ವಡಗೇರಾ: ತಾಲ್ಲೂಕಿನ ಕೊಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಕಸೂಗೂರು ಗ್ರಾಮದಲ್ಲಿ ಸತತ ಮಳೆಯಿಂದಾಗಿ ಅನೇಕ ಮನೆಗಳಲ್ಲಿ ಮಳೆಯ ಹಾಗೂ ಚರಂಡಿಯ ನೀರು ನುಗ್ಗಿದ್ದರಿಂದ ಗ್ರಾಮಸ್ಥರು ಸಮಸ್ಯೆ ಎದುರಿಸಬೇಕಾಯಿತು.
ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಷಣ್ಮುಖಪ್ಪ ಸಾಹುಕಾರ ಅಂಗಡಿಯಿಂದ ತಾಯಮ್ಮ ಗುಡಿಯವರೆಗೆ ಮತ್ತು ಇನ್ನುಳಿದ ಕೆಲವು ಬಡಾವಣೆಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯ ಮೇಲೆ ಸಂಗ್ರಹವಾಗಿದೆ. ಮಳೆ ಹಾಗೂ ಚರಂಡಿ ನೀರಿನಿಂದ ಸೊಳ್ಳೆ ಉತ್ಪತ್ತಿ ಆಗುತ್ತಿವೆ. ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಈ ಕುರಿತು ಹಲವು ವೇಳೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆಯ ನಿವಾಸಿಗಳು ಆರೋಪಿಸುತ್ತಾರೆ.
‘ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ, ಸಿ.ಸಿ ರಸ್ತೆ ನಿರ್ಮಾಣ ಹಾಗೂ ಗ್ರಾಮದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಕೊಂಕಲ್ ಪಂಚಾಯಿತಿ ಎದುರು ಹೋರಾಟ ಮಾಡಬೇಕಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶರಣಪ್ಪ ಕಡಿಮನಿ, ಸಾಮಾಜಿಕ ಹೋರಾಟಗಾರ ನಿಂಗಪ್ಪ ಕುರೇರ್, ಚನ್ನಪ್ಪ ಕುಂಬಾರ, ರೆಡ್ಡೆಪ್ಪ ಗೋಡಿಹಾಳ, ಬಸ್ಸಮ್ಮ ಹುಬ್ಬಳ್ಳಿ, ಮಲ್ಲಪ್ಪ ಜೇರ್‌ಬಂಡಿ, ಮಡಿವಾಳಪ್ಪ, ನಾಗಪ್ಪ ಕುಂಬಾರ, ಶಾಂತಮ್ಮ, ಲಿಂಗರಾಜ ಪೂಜಾರಿ, ಸಣ್ಣ ಮಲ್ಲಣ್ಣ, ಶರಭು ಚಟ್ನಳ್ಳಿ ಎಚ್ಚರಿಸಿದ್ದಾರೆ.
ಗ್ರಾಮದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಅಧಿಕಾರಿಗಳು ಅನಕಸೂಗೂರು ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮಗಳನ್ನು ಕೈಗೊಳ್ಳಬೇಕುನಿಂಗಪ್ಪ ಕುರೇರ್, ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.