ವಡಗೇರಾ: ‘ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಯೊಬ್ಬ ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಅನುಭವನ್ನು ರೈತರಿಂದ ಪಡೆದುಕೊಳ್ಳಬೇಕು. ನವೀನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ರೈತರಿಗಾಗಿ ಹಮ್ಮಿಕೊಳ್ಳಬೇಕು’ ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಜಿ.ಸಿ. ಶೇಖರ ಹೇಳಿದರು.
ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ದಿನಾಲೂ ಕೃಷಿ ವಿಚಾರ ಸಂಕೀರ್ಣ ಏರ್ಪಡಿಸಿ ಬೆಳೆಗಳಿಗೆ ಕೀಟ ರೋಗ, ನೀರು, ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿಯನ್ನು ಕೋಡಬೇಕು’ ಎಂದು ತಿಳಿಸಿದರು.
‘ಸಾಮಾಜಿಕ ಚಟುವಟಿಕೆಗಳಾದ ಸ್ವಚ್ಚತೆ, ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ, ಆರೋಗ್ಯ, ಹಾಗೂ ಅಪೌಷ್ಟಿಕತೆ, ರಕ್ತದಾನ ಹಾಗೂ ಇನ್ನಿತರ ಶಿಬಿರಗಳನ್ನು ಆಯೋಜಿಸಬೇಕು’ ಎಂದು ಹೇಳಿದರು.
ಶಿಬಿರದ ಸಂಯೋಜಕರಾದ ಶ್ಯಾಮರಾವ ಕುಲ್ಕರ್ಣಿ ಮಾತನಾಡಿ, ‘ಶಿಬಿರದಲ್ಲಿ 56 ವಿದ್ಯಾರ್ಥಿಗಳು 70 ದಿನಗಳವರೆಗೆ ಗ್ರಾಮದಲ್ಲಿ ಇದ್ದು ಗ್ರಾಮಸ್ಥರಿಗೆ ಸ್ವಚ್ಚತೆಯ ಬಗ್ಗೆ ಹಾಗೂ ರೈತರಿಗೆ ಕೃಷಿ ಬಗ್ಗೆ ಸಲಹೆ ಸೂಚನೆಗಳನ್ನು ಕೊಡುವದರ ಜತೆಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಶಿಬಿರದ ಕೊನೆಯ ದಿನ ಕೃಷಿ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯ ಅದ್ಯಕ್ಷೆ ಸುಶೀಲಮ್ಮ ಶಿವಾನಂದಸ್ವಾಮಿ, ಪಿಡಿಒ ಸಿ.ಬಿ ಪಾಟೀಲ್ ಮಾತನಾಡಿದರು.
ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕ ದಯಾನಂದ ಸಾತಿಹಾಳ ಅವರು, ವಿವಿಧ ಬೆಳೆಗಳಲ್ಲಿ ಆರ್ಥಿಕ ವಿಶ್ಲೇಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಮಣ್ಣು ವಿಜ್ಞಾನ ವಿಭಾಗದ ಪ್ರಾದ್ಯಾಪಕ ರುದ್ರಮೂರ್ತಿ ಅವರು, ಬೆಳೆಗಳಲ್ಲಿ ಪೋಷಕಾಂಶಗಳ ಬಗ್ಗೆ ವಿವರಿಸಿದರು.
ಪ್ರಗತಿಪರ ರೈತ ಪರ್ವತರಡ್ಡಿಗೌಡ ದೊಡ್ಡಮನಿ, ಸಂಗಪ್ಪಗೌಡ ಹಳಿಮನಿ, ಪರ್ವತರಡ್ಡಿಗೌಡ ಮಲ್ಹಾರ, ರಘುನಾಥರಡ್ಡಿ ಸೂಗರಡ್ಡಿ, ಶಿವನಗೌಡ ಪೊಲೀಸ ಪಾಟೀಲ್, ಶರಿತ್ತುಗೌಡ, ಬಸಯ್ಯಸ್ವಾಮಿ ಒಳಗಿನಮಠ, ವೀರೂಪಾಕ್ಷರೆಡ್ಡಿ ಸೂಗರೆಡ್ಡಿ, ಅಬ್ಬಾಸ ಅಲಿ ಗಡ್ಡಮನಿ, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಟೀಲ, ಬಂದುಗೌಡ ಐರಡ್ಡಿ, ಬಸವರಾಜ ಮಾಸ್ತರ, ಸೋಮಶೇಖರಯ್ಯ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ದರ್ಶನ ಹಾಗೂ ಪೂಜಾ ನಿರೂಪಿಸಿದರು, ಶ್ವೇತಾ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.