ವಡಗೇರಾ ತಾಲ್ಲೂಕಿನ ಬೆಂಡೆಬೆಮಬಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಈರಗಣ್ಣ ತಾತಾನವರ ದರ್ಗಾ
ವಡಗೇರಾ: ತಾಲ್ಲೂಕಿನ ಬೆಂಡಬೆಂಬಳಿ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸೇರಿ ಕಾಣಿಗೆ ಸಂಗ್ರಹಿಸಿ ₹30 ಲಕ್ಷ ವೆಚ್ಚದಲ್ಲಿ ಪವಾಡ ಪುರುಷ ಈರಗಣ್ಣ ತಾತನವರ ದರ್ಗಾ ನಿರ್ಮಿಸಲಾಗಿದೆ.
ಹಿನ್ನೆಲೆ: ಸುಮಾರು 283 ವರ್ಷಗಳ ಹಿಂದೆ ಗ್ರಾಮದಲ್ಲಿ ಈರಗಣ್ಣ ತಾತ ಹಜರತ್ ಇಮಾಮ್ ಕಾಸಿಂ ದೇವರ ಸೇವಕರಾಗಿ ಸಮಾಜದಲ್ಲಿ ಸಾಮರಸ್ಯ ಸಾರಿದ್ದರು. ಮರಣಾನಂತರ ಗ್ರಾಮದ ಮಧ್ಯದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಬಳಿಕ ಸಮಾಧಿ ಜಾಗದಲ್ಲಿ ಈರಗಣ್ಣ ತಾತನವರ ದೇಗುಲ ನಿರ್ಮಾಣ ಮಾಡಲಾಯಿತು. ದೇಗುಲ ಹಂತ ಹಂತವಾಗಿ ಬಿರುಕು ಬಿಡಲು ಆರಂಭಿಸಿತು.
‘ಗ್ರಾಮದ ಮುಜಾವರ್ ಕನಸಿನಲ್ಲಿ ಈರಗಣ್ಣ ಬಂದು ದೇಗುಲ ತೆಗೆದು ದರ್ಗಾ ನಿರ್ಮಾಣ ಮಾಡಿ ಎಂದು ಹೇಳಿದಾಗ ಗ್ರಾಮಸ್ಥರು ಸೇರಿ ಚಿಕ್ಕ ದರ್ಗಾ ನಿರ್ಮಾಣ ಮಾಡಿದ್ದರು. ಈಗ ಸಣ್ಣ ದರ್ಗಾ ತೆಗೆದು ನೂತನವಾಗಿ ದೊಡ್ಡ ದರ್ಗಾ ನಿರ್ಮಾಣ ಮಾಡಿ ಜೂನ್ 23ರಂದು ಲೋಕಾರ್ಪಣೆ ಮಾಡಲಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.
ಮೊಹರಂ ದಿನ ದರ್ಗಾಕ್ಕೆ ಭೇಟಿ: ಮೊಹರಂ ಆಚರಣೆ ಪ್ರಯುಕ್ತ ದೇವರು ಹಿಡಿಯುವವರು ಪೀರಲ್ ದೇವರು ಹಿಡಿಯುವಕ್ಕಿಂತ ಮುಂಚೆ ಈರಗಣ್ಣ ತಾತಾನ ದರ್ಗಾಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಪಿರಲ್ ದೇವರು ಹಿಡುತ್ತಾರೆ.
‘ಹುಸೇನಸಾಬ್ ಪೂಜಾರಿ ಎಂಬುವರು ಈರಗಣ್ಣ ತಾತಾನ ಸಣ್ಣ ದರ್ಗಾ ನಿರ್ಮಿಸಿ ಅವರ ಪೂಜಿಸುತ್ತಿದ್ದರು. ಈರಗಣ್ಣ ತಾತಾನ ಅವರಿಗೆ ಒಲಿದರು. ನಂತರ ಮೊಹರಂ ಹಬ್ಬದ ದಿನದಂದು ಬೆಂಡೆಬೆಂಬಳಿ ಗ್ರಾಮದ ಐರಡ್ಡಿ ಮಾಲಿಗೌಡರ ಮನೆಯ ಒಳಗಡೆ ಹುಸೇನಸಾಬ್‌ರನ್ನು ಕೂಡಿ ಹಾಕಿ ಬಾಗಿಲಿಗೆ ಬೀಗ ಹಾಕಿದ್ದರು. ಆಗ ಮೊಹರಂ ದೇವರು ಹಿಡಿಯುವ ಸಮಯವಾಗಿರುವುದರಿಂದ ಬೀಗ ಹಾಕಿದ ಬಾಗಿಲು ಏಕಾಏಕಿಯಾಗಿ ತೆರೆದುಕೊಂಡಿತು. ಅಲ್ಲಿಂದ ಬಂದು ಹುಸೇನಸಾಬ್ ದೇವರು ಹಿಡಿದರು’ ಎಂದು ಹೇಳುತ್ತಾರೆ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.