ADVERTISEMENT

‘ಶರಣರ ವಚನಗಳನ್ನು ಅರ್ಥೈಯಿಸಿಕೊಳ್ಳಿ’

ಶರಣ ಸಾಹಿತ್ಯ ಪರಿಷತ್ತಿನಿಂದ ವಚನ ದಿನ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 14:41 IST
Last Updated 29 ಆಗಸ್ಟ್ 2019, 14:41 IST
ಯಾದಗಿರಿಯ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ–ತಾಲ್ಲೂಕು ಶರಣ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು
ಯಾದಗಿರಿಯ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ–ತಾಲ್ಲೂಕು ಶರಣ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು   

ಯಾದಗಿರಿ: ‘ಶರಣರ ವಚನಗಳು ಅರ್ಥಗರ್ಭಿತವಾಗಿದ್ದು, ಇವುಗಳನ್ನು ಅರ್ಥೈಯಿಸಿಕೊಳ್ಳಬೇಕು. ವಚನಗಳು ಸುಖ ಸಂಸಾರಕ್ಕೆ ಅವಶ್ಯ’ ಎಂದು ಲಿಂಗೇರಿ ಕೋನಪ್ಪ ಮಹಿಳಾ ಪಿಯು ಪದವಿ ಕಾಲೇಜು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿದ್ರಾಮಪ್ಪಗೌಡ ಚೇಗುಂಟಾ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ಲಿಂಗೇರಿ ಕೋನಪ್ಪ ಮಹಿಳಾ ಪಿಯು ಪದವಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸುತ್ತೂರು ಜಗದ್ಗುರು ಲಿಂ.ಡಾ.‌ರಾಜೇಂದ್ರ ಸ್ವಾಮೀಜಿ ಜನ್ಮದಿನ ಹಾಗೂ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಚನಗಳು ಇಲ್ಲದೆ ನಾವಿಲ್ಲ. ಹೀಗಾಗಿ ವಚನಗಳನ್ನು ಗ್ರಹಿಸುವ ಮೂಲಕ ಅವುಗಳನ್ನು ಪರಿಪಾಟಿಸಬೇಕು ಎಂದರು.

ADVERTISEMENT

ಸರ್ವಜ್ಞ ಕಾಲೇಜು ಪ್ರಾಚಾರ್ಯ ಗಂಗಾಧರ ಬಡಿಗೇರ ‘ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ‘ಇಂದಿನ ದಿನಮಾನಗಳಲ್ಲಿ ಸಮಾಜದ ಮನಸ್ಸುಗಳು ಚಿಂದಿ ಚಿಂದಿಯಾಗಿವೆ. ಅವನ್ನು ಕೂಡಿಸಿ ಜೋಡಿಸಿ ಹೊಲಿದು ಕೌದಿಯಾಗಿಸಿ ಮರು ಜೋಡಣೆ ಮಾಡಬೇಕಿದೆ. ಇದಕ್ಕೆ ವಚನಗಳ ನೆರವು ಪಡೆಯಬೇಕಿದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ವಚನ ದಿನವಾಗಿ ಲಿಂ.ಡಾ.‌ರಾಜೇಂದ್ರ ಸ್ವಾಮೀಜಿ ಅವರ ಜನ್ಮದಿನದಂದು ಆಯೋಜಿಸಿದ್ದ ಕಾರ್ಯಕ್ರಮ ಮಾದರಿಯಾಗಿದ್ದು, ಶ್ರೀಗಳ ಜನ್ಮದಿನವೇ ಶರಣ ಸಾಹಿತ್ಯ ಪರಿಷತ್ತು ಜನ್ಮ ತಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.

ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜೀವನ ಸಾಧನೆ ಕುರಿತು ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ವೆಂಕಟೇಶ ಕಲಾಲ ಮಾತನಾಡಿ, ‘ಹಳಕಟ್ಟಿಯವರ ಕೊಡುಗೆ ಅವರ ಶ್ರಮ, ಸಾಧನೆ ಫಲವಾಗಿ ನಾವಿಂದು ವಚನಗಳನ್ನು ಕಾಣವಂತೆ, ಓದುವಂತಾಗಿದೆ ಎಂದರು. ಅವರು ತಮ್ಮ ಇಡೀ ಜೀವನ ಪರ್ಯಂತರ ಸಂಘರ್ಷ ಮಾಡಿ ವಚನಗಳನ್ನು ಸಂಶೋಧಿಸಿ ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿದರು.

ಆಶಯ ಭಾಷಣ ಮಾಡಿದ ಜಿಲ್ಲಾ ಶಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಶರಣರ ಬದುಕಿನ ಬದುಕಿದ ರೀತಿಯನ್ನು ಅರ್ಥ ಮಾಡಿಸಲು ಪರಿಷತ್ತು ನಿರಂತರ ಯತ್ನಿಸುತ್ತಿದೆ ಎಂದು ಹೇಳೀದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಆರ್‌.ಮಹಾದೇವಪ್ಪ ಅಬ್ಬೆತುಮಕೂರ,ಯಾದಗಿರಿ ತಾಲ್ಲೂಕು ಅಧ್ಯಕ್ಷ ಗುರಪ್ಪ ಮೋ. ವಿಶ್ವಕರ್ಮ, ಸುರಪುರ ತಾಲ್ಲೂಕು ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಅಯ್ಯಣ್ಣ ಹುಂಡೇಕಾರ್, ವಿದ್ಯಾ ಸಂಸ್ಥೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮೌನಾಚರಣೆ:ಇದೇ ಸಂದರ್ಭದಲ್ಲಿ ಗುರುವಾರ ನಿಧನರಾದ ನಗರಸಭೆ ಮಾಜಿ ಉಪಾಧ್ಯಕ್ಷ, ಕಸಾಪ, ಶಸಾಪ ಸದಸ್ಯರೂ ಆದ ಮಲ್ಲಯ್ಯ ಗುಂದೆನೂರು ಅವರಿಗೆ 1 ನಿಮಿಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಸಾಪ ಏರ್ಪಡಿಸಿದ್ದ ವಚನ ಪಠಣ ಸ್ಪರ್ಧೆ ವಿಜೇತರಾದ ಪಿಯು ವಿಭಾಗದಲ್ಲಿ ಅನುಕ್ರಮವಾಗಿ ಚೆನ್ನಮ್ಮ, ಅಂಕಿತಾ, ಶಿಲ್ಪಾ, ಪದವಿ ವಿಭಾಗದಲ್ಲಿ ಶೋಭಾ ದಳವಾಯಿ, ನೇತ್ರಾವತಿ ಅಂಬಿಕಾರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.

ಜ್ಯೋತಿ ಪತ್ತಾರ, ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ನಿವೇದಿತಾ, ಸ್ವಾತಿ ಪ್ರಾರ್ಥನೆ, ವಚನ ಗೀತೆ ಹಾಡಿದರು. ಉಪನ್ಯಾಸಕ ಸತೀಶ ಹವಲ್ದಾರ ವಂದನಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.