ADVERTISEMENT

ವಡಗೇರಾ:ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 8:29 IST
Last Updated 4 ಮಾರ್ಚ್ 2023, 8:29 IST
   

ವಡಗೇರಾ (ಯಾದಗಿರಿ ಜಿಲ್ಲೆ): ವಡಗೇರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತನ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು.

ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಅದ್ಧೂರಿ ಮೆರವಣಿಗೆ: ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಸ್‌.ಎಸ್.ಗುಬ್ಬಿ ಅವರನ್ನು ಸಾರೋಟದಲ್ಲಿ ಕುಳ್ಳರಿಸಿ ಪಟ್ಟಣದ ತುಂಬಾ ಮೆರವಣಿಗೆ ಮಾಡಲಾಯಿತು. ಕಸಾಪ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸಾಥ್‌ ನೀಡಿದರು. ಸಮ್ಮೇಳನ ನಡೆಯುವ ಸ್ವಾಮಿ ವಿವೇಕಾನಂದ ಪ್ರೌಢಶಾಲಾವರಣದ ವರೆಗೆ ಕರೆದೊಯ್ಯಲಾಯಿತು. ಲಂಬಾಣಿ ಮಹಿಳೆಯರ ನೃತ್ಯ ಗಮನ ಸೆಳೆಯಿತು.

ADVERTISEMENT

ಡಾ.ಗುಬ್ಬಿಯವರು ವೃತ್ತಿಯಲ್ಲಿ ವೈದ್ಯಾಧಿಕಾರಿಯಾಗಿ, ನಿಷ್ಕಾಮದಿಂದ ಸಮಾಜಸೇವೆ ಮಾಡುತ್ತಿರುವುದರ ಜೊತೆಗೆ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇಲ್ಲಿಯವರೆಗೆ ಸುಮಾರು 17 ಕ್ಕಿಂತಲೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.

ಸಮ್ಮೇಳನದ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡದ ಧ್ವಜವನ್ನು ಕಟ್ಟಲಾಗಿದೆ. ಇದರಿಂದ ಪಟ್ಟಣದ ತುಂಬಾ ಕನ್ನಡದ ಧ್ವಜಗಳು ಹಾರಾಡುತ್ತಿವೆ. ಸ್ವಾಗತ ಕೋರುವ ವಿವಿಧ ಬ್ಯಾನರ್‌ಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಳವಡಿಸಲಾಗಿದೆ.
ಸಮ್ಮೇಳನದಲ್ಲಿ ಮಹಾಮಂಟಪಕ್ಕೆ ಹೈಯಾಳಲಿಂಗೇಶ್ವರ, ಪ್ರಧಾನ ವೇದಿಕೆಗೆ ಸಿದ್ದೇಶ್ವರ ಶ್ರೀ, ಮಹಾದ್ವಾರಕ್ಕೆ ರಾಚೋಟೇಶ್ವರ ನಾಮಕರಣ ಮಾಡಲಾಗಿದೆ.

ಸಮ್ಮೇಳನದಲ್ಲಿ ವಡಗೇರಾ ತಾಲ್ಲೂಕಿನ ಕೃಷಿ ಮತ್ತು ಶಿಕ್ಷಣ ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಎರಡು ಗೋಷ್ಠಿಗಳು ನಡೆಯಲಿದ್ದು, ನಂತರದಲ್ಲಿ ಕವಿಗೋಷ್ಠಿ ನಡೆಯಲಿದೆ. ಕವಿ ಗೋಷ್ಠಿ ಮುಗಿದ ಮೇಲೆ ಬಹಿರಂಗ ಅಧಿವೇಶನ ನಡೆಯಲಿದೆ.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ನಂತರ ಸಮಾರೋಪ ನಡೆಯಲಿದೆ.

ಸಂಜೆ 6.30ರ ನಂತರ ಭರತನಾಟ್ಯ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.