
ಯಾದಗಿರಿ: ಕೋವಿಡ್ ವೇಳೆ ರದ್ದಾಗಿದ್ದ ಕಲಬುರಗಿ-ಗುಂತಕಲ್ ಇಂಟರ್ ಸಿಟಿ ಪ್ಯಾಸೆಂಜರ್ ರೈಲು ಪುನಾರಂಭ ಮಾಡಬೇಕು ಎನ್ನುವ ಜಿಲ್ಲೆಯ ಪ್ರಯಾಣಿಕರ ಬೇಡಿಕೆ ಇನ್ನೂ ಈಡೇರಿಲ್ಲ.
ಈ ಭಾಗದ ಜನತೆ ಈ ಕುರಿತು ರಾಯಚೂರು-ಯಾದಗಿರಿ ಮತ್ತು ಕಲಬುರಗಿಯ ಸಂಸದರಲ್ಲಿ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಕಲಬುರಗಿ–ಗುಂತಕಲ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನಾಲ್ಕು ವರ್ಷ ಕಳೆದರೂ ಈ ರೈಲು ಪುನಾರಂಭವಾಗಿಲ್ಲ. ಇದರಿಂದ ಕಲಬುರಗಿ, ಶಹಾಬಾದ್, ವಾಡಿ, ನಾಲವಾರ, ಯಾದಗಿರಿ, ಸೈದಾಪುರ, ರಾಯಚೂರು, ಮಂತ್ರಾಲಯಕ್ಕೆ ಪ್ರತಿದಿನ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ದೇವಸೂಗೂರ (ಶಕ್ತಿನಗರ) ಸೂಗೂರೇಶ್ವರ ದೇವಸ್ಥಾನ, ಮಂತ್ರಾಲಯದ ರಾಘವೇಂದ್ರಸ್ವಾಮಿ ದೇವಾಲಯ ಹೀಗೆ ಹಲವು ಧಾರ್ಮಿಕ ದೇವಸ್ಥಾನಗಳು ಇರುವುದರಿಂದ ಭಕ್ತರು ಕುಟುಂಬ ಪರಿವಾರ ಸಮೇತ ಈ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು.
ದೇಶದಲ್ಲಿ ತೀವ್ರಗತಿಯಲ್ಲಿ ಕೋವಿಡ್ ಆರಂಭವಾದ ನಂತರ ರೈಲ್ವೆ ಇಲಾಖೆ ಎಲ್ಲ ರೈಲುಗಳನ್ನು ಸ್ಥಗಿತ ಮಾಡಿತ್ತು. ಕೋವಿಡ್ ಇಳಿಕೆಯಾದ ನಂತರ ಎಕ್ಸ್‌ಪ್ರೆಸ್ ರೈಲುಗಳನ್ನು ಹಂತ ಹಂತವಾಗಿ ಆರಂಭಮಾಡಿತ್ತು. ಆದರೆ, ಕಲಬುರಗಿ–ರಾಯಚೂರು– ಗುಂತಕಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಇನ್ನೂ ಆರಂಭವಾಗಿಲ್ಲ. ಸಾವಿರಾರು ಪ್ರಯಾಣಿಕರು ಈ ರೈಲು ಮೇಲೆ ಅವಲಂಬಿತರಾಗಿದ್ದರು.
ಅಲ್ಲದೆ ರಾಯಚೂರು, ಕಲಬುರಗಿ ಆಸ್ಪತ್ರೆಗಳಿಗೆ ಹೋಗಿ ಬರಲು ಜನರಿಗೆ ಈ ರೈಲು ಅವಶ್ಯಕವಾಗಿದೆ. ದಿನನಿತ್ಯ ಪ್ರಯಾಣಿಸುವ ಸರ್ಕಾರಿ ನೌಕರರಿಗೂ ಈ ಪ್ಯಾಸೇಂಜರ್ ಬಹಳ ತುಂಬಾ ಉಪಯುಕ್ತವಾಗಿದೆ.
ರಾಯಚೂರು–ವಿಜಯಪುರ ಪ್ಯಾಸೆಂಜರ್ ರೈಲು ಪುನಾರಂಭವಾಗಿದ್ದು, ಬೆಳಿಗಿನ ವೇಳೆಯಲ್ಲಿ ರಾಯಚೂರುನಿಂದ ಕಲಬುರಗಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಿದೆ. ಸಂಜೆ 6 ಗಂಟೆಗೆ ಮತ್ತೆ ಕಲಬುರಗಿ ಮಾರ್ಗವಾಗಿ ರಾಯಚೂರು ಪ್ಯಾಸೆಂಜರ್ ರೈಲು ಇದೆ. ಆದರೆ, ಕಲಬುರಗಿ- ಯಾದಗಿರಿ-ಗುಂತಕಲ್ ರೈಲು ಇನ್ನೂ ಆರಂಭವಾಗಿಲ್ಲ. ಕೂಡಲೇ ಆರಂಭಿಸಬೇಕು ಎನ್ನುವುದು ಈ ಭಾಗದ ಪ್ರಯಾಣಿಕರ ಒತ್ತಾಯವಾಗಿದೆ.
ಕಲಬುರಗಿ–ಗುಂತಕಲ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡಿರುವ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆಯಲಾಗುವುದು. ಈ ಕುರಿತು ಅಗತ್ಯ ನೋಡಿಕೊಂಡು ಸಂಬಂಧಿಸಿದ ಸಚಿವರಿಗೆ ಮನವಿ ಮಾಡಲಾಗುವುದುಜಿ.ಕುಮಾರನಾಯಕ ರಾಯಚೂರು ಸಂಸದ
ಅತಿಹೆಚ್ಚು ಆದಾಯ ನೀಡುವ ಯಾದಗಿರಿ ರೈಲ್ವೆ ನಿಲ್ದಾಣ ಇದಾಗಿದ್ದು ಕೋವಿಡ್-19 ಸಂದರ್ಭದಲ್ಲಿ ಬಂದ್ ಆಗಿರುವ ಇಂಟರ್‌ಸಿಟಿ ರೈಲು ಮತ್ತೆ ಆರಂಭಿಸಬೇಕು. ನಿಲ್ದಾಣದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕುಉಮೇಶ ಮುದ್ನಾಳ ಸಾಮಾಜಿಕ ಕಾರ್ಯಕರ್ತ
ವ್ಯಾಪಾರಸ್ಥರು ನೌಕರರಿಗೆ ಅನುಕೂಲ ಕಲಬುರಗಿ- ಯಾದಗಿರಿ-ಗುಂತಕಲ್ ಪ್ಯಾಸೆಂಜರ್ ರೈಲು ವ್ಯಾಪಾರಸ್ಥರು ನೌಕರರಿಗೆ ಅನುಕೂಲವಾಗಿತ್ತು. ಕಲಬುರಗಿಯಿಂದ ಶಿಕ್ಷಕರು ಸರ್ಕಾರಿ ನೌಕರರು ಖಾಸಗಿ ನೌಕರರು ತಿಂಗಳು ಪಾಸ್ ಮಾಡಿಸಿ ಓಡಾಡ ನಡೆಸುತ್ತಿದ್ದರು. ಇದರ ಜೊತೆಗೆ ವ್ಯಾಪಾರಸ್ಥರು ತಮ್ಮ ವಹಿವಾಟಿಗೆ ಈ ರೈಲನ್ನು ಅವಲಂಬಿಸಿದ್ದಾರೆ. ಹೆಚ್ಚು ಆದಾಯ ತರುವ ರೈಲ್ವೆ ನಿಲ್ದಾಣ: ದಕ್ಷಿಣ ಮಧ್ಯ ರೈಲ್ವೆಯಲ್ಲಿ ಹೆಚ್ಚು ಆದಾಯ ತರುವ ಸ್ಥಾನದಲ್ಲಿ ಯಾದಗಿರಿ ರೈಲ್ವೆ ನಿಲ್ದಾಣವಾಗಿದೆ ಎನ್ನಲಾಗುತ್ತಿದೆ. ಆದರೆ ಇಲ್ಲಿಯೇ ಅನೇಕ ರೈಲುಗಳು ನಿಲ್ಲುತ್ತಿಲ್ಲ. ಇವುಗಳನ್ನು ನಿಲ್ಲಿಸಲು ಜಿಲ್ಲೆಯ ಜನರ ಒತ್ತಾಯವಾಗಿದೆ. ಆದರೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಜಿಲ್ಲೆ ಪ್ರತಿನಿಧಿಸುವ ಇಬ್ಬರು ಸಂಸದರು ಯಾದಗಿರಿ ಜಿಲ್ಲೆಯನ್ನು ಇಬ್ಬರು ಸಂಸದರು ಪ್ರತಿನಿಧಿಸುತ್ತಿದ್ದಾರೆ. ಯಾದಗಿರಿ ಶಹಾಪುರ ಸುರಪುರವನ್ನು ರಾಯಚೂರು ಸಂಸದ ಜಿ.ಕುಮಾರನಾಯಕ ಪ್ರತಿನಿಧಿಸಿದರೆ ಗುರುಮಠಕಲ್ ಮತಕ್ಷೇತ್ರವನ್ನು ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಪ್ರತಿನಿಧಿಸುತ್ತಾರೆ. ಸಂಸದರು ಕೇಂದ್ರ ಸಚಿವ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಪ್ಯಾಸೆಂಜರ್ ರೈಲನ್ನು ಪುನಾರಂಭಿಸಬೇಕು ಎನ್ನುವುದು ಈ ಭಾಗದ ಪ್ರಯಾಣಿಕರ ಒತ್ತಾಯವಾಗಿದೆ. ‘ಗುಂತಕಲ್ ಮಂತ್ರಾಲಯ ಹೊರತುಪಡಿಸಿದರೆ ಅತಿಹೆಚ್ಚು ಆದಾಯ ನೀಡುವ ಯಾದಗಿರಿ ರೈಲ್ವೆ ನಿಲ್ದಾಣ ಇದಾಗಿದ್ದು ಅಲ್ಲದೇ ಈ ಭಾಗದಿಂದ ಮಹಾನಗರಗಳಿಗೆ ಗುಳೆ ತೆರಳುತ್ತಾರೆ. ಹೀಗಾಗಿ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಾಡಿಗಳಿಗೆ ಎರಡು ಸಾರ್ವಜನಿಕ ಬೋಗಿಗಳನ್ನು ಅಳವಡಿಸಿ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಭೀಮಣ್ಣ ನಾಯಕ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.