ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಸೈದಾಪುರ: ಪಟ್ಟಣದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶೆಟ್ಟಿಹಳ್ಳಿ, ಸೈದಾಪುರ, ಬಾಲಚೇಡ, ಗ್ರಾಮ ಸೈದಾಪುರ, ರಾಚನಳ್ಳಿ ಗ್ರಾಮಗಳಲ್ಲಿ ಪಂಪ್ ಆಪರೇಟರ್ ಮತ್ತು ಕರವಸೂಲಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೀಡಬೇಕಾದ ಬಾಕಿ ವೇತನವನ್ನು ಶೀಘ್ರದಲ್ಲಿಯೇ ಪಾವತಿಸಬೇಕು ಎಂದು ಮುಖಂಡ ಭೀಮಶಪ್ಪ ಕೂಡ್ಲೂರು ಆಗ್ರಹಿಸಿದರು.
ಸೈದಾಪುರ ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ದಿನಕ್ಕೆ ₹50 ಸಾವಿರಕ್ಕೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ . ಆದರೆ, 2015 ರಿಂದ ಇಲ್ಲಿಯವರೆಗೆ ವರ್ಷದಲ್ಲಿ 2-3 ತಿಂಗಳು ಸಿಬ್ಬಂದಿಯ ವೇತನ ಬಾಕಿ ಉಳಿಸಿಕೊಂಡು ಬರಲಾಗುತ್ತಿದೆ. ಇದರಿಂದ ಪ್ರತಿಯೊಬ್ಬ ಸಿಬ್ಬಂದಿಯ 20 ರಿಂದ 30 ತಿಂಗಳ ವೇತನ ಬಾಕಿ ಉಳಿದಿದೆ. ಸಂಬಳ ನಂಬಿಕೊಂಡು ಕುಟುಂಬದ ಜೀವನ ನಡೆಯುತ್ತಿದೆ. ನಾವು ದುಡಿದ ವೇತನ ನಿಮಗೆ ಸಕಾಲಕ್ಕೆ ನೀಡದಿದ್ದಲ್ಲಿ ದೈನಂದಿನ ಜೀವನಕ್ಕೆ ಸಾಲ ಶೂಲ ಮಾಡಬೇಕಾಗಿದೆ. ಈ ಬಾಕಿ ವೇತನ ಪಾವತಿಗೆ ಅನೇಕ ಬಾರಿ ಪಿಡಿಒ ಅವರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಆದರೂ ಕೂಡ ಪಿಡಿಒ ಮಾತ್ರ ವೇತನ ಪಾವತಿಗೆ ಕಾರಣ ನೀಡುತ್ತ ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಬಾಕಿ ವೇತನ ಕೂಡಲೇ ಪಾವತಿಸದಿದ್ದಲ್ಲಿ ಎಲ್ಲ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೆವೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.