ADVERTISEMENT

₹50 ಸಾವಿರ ಕೋಟಿ ಬಿಡುಗಡೆಗೆ ವಾಟಾಳ್‌ ನಾಗರಾಜ್‌ ಆಗ್ರಹ

ಹೊಸ ಬಸ್‌ ನಿಲ್ದಾಣದಲ್ಲಿ ಮಲಗಿ ಏಕಾಂಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 17:10 IST
Last Updated 24 ಅಕ್ಟೋಬರ್ 2020, 17:10 IST
ಯಾದಗಿರಿಯ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಕೆಲಹೊತ್ತು ಮಲಗಿ ವಾಟಾಳ್‌‌ ಪಕ್ಷದ ಸಂಸ್ಥಾಪಕ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಏಕಾಂಗಿ ಪ್ರತಿಭಟನೆ ಮಾಡಿದರು
ಯಾದಗಿರಿಯ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಕೆಲಹೊತ್ತು ಮಲಗಿ ವಾಟಾಳ್‌‌ ಪಕ್ಷದ ಸಂಸ್ಥಾಪಕ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಏಕಾಂಗಿ ಪ್ರತಿಭಟನೆ ಮಾಡಿದರು   

ಯಾದಗಿರಿ: ‘ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಹೀಗಾಗಿ ₹50 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು’ ಎಂದು ಕನ್ನಡಪರ ಹೋರಾಟಗಾರ, ವಾಟಾಳ್‌‌ ಪಕ್ಷದ ಸಂಸ್ಥಾಪಕ ಅಧ್ಯಕ್ಷ ವಾಟಾಳ್‌ ನಾಗರಾಜ್‌ಆಗ್ರಹಿಸಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಕೆಲಹೊತ್ತು ಮಲಗಿ ಏಕಾಂಗಿ ಪ್ರತಿಭಟನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮೇಲಿನಿಂದ ಮಾಡಿದ್ದಾರೆ. ಆದರೆ, ಕೆಳಗೆ ಇಳಿದು ಮಾಡಿದ್ದರೆ ಜನರ ಪರಿಸ್ಥಿತಿ ಅರ್ಥವಾಗುತ್ತಿತ್ತು. ಅದನ್ನು ಅವರು ಮಾಡಿಲ್ಲ’ ಎಂದು ದೂರಿದರು.

‘ಪ್ರಧಾನಿ ಮೋದಿಯವರು ತಮಿಳುನಾಡು ಆಗಿದ್ದರೆ ಬರುತ್ತಿದ್ದರು. ಕರ್ನಾಟಕಕ್ಕೆ ಬಂದಿಲ್ಲ. ಅಲ್ಲದೆ ರಾಜ್ಯದ ಕೇಂದ್ರ ಸಚಿವರು, ಸಂಸದರು ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದಾರೆ’ ಎಂದು ಆಪಾದಿಸಿದರು.

ADVERTISEMENT

‘ಅಕ್ಟೋಬರ್ 29ಕ್ಕೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು, ಸಂಸದರನ್ನು ಹರಾಜು ಹಾಕುವ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಮನೆಗಳನ್ನು ನಿರ್ಮಿಸಿದರೂ ಅವುಗಳೇ ಮೂಲಸೌಕರ್ಯವನ್ನೇ ಕಲ್ಪಿಸಿಲ್ಲ. ಹೀಗಾಗಿ ಜನರು ಅಲ್ಲಿಗೆ ತೆರಳುತ್ತಿಲ್ಲ’ ಎಂದರು.

‘ನವೆಂಬರ್ 17ರಂದು ಕಾಲೇಜುಗಳನ್ನು ತೆಗೆಯಲು ಸರ್ಕಾರ ತೀರ್ಮಾನಿಸಿದೆ. ಇದು ಸರಿಯಲ್ಲ. ಮಕ್ಕಳನ್ನು ಕಳಿಸಬೇಡಿ ಎಂದು ಚಳವಳಿ ಮಾಡುತ್ತೇವೆ. ಖಾಸಗಿಯವರ ಲಾಬಿಗೆ ಮಣಿದಿದ್ದಾರೆ. ರಾಜ್ಯದಲ್ಲಿ ಕೊರೊನಾ ತಾಂಡಾವವಾಡುತ್ತಿದೆ. ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್‌ ಮಾಡಬೇಕು. ಆನ್‌ಲೈನ್‌ ಶಿಕ್ಷಣ ವಿಫಲವಾಗಿದೆ. ಕೋವಿಡ್‌ನಿಂದ ಶಿಕ್ಷಕರು, ವಿದ್ಯಾರ್ಥಿಗಳು ಸತ್ತರೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಚಳವಳಿ ಮಾಡುತ್ತೇವೆ’ ಎಂದರು.

‘ಸದನದ ಒಳಗೆ, ಹೊರಗೆ ಶಿಕ್ಷಕರ ಶಕ್ತಿಯಾಗುತ್ತೇನೆ. ಶಿಕ್ಷಕರು ತಮಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಸುವರ್ಣ ಸೌಧದಲ್ಲಿ ತುರ್ತು ಅಧಿವೇಶನ ನಡೆಸಬೇಕು. ಈ ಮೂಲಕ ಈ ಭಾಗದ ಜನರ ಸಮಸ್ಯೆ ಪರಿಹರಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.