ADVERTISEMENT

‘ಆರೋಗ್ಯಕರ ಸಮಾಜದಿಂದ ಬದಲಾವಣೆ’

ಆರೋಗ್ಯ ಜಾಗೃತಿ ಶಿಬಿರದಲ್ಲಿ ಡಾ. ಬಿರಾದಾರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:57 IST
Last Updated 3 ಜುಲೈ 2025, 14:57 IST
ಯರಗೋಳ ವ್ಯಾಪ್ತಿಯ ಹತ್ತಿಕುಣಿ ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಅರಿವು ಮತ್ತು ಯೋಗ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು
ಯರಗೋಳ ವ್ಯಾಪ್ತಿಯ ಹತ್ತಿಕುಣಿ ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಅರಿವು ಮತ್ತು ಯೋಗ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು   

ಹತ್ತಿಕುಣಿ (ಯರಗೋಳ): ಆರೋಗ್ಯಕರ ಸಮಾಜ ನಿರ್ಮಾಣವಾದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಇಲಾಖೆಯ ಚಟುವಟಿಕೆಗಳಿಗೆ ಜಾಗೃತರಾಗಿ ಸಹಕಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಿರಾದಾರ ಮನವಿ ಮಾಡಿದರು.

ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಿಕುಣಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜನರಲ್ಲಿ ಆರೋಗ್ಯ ಅರಿವು ಮತ್ತು ಯೋಗ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸಕ್ತ ದಿನಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವುದು ದುಃಖಕರ. ಆರೋಗ್ಯದ ಬಗ್ಗೆ ಸಕಾಲಕ್ಕೆ ಎಚ್ಚರಿಕೆ ಹಾಗೂ ಚಿಕಿತ್ಸೆ ಪಡೆಯುವುದು ಅವಶ್ಯಕ’ ಎಂದರು.

ADVERTISEMENT

‘ಬದಲಾದ ಜೀವನಶೈಲಿಯಿಂದ ಸದಾ ಒತ್ತಡ, ರಕ್ತ ಹೀನತೆ, ಅಪೌಷ್ಟಿಕತೆಯಿಂದ ಜನರು ಅನಾರೋಗ್ಯ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ 30 ನಿಮಿಷಗಳ ಕಾಲ ವಾಯುವಿಹಾರ, ಯೋಗ ಅಭ್ಯಾಸಗಳ ಮೈಗೂಡಿಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು ಆರೋಗ್ಯದಿಂದ ಸಧೃಡ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು’ ಎಂದರು.

ಸಂಪನ್ಮೂಲ ವ್ಯಕ್ತಿ ಡಾ. ಅರುಣ ಸಿದ್ರಿ ಅವರು ಹೃದಯ ಸ್ತಂಭನವಾದಾಗ ಸಿಪಿಆರ್ ವಿಧಾನ ನೀಡುವ ಕುರಿತು ಮಾಹಿತಿ ನೀಡಿದರು.

ಯೋಗ ಶಿಕ್ಷಕ ಹಣಮಂತ ವಿವಿಧ ಆಸನಗಳ ಪ್ರದರ್ಶಿಸಿದರು. ಡಾ. ಮುದಾಸಿರ್, ಡಾ. ರಮೇಶ ಸಜ್ಜನ್, ಡಾ.ಬಸರಡ್ಡಿ ಪಾಟೀಲ್ ಗಾಜರಕೋಟ್, ಡಾ. ರಶೀದ್ ಇದ್ದರು.

ವೈದ್ಯರು ಜನರ ಆರೋಗ್ಯ ತಪಾಸಣೆ ಮಾಡಿ, ಔಷಧಿ ವಿತರಿಸಿದರು.


‘ಹಣ್ಣು ತರಕಾರಿ ಸೇವಿಸಿ’

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಣಮಂತರಡ್ಡಿ ಮದ್ನಿ ಮಾತನಾಡಿ ‘ನಾವು ಆರೋಗ್ಯದಿಂದ ಇರಲು ನಿಸರ್ಗದಲ್ಲಿ ಆಯಾ ಕಾಲಕ್ಕೆ ಸಿಗುವ ಹಸಿರು ತರಕಾರಿಗಳನ್ನು ಹಣ್ಣುಗಳನ್ನು ಸೇವನೆ ಮಾಡುವ ಜೊತೆಗೆ ವೈಯಕ್ತಿಕ ಹಾಗೂ ಸಮುದಾಯದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದು ಇತರರಿಗೆ ಪ್ರೇರಣೆಯಾಗಿ ಪರಿವರ್ತನೆಗೆ ಕಾರಣವಾಗುತ್ತದೆ’ ಎಂದರು. ಮಳೆಗಾಲದಲ್ಲಿ ವಾಂತಿ-ಭೇದಿ ಮಲೇರಿಯಾ ಡೆಂಗಿ ಕಾಯಿಲೆಗಳು ಕಂಡು ಬರುತ್ತವೆ ಕಾಯಿಸಿ-ಆರಿಸಿದ ನೀರು ಪೌಷ್ಟಿಕ ಆಹಾರ ಸೇವಿಸಿ ರೋಗಗಳಿಂದ ದೂರವಿರಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.