ADVERTISEMENT

ಯಾದಗಿರಿ: ವಡಗೇರಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 6:58 IST
Last Updated 28 ನವೆಂಬರ್ 2025, 6:58 IST
ವಡಗೇರಾ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜಗೆ ಏರಿದ ಹಿನ್ನೆಲ್ಲೆಯಲ್ಲಿ ಯಾದಗಿರಿಯಲ್ಲಿ ಗುರುವಾರ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದರು
ವಡಗೇರಾ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜಗೆ ಏರಿದ ಹಿನ್ನೆಲ್ಲೆಯಲ್ಲಿ ಯಾದಗಿರಿಯಲ್ಲಿ ಗುರುವಾರ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದರು   

ಯಾದಗಿರಿ: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾಲ್ಲೂಕು ಕೇಂದ್ರವಾದ ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜಗೆ ಏರಿಸಲಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ತಿಳಿಸಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ವಡಗೇರಾದ ಜನರು ಸಂಭ್ರಮಿಸಿದರು.

ಕ್ಷೇತ್ರ ವ್ಯಾಪ್ತಿಯ ದೋರನಹಳ್ಳಿ ಹಾಗೂ ವಡಗೇರಾ ಒಂದೇ ತಿಂಗಳಲ್ಲಿ ಪಟ್ಟಣ ಪಂಚಾಯಿತಿ ಸ್ಥಾನ ಪ‍ಡೆದುಕೊಂಡಿವೆ. ಪಟ್ಟಣ ಪಂಚಾಯಿತಿ ಮಾಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಸರ್ಕಾರದಿಂದ ಮನ್ನಣೆ ಸಿಕ್ಕಿದೆ. ಶಾಸಕ ಚನ್ನಾರೆಡ್ಡಿ ಪಾಟೀಲ ಅವರ ಪ್ರಯತ್ನದಿಂದ ಸಾಧ್ಯವಾಗಿದೆ ಎಂದು ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಸಂಭ್ರಮಿಸಿದರು. ಪಟಾಕಿಯೂ ಸಿಡಿಸಿ, ಪರಸ್ಪರ ಸಿಹಿ ತಿನಿಸಿದರು.

‘ಬಹುವರ್ಷಗಳ ಬೇಡಿಕೆ ಈಡೇರಿದೆ. ಅಧಿಕಾರಿಗಳ ಸಹಾಯದಿಂದ ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನಿರಂತರ ಪ್ರಯತ್ನ ಮಾಡಲಾಗಿತ್ತು. ನಮ್ಮ ಮನವಿಯನ್ನು ಮುಖ್ಯಮಂತ್ರಿಗಳು ಪರಿಗಣಿಸಿ ಒಂದೇ ತಿಂಗಳಲ್ಲಿ ಎರಡು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಶಾಸಕರು ಹೇಳಿದರು.

ADVERTISEMENT

‘ಎರಡ್ಮೂರು ವಾರಗಳ ಹಿಂದೆ ದೋರನಹಳ್ಳಿ ಪ.ಪಂ. ಆಗಿ ಮೇಲ್ದರ್ಜೆಗೆ ಏರಿಸಿದಾಗಲೇ ವಡಗೇರಾ ಕೂಡಾ ಆಗಬೇಕಿತ್ತು. ತಾಂತ್ರಿಕ ಕಾರಣಗಳಿಂದ ಸ್ವಲ್ಪ‌ ಮುಂದೆ ಹೋಗಿತ್ತು. ಅಧಿಕಾರಿಗಳ ಸಹಾಯದಿಂದ ಅದನ್ನು  ಸರಿಪಡಿಸಿ ಈಗ ಕಾರ್ಯರೂಪಕ್ಕೆ ಬಂದಿದೆ’ ಎಂದರು.

ಸಂಭ್ರಮ ಆಚರಣೆಯಲ್ಲಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಬಿಳ್ಹಾರ್, ಪ್ರಮುಖರಾದ ಘಾಳೆಪ್ಪ ಪೂಜಾರಿ, ಶರಣು ಪಡಶೆಟ್ಟಿ, ಮೈನೊದ್ದೀನ್ ಮಿರ್ಚಿ, ಮೈನೊದ್ದೀನ್ ದೇವದುರ್ಗಾ, ಭಾಷಮಿಯ ನಾಯಕೋಡಿ, ಶರಣು ಇಟಗಿ, ಮಲ್ಲು ಶಿವಪುರ, ಗುರುನಾಟೇಕರ್, ಶರಣು ಕುರಿ, ಯಂಕಪ್ಪ ರಾಠೋಡ್, ಬಸಣ್ಣ ಜಡಿ, ಬಸವರಾಜ ಚವ್ಹಾಣ್ ಉಪಸ್ಥಿತರಿದ್ದರು.

ಚನ್ನಾರೆಡ್ಡಿ ಪಾಟೀಲ ತುನ್ನೂರು
‘ಬಹು ದಿನಗಳ ಕನಸು ನನಸು’
- ವಡಗೇರಾ: ‘ವಡಗೇರಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯನ್ನಾಗಿ ಉನ್ನತಿಕರಿಸಿದ್ದು ಬಹು ದಿನಗಳ ಕನಸು ನನಸಾಗಿದೆ’ ಎಂದು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಹೇಳಿದರು. ‘ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ತಾಲ್ಲೂಕಿನ ಜನರ ಬೇಡಿಕೆ ಈಡೇರಿದಂತಾಗಿದೆ. ಜಿಲ್ಲೆಯಲ್ಲಿ  ಮಾದರಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲಾಗುವುದು. ಈಗಾಗಲೇ ಸುಮಾರು ₹ 7 ಕೋಟಿ ವೆಚ್ಚದಲ್ಲಿ ಪ್ರಜಾಸೌಧದ ಕಾಮಗಾರಿ ಆರಂಭವಾಗಿದೆ. ಬಸ್ ನಿಲ್ದಾಣ ಸಹ ಉದ್ಘಾಟಿಸಲಾಗಿದೆ. ತಾಲ್ಲೂಕು ಕಚೇರಿಗಳನ್ನು ಆರಂಭಿಸಲು ಪ್ರಯತ್ನಿಸಲಾಗುವುದು’ ಎಂದರು.
ಶರಣಬಸಪ್ಪ ದರ್ಶನಾಪುರ
ಸಗರ ಸಹ ಪಟ್ಟಣ ಪಂಚಾಯಿತಿ
ಶಹಾಪುರ: ತಾಲ್ಲೂಕು ಕೇಂದ್ರವಾದ ವಡಗೇರಾ ಜೊತೆಗೆ ಶಹಾಪುರ ತಾಲ್ಲೂಕಿನ ಸಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಗುರುವಾರ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಗರ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಪಟ್ಟಣ ಪಂಚಾಯಿತಿಯ ಅಧೀನಕ್ಕೆ ಒಳಪಡಲಿವೆ. ಸಗರನ ಹಲವು ವರ್ಷಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.