ADVERTISEMENT

ಸುರಪುರ: ನೇಪಥ್ಯಕ್ಕೆ ಸರಿಯುತ್ತಿರುವ ವನಭೋಜನ ವೈಭವ

ಅಶೋಕ ಸಾಲವಾಡಗಿ
Published 7 ನವೆಂಬರ್ 2021, 19:30 IST
Last Updated 7 ನವೆಂಬರ್ 2021, 19:30 IST
ವನಭೋಜನಕ್ಕೆ ಸಾಕ್ಷಿಯಾಗಿರುವ ಸುರಪುರದ ಟೇಲರ್ ಮಂಜಿಲ್
ವನಭೋಜನಕ್ಕೆ ಸಾಕ್ಷಿಯಾಗಿರುವ ಸುರಪುರದ ಟೇಲರ್ ಮಂಜಿಲ್   

ಸುರಪುರ:ಬೆಲೆ ಏರಿಕೆ, ಕೋವಿಡ್ ಮತ್ತಿತರ ಕಾರಣಗಳಿಗಾಗಿ ದೀಪಾವಳಿಯ ನಂತರ ನಗರದಲ್ಲಿ ನಡೆಯುತ್ತಿದ್ದ ವನಭೋಜನದ ವೈಭವ ನೇಪಥ್ಯಕ್ಕೆ ಸರಿಯುತ್ತಿದೆ. ಹೀಗಾಗಿ ದೀಪಾವಳಿ ಹಬ್ಬದ ಸಂಭ್ರಮ ಕಳೆಗುಂದಿದೆ.

ದೀಪಾವಳಿ ಅಮಾವಾಸ್ಯೆಯ ನಂತರ ಪಾಡ್ಯ, ಬಿದಿಗಿ, ತದಿಗಿ, ಚತುರ್ಥಿ ಮತ್ತು ಪಂಚಮಿಗಳಂದು ಇಲ್ಲಿನ ಜನರು ವನಭೋಜನಕ್ಕೆ ತೆರಳುವುದು ಶತಮಾನಗಳಿಂದ ಪರಂಪರೆಯಂತೆ ನಡೆದುಕೊಂಡು ಬಂದಿತ್ತು. ಇದೇ ಕಾರಣಕ್ಕೆ ನೆಂಟರು ಬರುತ್ತಿದ್ದರು. ನೆರೆ ಹೊರೆಯವರ ಜತೆ ಭೋಜನ ಮಾಡಿಕೊಂಡು ಪರಸ್ಪರ ವಿನಿಮಯ ಮಾಡಿಕೊಂಡು ಭೋಜನ ಸವಿದು ಸಂಭ್ರಮಿಸುತ್ತಿದ್ದ ಆ ದಿನಗಳು ಈಗ ಕಂಡು ಬರುತ್ತಿಲ್ಲ.

ಪಾಡ್ಯ ಮತ್ತು ಬಿದಿಗಿ ದಿನಗಳಂದು ಸಂಜೆ ಉಪಾಹಾರ ತೆಗೆದುಕೊಂಡು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ದೇವರಬಾವಿಗೆ ಹೋಗುತ್ತಿದ್ದರು. ವಿಶಾಲವಾದ ಬಾವಿಯ ಸುತ್ತಲೂ ಇರುವ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ಗಂಗಾಪೂಜೆ ಸಲ್ಲಿಸಿ, ಉಪಾಹಾರ ಸೇವಿಸುತ್ತಿದ್ದರು.

ADVERTISEMENT

ತದಿಗಿ ದಿನ ರಂಗಂಪೇಟೆಯ ಮಾರ್ಗದಲ್ಲಿ ಬರುವ ಕ್ಯಾದಿಗೆ ಗುಂಡ ಎಂಬ ತೋಟಕ್ಕೆ ಊಟ ಕಟ್ಟಿಕೊಂಡು ಬೆಳಿಗ್ಗೆಯೇ ಹೋಗುವ ವಾಡಿಕೆ. ಎಲ್ಲರೂ ಸಾಮೂಹಿಕ ಭೋಜನ ಸವಿದು, ಸಂಜೆವರೆಗೆ ಹರಟೆ ಹೊಡೆಯುತ್ತಿದ್ದರು. ಮಕ್ಕಳು ಗಾಳಿಪಟ ಹಾರಿಸುವುದು, ವಿವಿಧ ಆಟಗಳನ್ನು ಆಡುತ್ತಿದ್ದರು.

ಚತುರ್ಥಿ ದಿನ ಸಿದ್ದಾಪುರ ಮಾರ್ಗದ ಸಿದ್ದನ ತೋಟಕ್ಕೆ ಬುತ್ತಿ ಮಾಡಿಕೊಂಡು ನೆರೆ ಹೊರೆಯವರ ಜೊತೆಗೂಡಿ ಹೋಗಿ ಭೋಜನ ಸವಿದು. ತೋಟದಲ್ಲಿ ಸುತ್ತಾಡುತ್ತಿದ್ದರು. ಸಂಜೆ ಮನೆಗೆ ಬರುತ್ತಿದ್ದರು. ಪಂಚಮಿ (ಈ ಬಾರಿ ಮಂಗಳವಾರ) ದಿನ ಕೊನೆಯ ವನಭೋಜನ ನಡೆಯುತ್ತಿತ್ತು. ತಪ್ಪಲು ಪ್ರದೇಶದಲ್ಲಿ ಇರುವ ಟೇಲರ್ ಮಂಜಿಲ್ ಮತ್ತು ಸುತ್ತಲಿನ ಬೆಟ್ಟ, ಗುಡ್ಡಗಳಲ್ಲಿ ಸಾಕಷ್ಟು ಜನ ಸೇರಿರುತ್ತಿದ್ದರು.

ಜಾತ್ರೆಯೇ ನಡೆಯುತ್ತಿದೆ ಎಂದು ಭಾಸವಾಗುತ್ತಿತ್ತು. ಮಿಠಾಯಿ ಅಂಗಡಿ, ಆಟಿಕೆಗಳು ಇರುತ್ತಿದ್ದವು. ಇಡೀ ನಗರ ಜನರಿಲ್ಲದೇ ಭಣಗುಡುತ್ತಿತ್ತು. ಎಲ್ಲರೂ ಗುಡ್ಡದಲ್ಲಿಯೇ ಇರುತ್ತಿದ್ದರು. ತಮ್ಮ ಇಷ್ಟರೊಂದಿಗೆ ಭೋಜನ ಸವಿಯುತ್ತಿದ್ದರು. ಮಕ್ಕಳ ಆಟೋಟಕ್ಕೆ ಪಾರವೇ ಇರುತ್ತಿರಲಿಲ್ಲ.

ಈ ಐದು ದಿನಗಳ ವನಭೋಜನ ನೆರೆ ಹೊರೆಯವರಲ್ಲಿ ಪರಸ್ಪರ ಬಾಂಧವ್ಯ ಗಟ್ಟಿಗೊಳಿಸುತ್ತಿತ್ತು. ಕಷ್ಟ, ಸುಖಗಳ ವಿನಿಮಯವಾಗುತ್ತಿತ್ತು. ಮೈಮನಗಳು ಹಗುರವಾಗುತ್ತಿದ್ದವು. ಚಿಂತೆಗಳು ದೂರವಾಗಿ ಆರೋಗ್ಯ ವೃದ್ಧಿಗೆ ಕಾರಣವಾಗಿತ್ತು. ಜನರು ಒತ್ತಡ ಮುಕ್ತರಾಗಲು ವನಭೋಜನ ಸಹಾಯಕವಾಗಿತ್ತು. ‌‌

ಮೊಬೈಲ್, ಟಿ.ವಿ. ಲಗ್ಗೆ ಇಟ್ಟ ಮೇಲೆ ಮತ್ತು ಜನರು ಬಿಡುವಿಲ್ಲದ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ವನಭೋಜನಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ಆದರೂ ಬೆರಳೆಣಿಕೆಯಷ್ಟು ಜನ ಈಗಲೂ ಸಂಪ್ರದಾಯ ಮುಂದುರಿಸಿದ್ದಾರೆ. ಈ ಮೂಲಕ ಈ ಭವ್ಯ ಇತಿಹಾಸ ಮುಂದಿನ ಪೀಳಿಗೆಗೆ ಉಳಿಸುತ್ತಿದ್ದಾರೆ.

***

ಐದು ದಿನಗಳ ವನಭೋಜನ ಕಾರ್ಯಕ್ರಮ ಜೀವನದ ರಸ ಗವಳ. ಜನರು ತಪ್ಪದೇ ವನಭೋಜನದಲ್ಲಿ ಪಾಲ್ಗೊಂಡು ಈ ಪರಂಪರೆಯನ್ನು ಉಳಿಸಬೇಕಿದೆ.

- ನಂದಾ ವೆಂಕಟೇಶ, ಗೃಹಿಣಿ

***

ಇಲ್ಲಿನ ವನಭೋಜನ ಪದ್ಧತಿ ಎಲ್ಲಿಯೂ ಕಂಡು ಬರುವುದಿಲ್ಲ. ನಾವು ಚಿಕ್ಕವರಿದ್ದಾಗ ವನಭೋಜನಕ್ಕೆ ಹೋಗಲು ಇರುತ್ತಿದ್ದ ಉತ್ಸಾಹ ಎಂದು ಸಿಗುವುದಿಲ್ಲ.

- ರಾಘವೇಂದ್ರ ಭಕ್ರಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.