ವಡಗೇರಾ: ವಡಗೇರಾ – ಯಾದಗಿರಿ ಜಿಲ್ಲಾ ಮುಖ್ಯ ರಸ್ತೆಯನ್ನು ಅಗೆದಿರುವದರಿಂದ ಮಧ್ಯ ಭಾಗದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಖಾಸಗಿ ವಾಹನ ಚಾಲಕರು ದೂರಿದ್ದಾರೆ.
ಬೀರನಾಳ ಗ್ರಾಮದ ಗೇಟ್ ಹಾಗೂ ಗಡ್ಡೆಸೂಗುರ ಗ್ರಾಮದ ಗೇಟ್‌ನಿಂದ ಅನತಿ ದೂರದಲ್ಲಿ ಭೀಮಾ ನದಿಯಿಂದ ರೈತರು ತಮ್ಮ ಜಮೀನುಗಳಿಗೆ ಪೈಪ್ ಮೂಲಕ ನೀರು ಹಾಯಿಸಲು ಜಿಲ್ಲಾ ಮುಖ್ಯ ರಸ್ತೆಯನ್ನು ಅಡ್ಡಲಾಗಿ ಅಗೆದಿದ್ದಾರೆ. ಬಳಿಕ ಒಣ ಮಣ್ಣಿನಿಂದ ಮುಚ್ಚಿದ್ದಾರೆ. ವಾಹನಗಳ ಸಂಚಾರದಿಂದಾಗಿ ಒಣ ಮಣ್ಣು ಮಾಯವಾಗಿ ದೊಡ್ಡ ಕಂದಕ ಬಿದ್ದಿದೆ
ಚಾಲಕರೂ ಕೊಂಚ ಯಾಮಾರಿದರೂ ಕಂದಕದಲ್ಲಿ ವಾಹನ ಬಿದ್ದು ಕೈ ಕಾಲುಗಳನ್ನು ಮುರಿದುಕೊಳ್ಳುವುದು ಖಚಿತ ಎಂದು ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹೇಳುತ್ತಾರೆ.
ಅನುಮತಿ ಕಡ್ಡಾಯ: ಯಾರೇ ರಸ್ತೆಯನ್ನು ಅಗೆಯಬೇಕಾದರೆ ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಅದಕ್ಕೆ ಸಂಬಂಧ ಪಟ್ಟ ಶುಲ್ಕ ( ರಸ್ತೆ ಹಾಳು ಮಾಡಿದ) ಪಾವತಿಸಬೇಕು. ಆದರೆ ಈ ಭಾಗದಲ್ಲಿ ರೈತರು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದಿಲ್ಲ, ಶುಲ್ಕವನ್ನೂ ಕಟ್ಟುವುದಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಆದಷ್ಟು ಬೇಗ ರಸ್ತೆಯ ಮೇಲೆ ಬಿದ್ದಿರುವ ಕಂದಕಕ್ಕೆ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಾಹನ ಸವಾರರು ಹಾಗೂ ಚಾಲಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.