ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆಯಿಂದ ಬೀಸುತ್ತಿರುವ ಬಿರುಗಾಳಿ ಅನೇಕ ಗ್ರಾಮಗಳಲ್ಲಿ ಇರುವ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಗ್ರಾಮಸ್ಥರು ಹಾಗೂ ಪಟ್ಟಣ ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಪಟ್ಟಣದ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇನ್ನೂ ಕೆಲವು ಬಡಾವಣೆಗಳಲ್ಲಿ ಕೈಗೆ ಸಿಗುವ ಸ್ಥಿತಿಯಲ್ಲಿ ಇವೆ. ಪಟ್ಟಣದ ಹನುಮಾನ ದೇವಸ್ಥಾನದ ಹತ್ತಿರವಿರುವ ಕಂಬವೊಂದು ಬಿರುಗಾಳಿಗೆ ಬಾಗಿದ್ದು, ಬೀಳುವ ಸ್ಥಿತಿಯಲ್ಲಿ ಇದೆ.
ಈ ಪ್ರದೇಶವು ಜನಬಿಡಿನ ಪ್ರದೇಶವಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವಂತಾಗಿದೆ. ಹಾಗೆಯೇ ತುಮಕೂರು ಮುಖ್ಯ ರಸ್ತೆಯ ಹತ್ತಿರ ವಿದ್ಯುತ್ ತಂತಿ ಜೊತು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಗಾಳಿ ಹಾಗೂ ಮಳೆಗೆ ಅಲ್ಲಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಸಂಪೂರ್ಣ ಬಾಗಿವೆ.
ತಾಲ್ಲೂಕಿನ ಹಾಲಗೇರಾ ಗ್ರಾಮದ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಜೋತು ಬಿದ್ದಿವೆ .
ವಿದ್ಯುತ್ ನಿಲುಗಡೆ: ಜೋರಾಗಿ ಬಿರುಗಾಳಿ ಬಿಸಿದಾಗ ಮುಂಜಾಗ್ರತಾ ಕ್ರಮವಾಗಿ ಜೆಸ್ಕಾಂ ಇಲಾಖೆ ಸಿಬ್ಬಂದಿ ವಿದ್ಯುತ್ ಸರಬರಾಜು ನಿಲ್ಲಿಸುತ್ತಾರೆ. ಗಾಳಿ ನಿಂತಾಗ ಮತ್ತೆ ವಿದ್ಯುತ್ ಸರಬರಾಜು ಮಾಡುತ್ತಾರೆ. ಆದರೆ ಜೋರಾಗಿ ಬಿಸಿದ ಗಾಳಿಗೆ ಎಲ್ಲೆಲ್ಲಿ ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ ಎಲ್ಲೆಲ್ಲಿ ವಿದ್ಯುತ್ ಕಂಬಗಳು ಬಾಗಿವೆ ಎಂಬುವುದನ್ನು ಪರಿಶೀಲಿಸುವುದಿಲ್ಲ.
ಒಂದು ವೇಳೆ ಎಲ್ಲಿಯಾದರೂ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ತಂತಿ ಕಡಿದು ಬಿದ್ದರೆ ಜೀವ ಹಾನಿಯಾಗುವುದು ಗ್ಯಾರಂಟಿ. ಅದಕ್ಕಾಗಿ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡುವುದಕ್ಕಿಂತ ಮುಂಚೆ ಸಮಗ್ರ ಮಾಹಿತಿ ಸಿಬ್ಬಂದಿಗಳಿಂದ ಪಡೆದು ವಿದ್ಯುತ್ ಸರಬರಾಜು ಮಾಡಬೇಕು ಎನ್ನುತ್ತಾರೆ ಹಾಲಗೇರಾ ಗ್ರಾಮದ ನಿವಾಸಿ ರಾಜಣ್ಣ.
ಜೆಸ್ಕಾಂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವಿದ್ಯುತ್ ತಂತಿ ದುರಸ್ತಿಗೊಳಿಸುವದರ ಜೊತೆಗೆ ಬಾಗಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆ.
ತಾಲ್ಲೂಕು ವ್ಯಾಪ್ತಿಯಲ್ಲಿ ಜೋರಾಗಿ ಬಿಸಿರುವ ಗಾಳಿಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ವಾಲಿವೆ. ಅವುಗಳನ್ನು ಸರಿಪಡಿಸಲಾಗುವುದುಥಾಮಸ್ ವಡಗೇರಾ ಜೆಸ್ಕಾಂ ಜೂನಿಯರ್ ಎಂಜಿನಿಯರ್
ಈಗಾಗಲೇ ಕಳೆದ ಎರಡು ಮೂರು ದಿನಗಳಿಂದ ಜೋರಾಗಿ ಗಾಳಿ ಬೀಸುತ್ತಿದೆ. ಅವಘಡ ಸಂಭವಿಸುವ ಮುಂಚೆ ಪಟ್ಟಣದಲ್ಲಿ ಜೊತು ಬಿದ್ದ ವಿದ್ಯುತ್ ತಂತಿ ಹಾಗೂ ಕಂಬಗಳನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಬೇಕುವಿದ್ಯಾಧರ ಜಾಕಾ ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ
ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನೇಕ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ವಿದ್ಯುತ್ ತಂತಿಗಳು ಬಹಳ ಹಳೆಯದಾಗಿವೆ. ಹೊಸ ವಿದ್ಯುತ್ ತಂತಿ ಅಳವಡಿಸಬೇಕುಶರಣು ಇಟಗಿ ಕರವೇ ಕಲ್ಯಾಣ ಕರ್ನಾಟಕ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.