ADVERTISEMENT

ಯಾದಗಿರಿ| ನಕಲಿ ಜಾತಿ ಪ್ರಮಾಣಪತ್ರ ತಡೆಗೆ ಆಗ್ರಹ: ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 23:19 IST
Last Updated 13 ಆಗಸ್ಟ್ 2025, 23:19 IST
ಯಾದಗಿರಿಯಲ್ಲಿ ಬುಧವಾರ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ತಡೆಯುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಪ್ರತಿಭಟಿಸಿದರು
ಯಾದಗಿರಿಯಲ್ಲಿ ಬುಧವಾರ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ತಡೆಯುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಪ್ರತಿಭಟಿಸಿದರು   

ಯಾದಗಿರಿ: ನಕಲಿ ಜಾತಿ ಪ್ರಮಾಣಪತ್ರಗಳ ವಿತರಣೆ ತಡೆಯಬೇಕು ಎಂದು ಆಗ್ರಹಪಡಿಸಿ ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದವರು ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. 

ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಬಾವುಟಗಳನ್ನು ಹಿಡಿದು ಜಮಾಯಿಸಿದರು. ಶಾಸ್ತ್ರಿ ವೃತ್ತದಲ್ಲಿ ಕ್ರಾಂತಿ ಗೀತೆಗಳನ್ನು ಹಾಡಿದರು. ಸುಭಾಷ್ ವೃತ್ತದಲ್ಲಿ ರಸ್ತೆ ತಡೆ ಮಾಡಿ, ಬಹಿರಂಗ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

‘ಅನರ್ಹರಿಗೆ ಎಸ್‌ಟಿ ಪ್ರಮಾಣಪತ್ರ ನೀಡುವುದನ್ನು ತಡೆಯಲು ಸರ್ಕಾರ ಅಧಿಕಾರಿಗಳಿಗೆ ಆದೇಶಿಸಬೇಕು. ಇಲ್ಲದೆ ಇದ್ದರೆ ವಿಧಾನಸೌಧ ಹಾಗೂ ಸಂಸತ್ತಿಗೆ ಮುತ್ತಿಗೆ ಹಾಕುವ ಹೋರಾಟ ಮಾಡಬೇಕಾಗುತ್ತದೆ’ ಎಂದು ಮುಖಂಡರು ಎಚ್ಚರಿಸಿದರು.

ADVERTISEMENT

‘ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ನಕಲಿ ಎಸ್‌ಟಿ ಪ್ರಮಾಣಪತ್ರ ನೀಡಲಾಗಿದೆ. ಮುಂದೆ ಕಡಿವಾಣ ಹಾಕದೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ, ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ದಾವಣಗೆರೆಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ವರದಾನಂದ ಗೋಲಪಲ್ಲಿ ಸ್ವಾಮೀಜಿ, ರಂಗಲಿಂಗೇಶ್ವರದ ತ್ರಿಶೂಲಪ್ಪ ಶರಣರು ಸೇರಿ ನೆರೆಯ ರಾಯಚೂರು, ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಯ ವಾಲ್ಮೀಕಿ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.