ಯಾದಗಿರಿ: ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ನಿಗದಿತ ಗುರಿ ತಲುಪಲು ಶ್ರಮಿಸಬೇಕು. ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಕಾರ್ಯದ ವೇಗ ಹೆಚ್ಚಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ಆರ್.ನಾಯ್ಕ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ- ಕಾಲೇಜುಗಳು ಆರಂಭಗೊಳ್ಳುತ್ತಿರುವ ಹಿನ್ನಲೆ 12ರಿಂದ 14 ವಯೋಮಾನದ ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಕಾರ್ಯವನ್ನು ಚುರುಕುಗೊಳಿಸಿ, ಈಗಾಗಲೇ ಶೇ 90ರಷ್ಟು ಗುರಿಯನ್ನು ಸಾಧಿಸಲಾಗಿದ್ದು, ಶೇ 100ರಷ್ಟು ಗುರಿ ತಲುಪುವಂತಾಗಬೇಕು ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೇ ಮಾಡಿ ಅಂಕಿ-ಸಂಖ್ಯೆಯನ್ನು ಪಡೆಯಲು ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಚರ್ಚಿಸಿ, ಪರಸ್ಪರ ಸಹಕಾರದೊಡನೆ ಕೆಲಸ ಮಾಡಬೇಕು. ದೋರನಹಳ್ಳಿಯಲ್ಲಿ ಆರಂಭಿಸಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ಘಟಕವನ್ನು ಮುಂದುವರೆಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆನ ಕಾಪಾಡಿ, ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಎಲ್ಲಾ ಸಿಬ್ಬಂದಿಯೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದರು.
‘ಜಿಲ್ಲೆಯಲ್ಲಿ 12ರಿಂದ 14 ಮತ್ತು 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕೆಲಸ ಆಗಬೇಕು. ಮೊದಲನೇ ಡೋಸ್ ಪಡೆದುಕೊಂಡಿರುವ ಮಕ್ಕಳಿಗೆ ಎರಡನೇ ಡೋಸ್ ಲಸಿಕೆ ನೀಡಬೇಕಿದೆ. ಶಾಲೆಗಳಿಗೆ ಬೇಸಿಗೆ ರಜೆ ಇರುವ ಪೋಷಕರ ನೆರವು ಪಡೆದು ಶಾಲೆಗಳಲ್ಲಿ ಒಂದು ದಿನ ಲಸಿಕಾಕರಣ ದಿನವನ್ನು ಏರ್ಪಡಿಸಿ ಮಕ್ಕಳನ್ನು ಕರೆತಂದು ಎರಡನೇ ಡೋಸ್ ಲಸಿಕೆ ನೀಡಬೇಕು.
ಕೋವಿಡ್ ನಿಯಂತ್ರಣ ಸಂಬಂಧ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತರಾಗಿರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ಬಗೆಯ ಔಷಧೋಪಚಾರಗಳು ಲಭ್ಯವಾಗಬೇಕು. ಬೇಡಿಕೆ ಇರುವ ಔಷಧಿಗಳನ್ನು ಮೊದಲೇ ಶೇಖರಿಸಿಟ್ಟಿಕೊಳ್ಳಬೇಕು. ಎಲ್ಲ ಇಲಾಖೆಯ ಅಧಿಕಾರಿ ವರ್ಗದವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಗತ್ಯವಿರುವ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಗೆ ದಿನಕ್ಕೆ 490 ಆರ್.ಟಿ.ಪಿ.ಸಿ.ಆರ್ ಹಾಗೂ 350 ರ್‍ಯಾಟ್ ಟೆಸ್ಟ್ ಮಾಡುವ ಗುರಿಯನ್ನು ನೀಡಿದೆ. ಅದರಂತೆ ಸಿಬ್ಬಂದಿ ಗುರಿಯನ್ನು ತಲುಪುವ ಕಾರ್ಯವಾಗಲಿ ಎಂದಾಗ ಪ್ರತಿಕ್ರಿಯಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಾಜಿದ್ ಅವರು, ಜಿಲ್ಲೆಗೆ 6 ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆಯಿದೆ. ಸಿಬ್ಬಂದಿ ಕೊರತೆಯಿಂದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಆರ್.ಸಿ.ಎಚ್.ಒ. ಲಕ್ಷ್ಮೀಕಾಂತ್ ಒಂಟಿಪೀರ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.