ವಡಗೇರಾ: ತಾಲ್ಲೂಕಿನ ಗಡ್ಡೆಸೂಗುರು ಗ್ರಾಮದ ಗೇಟ್‌ನಿಂದ ಅನತಿ ದೂರದಲ್ಲಿ ಇರುವ ಫಕೀರಸಾಬ್ ದರ್ಗಾದ ಬಳಿಯ ಸುತ್ತಲಿನ ಜಮೀನಿನಲ್ಲಿ ಭೀಮಾ ನದಿ ಪ್ರವಾಹದ ನೀರು ನುಗ್ಗಿ ಹತ್ತಿ ಹಾಗೂ ಭತ್ತದ ಬೆಳೆ ನಾಶವಾಗಿದೆ.
ಪ್ರವಾಹದ ನೀರು ಭಾನುವಾರ ಗಡ್ಡೆಸೂಗುರು ಗ್ರಾಮದ ಹತ್ತಿರದ ಹಳ್ಳಕ್ಕೆ ಹಾಗೂ ಹಳ್ಳದ ಪಕ್ಕದಲ್ಲಿ ಇರುವ ದರ್ಗಾದ ಸುತ್ತಲು ಆವರಿಸಿದ್ದರಿಂದ ಪ್ರಾರ್ಥನೆ ಸಲ್ಲಿಸಲು ತೊಂದರೆಯಾಯಿತು.
ನಿಧಾನವಾಗಿ ಸೋಮವಾರ ಸಂಜೆ ಪ್ರವಾಹದ ನೀರು ಇಳಿಮುಖವಾಗುತ್ತಾ ಬಂದರೂ ಮಂಗಳವಾರ ಬೆಳೆಗಳು ಜಲಾವೃತ್ತಗೊಂಡಿದ್ದವು.
ತಾಲ್ಲೂಕಿನ ಮಾಚನೂರ, ಬಬಲಾದ, ಬೀರನಾಳ, ಅರ್ಜುಣಿಗಿ, ಗುರುಸುಣಿಗಿ, ನಾಯ್ಕಲ್, ನಾಲ್ವಡಿಗಿ, ಬಲಕಲ್ ಸೇರಿ ನಾನಾ ಗ್ರಾಮಗಳಲ್ಲಿ ಪ್ರವಾಹದ ನೀರು ಜಮೀನುಗಳಿಗೆ ನುಗ್ಗಿದೆ. ಸಾವಿರಾರು ಎಕರೆ ಪ್ರದೇಶಗಳಲ್ಲಿ ಇದ್ದ ಅನೇಕ ಬೆಳೆಗಳು ಹಾಳಾಗಿ ಬಹಳ ನಷ್ಟವಾಗಿದೆ ಎಂದು ರೈತರು ಹೇಳಿದರು.
‘ಸುಮಾರು 67 ವರ್ಷಗಳ ಹಿಂದೆ ಇದೇ ತರ ಭೀಮಾ ನದಿಯ ಪ್ರವಾಹ ಬಂದಿತ್ತು. ಈಗ ನನಗೆ 85 ವರ್ಷ, ಮತ್ತೊಮ್ಮೆ ಭೀಮೆಯ ಪ್ರವಾಹ ನೋಡುವ ಸ್ಥಿತಿ ಬಂದಿದೆ. ಈ ಪ್ರವಾಹದಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ನನ್ನ ಎರಡು ಎಕರೆ ಹತ್ತಿ ಹಾಳಾಗಿದೆ’ ಎಂದು ಗಡ್ಡೆಸೂಗುರು ಗ್ರಾಮದ ರೈತ ಹುಸೇನಸಾಬ್ ಮುಲ್ಲಾ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.