ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸಲಿರುವ 2025-26ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ಸಿಗುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದಾರೆ.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ತವರೂರಲ್ಲಿ ಕೈಗಾರಿಕೆಗಳ ಪರ್ವ ಆರಂಭವಾಗಬೇಕಿದೆ.
ಬ್ರಿಜ್ ಕಂ ಬ್ಯಾರೇಜ್, ಸಣ್ಣ, ಬೃಹತ್ ಕೈಗಾರಿಕೆಗೆ ಉತ್ತೇಜನ, ಹೊಸ ತಾಲ್ಲೂಕುಗಳಿಗೆ ಸೌಕರ್ಯ, ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹಧನ, ಶೈಕ್ಷಣಿಕ ಕ್ಷೇತ್ರದಲ್ಲಿ ಹುದ್ದೆಗಳ ಭರ್ತಿ, ಹತ್ತಿ ಬೆಳೆಗೆ ಪ್ರೋತ್ಸಾಹ, ಪ್ರವಾಸೋದ್ಯಮಕ್ಕೆ ಒತ್ತು ಇತ್ಯಾದಿ ನಿರೀಕ್ಷೆಯನ್ನು ಹೊಂದಲಾಗಿದೆ.
ಜಿಲ್ಲೆಯಾಗಿ ಒಂದೂವರೆ ದಶಕವಾಗಿದ್ದು, ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಹಾಗೂ ಶಾಲಾ- ಕಾಲೇಜಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯೇ ಆಗಿಲ್ಲ. ಬಸ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಜಿಲ್ಲೆಯಲ್ಲಿ ಭೀಮಾ- ಕೃಷ್ಣಾ ನದಿ ಹರಿಯುತ್ತಿದ್ದರೂ, ಶುದ್ಧ ಕುಡಿಯುವ ನೀರು ದೊರಕಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಅಭಿವೃದ್ಧಿ ಹೊಂದಿದ ಜಿಲ್ಲೆಗಳಿಗೆ ಸರಿಸಮಾನವಾಗಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಬಜೆಟ್‌ನಲ್ಲಿ ವಿಶೇಷ ಯೋಜನೆ ಘೋಷಿಸುವ ಮೂಲಕ ಅಭಿವೃದ್ಧಿಯ ಪರ್ವ ಆರಂಭಗೊಳ್ಳಲಿ ಎನ್ನುವುದು ಜಿಲ್ಲೆಯ ಜನತೆ ಆಗ್ರಹ ಪೂರ್ವಕ ಮನವಿಯಾಗಿದೆ.
ಪ್ರವಾಸೋದ್ಯಮಕ್ಕೆ ಬೇಕು ವಿಶೇಷ ಪ್ಯಾಕೇಜ್: ಜಿಲ್ಲೆಯಲ್ಲಿ ಪ್ರಾಗೈತಿಹಾಸಿಕ ಸೇರಿದಂತೆ ಹಲವಾರು ಪ್ರವಾಸಿ ತಾಣಗಳಿವೆ. ಇವುಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಸೊರಗುತ್ತಿವೆ. ಇವುಗಳ ಉತ್ತೇಜನಕ್ಕಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ವಿಶಿಷ್ಟವಾದ ಪ್ರವಾಸಿ ತಾಣಗಳಿವೆ.
ಹುಣಸಗಿ ತಾಲ್ಲೂಕಿನ ನಾರಾಯಣಪುರ ಜಲಾಶಯ, ಯಾದಗಿರಿ ತಾಲ್ಲೂಕಿನ ಸೌದಗಾರ, ಹತ್ತಿಕುಣಿ ಜಲಾಶಯಗಳಿಗೆ ಕಾಯಕಲ್ಪ ಬೇಕಿದೆ.
ಯಾದಗಿರಿ ತಾಲ್ಲೂಕಿನ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ 3 ಸಾವಿರ ಎಕರೆ ಭೂಸ್ವಾಧೀನ ಪಡೆಸಿಕೊಂಡಿರುವ ಸರ್ಕಾರ, ಅಲ್ಲಿ ಕೆಲ ಕಂಪನಿಗಳು ಸ್ಥಾಪನೆಯಾಗಿದ್ದು, ಸ್ಥಳೀಯರಿಗೆ ಉದ್ಯೋಗ ಇಲ್ಲದಂತೆ ಆಗಿದೆ. ರೈಲ್ವೆ ಕೋಚ್‌ನಲ್ಲಿ ಮುಚ್ಚುವ ಸ್ಥಿತಿ ತಲುಪಿದೆ.
ಯಾದಗಿರಿ ನಗರ ಕೇಂದ್ರಿತವಾಗಿಯೂ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಕೈಗಾರಿಕೋದ್ಯಮಿಗಳ ಒತ್ತಡವಿದೆ. ಜಿಲ್ಲೆಯಲ್ಲಿ ಹತ್ತಿ ಯಥೇಚ್ಛವಾಗಿ ಬೆಳೆಯುತ್ತಿರುವುದರಿಂದ ಸರ್ಕಾರದಿಂದ ಸ್ಪಿನ್ನಿಂಗ್ ಮಿಲ್, ಸಾಲ್ವೆಂಟ್ ಪ್ಲಾಂಟ್ ಸ್ಥಾಪನೆ ಮಾಡಬೇಕಾಗಿದೆ. ಜಿಲ್ಲೆಯ ಅರ್ಧ ಭಾಗ ನೀರಾವರಿಯಿಂದ ವಂಚಿತವಾಗಿದ್ದು, ಒಣ ಬೇಸಾಯವನ್ನೇ ಅವಲಂಬಿಸುವ ಪರಿಸ್ಥಿತಿ ಇದ್ದು, ರೈತರ ಜಮೀನುಗಳಿಗೆ ನೀರುಣಿಸಲು ಅನುಕೂಲವಾಗುವ ಯೋಜನೆ ಘೋಷಿಸಬೇಕಿದೆ.
ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭತ್ತ, ಮೆಣಸಿನಕಾಯಿ ಬೆಳೆಯುತ್ತಿದ್ದು, ಬೆಲೆ ಕುಸಿತವಾದ ಸಂದರ್ಭದಲ್ಲಿ ಅದನ್ನು ಶೇಖರಣೆ ಮಾಡಿಟ್ಟುಕೊಳ್ಳಲು ಶೀತಲೀಕರಣ ಘಟಕದ ದಾಸ್ತಾನು ಮಳಿಗೆ ವ್ಯವಸ್ಥೆ ಇಲ್ಲ. ಆದ್ದರಿಂದ ರೈತರು ಇದ್ದ ಕಡಿಮೆ ಬೆಲೆಗೆ ಭತ್ತವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲಲ್ಲಿ ದಾಸ್ತಾನು ಮಳಿಗೆ ನಿರ್ಮಾಣಕ್ಕೆ ಮುಂದಾಗಬೇಕಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಯಾಗಿರುವ ಯಾದಗಿರಿ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಹೀಗಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆಗಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.
ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ. ಸೇತುವೆ ಪ್ರತಿವರ್ಷವೂ ಮಳೆಗಾಲದಲ್ಲಿ ಮುಳುಗಡೆಯಾಗುವುದರಿಂದ ಹೊಸದಾಗಿ ಎತ್ತರದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿ ಭೀಮಾ ನದಿಯ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಘೋಷಿಸಬೇಕಿದೆಶಿವರೆಡ್ಡಿ ಪಾಟೀಲ ಕೊಳ್ಳೂರು (ಎಂ) ಗ್ರಾಮಸ್ಥ
ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಜಿಲ್ಲೆಯಲ್ಲಿಯೇ ರಸ್ತೆ ಶಿಕ್ಷಣ ಸಾರಿಗೆ ಆರೋಗ್ಯ ಕೈಗಾರಿಕೆ ನಿರುದ್ಯೋಗ ನೀರಾವರಿ ಇದ್ದರೂ ಬೆಳೆದ ಬೆಳೆಗೆ ಬೆಲೆಯಿಲ್ಲ. ಜಿಲ್ಲೆಗೆ ಬೆಟ್ಟದಷ್ಟು ನೀರಿಕ್ಷೆಯಿದ್ದು ಆದರೆ ಸಾಸಿವೆ ಕಾಳಿನಷ್ಟಾದರೂ ಸಿಗುತ್ತದಾ ನೋಡಬೇಕುಅಶೋಕ ಮಲ್ಲಾಬಾದಿ ಪ್ರಗತಿಪರ ರೈತ
ಯಾದಗಿರಿ ಶಹಾಪುರ ಸುರಪುರ ತಾಲ್ಲೂಕುಗಳಿಂದ ಕ್ರಮವಾಗಿ ಗುರುಮಠಕಲ್ ವಡಗೇರಾ ಹುಣಸಗಿ ತಾಲ್ಲೂಕುಗಳಾಗಿ ಬೇರ್ಪಡಿಸಿ ಹೊಸ ತಾಲ್ಲೂಕುಗಳಾಗಿ ರಚಿಸಲಾಗಿದೆ. ಆದರೆ ಇದು ಘೋಷಣೆಗೆ ಸಿಮೀತವಾಗಿದೆ. 8 ವರ್ಷಗಳಿಂದ ಸಮರ್ಪಕ ಅನುದಾನವಿಲ್ಲದೆ ಇನ್ನೂ ಶೈಶವಾವಸ್ಥೆಯಲ್ಲಿವೆ. ಆಡಳಿತ ಭವನ ಹಲವಾರು ಇಲಾಖೆ ಕಚೇರಿಗಳು ಬೇಕಿದೆ. ಸೂಕ್ತ ಕಚೇರಿಗಳು ಆರಂಭಿಸಿ ಅಗತ್ಯ ಸಿಬ್ಬಂದಿ ನೇಮಿಸುವ ಮೂಲಕ ಅಭಿವೃದ್ಧಿ ಮಾಡಲು ಅನುದಾನ ಕಲ್ಪಿಸುವುದು ಸೇರಿ ಅಗತ್ಯ ಕ್ರಮಗಳನ್ನು ಸರ್ಕಾರದಿಂದ ಮಾಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.