಿರ ಕ್ಷಯ ರೋಗಿಗಳಲ್ಲಿ ಕೇವಲ 10 ಜನರು ಮೃತಪಡುತ್ತಿದ್ದಾರೆ. 2015ರಲ್ಲಿ ಶೇ 10, 2016ರಲ್ಲಿ ಶೇ 11, 2017ರಲ್ಲಿ ಶೇ 6, 2018ರಲ್ಲಿ ಶೇ 6.2, 2019ರಲ್ಲಿ 7.6, 2020ರಲ್ಲಿ ಶೇ 6.3ರಷ್ಟು ಸಾವಿನ ಪ್ರಮಾಣ ದಾಖಲಾಗಿದೆ.

ಚಿಕಿತ್ಸೆ ಪಡೆದವರ ಸಂಖ್ಯೆ ಕಡಿಮೆ:ಜಿಲ್ಲೆಯಲ್ಲಿ 2015ರಲ್ಲಿ ಶೇ100ರಲ್ಲಿ ಶೇ 12ರಷ್ಟು ರೋಗಿಗಳು ಒಂದೆರಡು ತಿಂಗಳು ಪಡೆದು ನಂತರ ಔಷಧಿ ಸೇವನೆ ಬಿಟ್ಟುಬಿಡುತ್ತಿದ್ದರು. ಈಗ 2020ರಲ್ಲಿ ಶೇ 1.6ರಷ್ಟು ಮಾತ್ರ ಔಷಧಿ ಪಡೆಯದೇ ಇರುವ ರೋಗಿಗಳುಕಂಡು ಬರುತ್ತಿದ್ದಾರೆ.

ಕ್ಷಯ ರೋಗ ಶಂಕಿತರು: 2015ರಿಂದ 2020ರ ವರೆಗೆ ಕ್ಷಯರೋಗ ಶಂಕಿತರನ್ನು ಪತ್ತೆ ಹಚ್ಚಿ ಅವರನ್ನು ತಪಾಸಣೆ ಮಾಡಲಾಗುತ್ತಿದೆ.
2015ರಲ್ಲಿ 9,289, 2016ರಲ್ಲಿ 9,258, 2017ರಲ್ಲಿ 8,821, 2018ರಲ್ಲಿ 11,721, 2019ರಲ್ಲಿ 17,715, 2020ರಲ್ಲಿ 11,337 ಶಂಕಿತರನ್ನು ಪತ್ತೆ ಹಚ್ಚಲಾಗಿದೆ.

‘ಒಬ್ಬ ಕ್ಷಯರೋಗಿ ತನ್ನ ಸುತ್ತಮುತ್ತಲಿನ 10 ಜನರಿಗೆ ಕ್ಷಯರೋಗವನ್ನು ಹರಡಬಲ್ಲನು. ಹೀಗಾಗಿ ನಾವು ಶಂಕಿತರನ್ನು ಪರೀಕ್ಷೆ ಮಾಡಿ ನಂತರ ಅವರಲ್ಲಿ ಕ್ಷಯ ಇರುವುದು ದೃಢಪಟ್ಟರೆ ಔಷಧಿ ಸೇವನೆಗೆ ಪ್ರೇರೇಪಿಸಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಲಕ್ಷ್ಮೀಕಾಂತ.

ಇದರ ಜೊತೆಗೆ ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಕ್ಷಯರೋಗಿಗೆ ಮಾಸಿಕ ₹500 ಆಹಾರದ ಸಲುವಾಗಿ ಗೌರವ ಧನ ಪೂರ್ಣ ಚಿಕಿತ್ಸೆ ಆಗುವವರಿಗೆ ನೀಡಲಾಗುತ್ತಿದೆ. ಕ್ಷಯ ರೋಗಿಯನ್ನು ಕಂಡು ಹಿಡಿದು ಕೊಟ್ಟ ಆಶಾ, ವೈದ್ಯರಿಗೂ ₹500 ಗೌರವ ಧನ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

2025ರ ವೇಳೆ ಕ್ಷಯರೋಗ ನಿರ್ಮೂಲನೆ ಗುರಿ: ದೇಶದಲ್ಲಿ 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರಂತೆ ಜಿಲ್ಲೆಯಲ್ಲೂ ಈ ಗುರಿ ತಲುಪಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.

ಡಯಾಲಿಸಿಸ್‌ಗಳಲ್ಲೂ ಟಿಬಿ: ಕ್ಷಯರೋಗ ಈಗ ಡಯಾಲಿಸಿಸ್‌ ರೋಗಿಗಳಲ್ಲೂ ಪತ್ತೆಯಾಗುತ್ತಿದೆ. ವೈದ್ಯರೂ ಕೂಡ ಡಯಾಲಿಸಿಸ್‌ ರೋಗಿಗಳನ್ನು ಟಿಬಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 2017ರಿಂದ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. 2017ರಲ್ಲಿ ಶೇ 4.2, 2018ರಲ್ಲಿ ಶೇ 4.7, 2019ರಲ್ಲಿ ಶೇ 3.9, 2020ರಲ್ಲಿ ಶೇ 3.7 ರಷ್ಟು ರೋಗಿಗಳಲ್ಲಿ ಕ್ಷಯರೋಗ ಪತ್ತೆಯಾಗಿದೆ.

***
ಜಿಲ್ಲೆಯಲ್ಲಿ ಕ್ಷಯರೋಗಿಗಳ ಗುಣಮುಖದಲ್ಲಿ ಶೇ 83 ರಷ್ಟಿದೆ. ರೋಗಿಗಳು ನಿರಂತರ 6 ತಿಂಗಳು ಔಷಧಿ ತೆಗೆದುಕೊಂಡರೆ ನಿರ್ಮೂಲನೆ ಮಾಡಲು ಸಾಧ್ಯ.
-ಡಾ. ಲಕ್ಷ್ಮೀಕಾಂತ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.