ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 15:09 IST
Last Updated 8 ಜೂನ್ 2019, 15:09 IST
ಹುಣಸಗಿ ತಾಲ್ಲೂಕಿನ ಕನ್ನಳ್ಳಿ ಗ್ರಾಮದಲ್ಲಿ ಐದು ವರ್ಷಗಳಿಂದ ಕುಟುಂತ್ತಾ ಸಾಗುತ್ತಿರುವ ಪ್ರೌಢ ಶಾಲೆ ಕಾಮಗಾರಿ ಕುಡುಕರ ಅಡ್ಡೆಯಾಗಿದೆ
ಹುಣಸಗಿ ತಾಲ್ಲೂಕಿನ ಕನ್ನಳ್ಳಿ ಗ್ರಾಮದಲ್ಲಿ ಐದು ವರ್ಷಗಳಿಂದ ಕುಟುಂತ್ತಾ ಸಾಗುತ್ತಿರುವ ಪ್ರೌಢ ಶಾಲೆ ಕಾಮಗಾರಿ ಕುಡುಕರ ಅಡ್ಡೆಯಾಗಿದೆ   

ಯಾದಗಿರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನಿಂದ ಜೂನ್ 21ರಂದು ಎರಡನೇ ಬಾರಿ ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ. ಮನೆ ಬದಲಾಗಿ ಶಾಲೆಯಲ್ಲಿ ತಂಗಲಿದ್ದಾರೆ. ಯಾವ ಊರಿನ ಶಾಲೆ ಎಂಬುದು ಇನ್ನೂ ಅಂತಿಮ ಆಗಿಲ್ಲ.

ಎಚ್.ಡಿ.ಕುಮಾರಸ್ವಾಮಿ 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ತುಂಬಾ ಹೆಸರು ತಂದುಕೊಟ್ಟಿತ್ತು. ಅದರಂತೆ ಪಕ್ಷದ ಬೆಳವಣಿಗೆ ಹಾಗೂ ಮೈತ್ರಿ ಸರ್ಕಾರದ ಆಡಳಿತಕ್ಕೆ ಚುರುಕು ಮುಟ್ಟಿಸಲು ಈ ಬಾರಿ ಹೈದರಾಬಾದ್ ಕರ್ನಾಟಕದಿಂದ ವಾಸ್ತವ್ಯ ಆರಂಭಿಸುತ್ತಿದ್ದಾರೆ.

ಉತ್ತರ ಕರ್ನಾಟಕ ಭಾಗವವರು ಜೆಡಿಸ್‌ ಬೆಂಬಲಿಸಿಲ್ಲ ಎನ್ನುವ ಕಾರಣಕ್ಕಾಗಿ ಈ ಭಾಗವನ್ನು ನಿರ್ಲಕ್ಷ್ಯಿಸಲಾಗಿದೆ ಎನ್ನುವ ಆರೋಪದ ಮಧ್ಯೆ ಹೈದರಾಬಾದ್‌ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಕುಮಾರಸ್ವಾಮಿಯವರು ಈ ಹಿಂದೆ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕನ್ನಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು.

ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಕ್ಷೇತ್ರ. ಮೊದಲಿಗೆ ಜೆಡಿಎಸ್ ಪ್ರಾಬಲ್ಯ ಇರುವ ಕಡೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಗ್ರಾಮ ವಾಸ್ತವ್ಯ ಮಾಡುತ್ತಿ‌ದ್ದಾರೆ. ಈಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಹಾಪುರ ನಗರಸಭೆಯಲ್ಲಿ ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ. ಅಲ್ಲದೆ ಈ ಭಾಗದಲ್ಲಿ ಜೆಡಿಎಸ್‌ ಸಾಧನೆ ಅಷ್ಟೇನೂ ಸಮಾಧಾನಕರವಾಗಿಲ್ಲ. ಹೀಗಾಗಿ ಇಲ್ಲಿ ಗ್ರಾಮ ವಾಸ್ತವ್ಯ ಮೂಲಕ ಜನತೆಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ADVERTISEMENT

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ವಿರೋಧಿಸಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲು ರೈತ ಸಂಘ ನಿರ್ಧಾರ ಮಾಡಿದೆ. ಕೊಟ್ಟಿರುವ ಭರವಸೆ ಈಡೇರಿಸಲು ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ದೂರಿದೆ.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ತಕ್ಷಣವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅದು ಬರೀ ಭರವಸೆಯಾಗಿಯೇ ಉಳಿದಿದೆ. ರೈತರ ಸಾಲ ಸಂಪೂರ್ಣ ಮನ್ನಾ ಆಗಿಲ್ಲ. ಸಿಎಂ ಸುಳ್ಳು ಭರವಸೆ ನೀಡಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.