ADVERTISEMENT

ಯಾದಗಿರಿ | 200ಕ್ಕೂ ಹೆಚ್ಚು ಕುರಿಗಳೊಂದಿಗೆ ಸಿಲುಕಿಕೊಂಡಿರುವ ಕುರಿಗಾಹಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 16:54 IST
Last Updated 8 ಆಗಸ್ಟ್ 2020, 16:54 IST

ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ 2.20 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿಸುತ್ತಿರುವುದರಿಂದ ಕುರಿಗಾಹಿಯೊಬ್ಬರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ.

ತಾಲ್ಲೂಕಿನ ನಾರಾಯಣಪುರ ಸಮೀಪದ ಐ.ಬಿ.ತಾಂಡಾದ ಕುರಿಗಾಹಿ ಟೋಪಣ್ಣ ಅವರು ತಂದೆ ಟೀಕಪ್ಪ ಅವರೊಂದಿಗೆ 200ಕ್ಕೂ ಹೆಚ್ಚು ಕುರಿಗಳೊಂದಿಗೆ 8 ದಿನಗಳ ಹಿಂದೆ ನದಿ ಬಳಿಯ ನಡುಗಡ್ಡೆಗೆ ತೆರಳಿದ್ದರು. ಕಳೆದ ಮೂರು ದಿನಗಳ ಹಿಂದೆ ಟೀಕಪ್ಪ ಕೆಲಸ ನಿಮಿತ್ತ ತಮ್ಮ ಮನೆಗೆ ಆಗಮಿಸಿದ್ದಾರೆ.

ಆ ಬಳಿಕ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದಾಗಿ ನದಿಯ ಮಧ್ಯದಲ್ಲಿರುವ ನಡುಗಡ್ಡೆಯಲ್ಲಿ ಕುರಿಗಳೊಂದಿಗೆಟೋಪಣ್ಣ ಸಿಲುಕಿಕೊಂಡಿದ್ದಾರೆ.

ADVERTISEMENT

ಶುಕ್ರವಾರ ಸಂಜೆಯಿಂದಲೇ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಹುಣಸಗಿ ತಹಶೀಲ್ದಾರ್ ವಿನಯ ಕುಮಾರ ಪಾಟೀಲ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಪಿಎಸ್ಐ ಬಾಷುಮಿಯಾ, ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿ ಹನುಮಗೌಡ ಪೊಲೀಸ್ ಪಾಟೀಲ ಹಾಗೂ ಸುರಪುರದ ಪ್ರದೀಪ ವಾಲಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.

ರಾತ್ರಿ ವೇಳೆಗೆ ಎನ್.ಡಿ.ಆರ್.ಎಫ್ ತಂಡ ಆಗಮನ: ನಾರಾಯಣಪುರ ಬಳಿ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಕುರಿಗಾಹಿಯನ್ನು ಸುರಕ್ಷಿತವಾಗಿ ಕರೆ ತರಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಸುರಪುರ ಶಾಸಕ ರಾಜೂಗೌಡ ತಿಳಿಸಿದರು.

ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ಹೈದರಾಬಾದ್‌ನ ಎನ್‌.ಡಿ.ಆರ್‌.ಎಫ್ ಅಧಿಕಾರಿಗಳೊಂಗೆ ಮಾತನಾಡಿದ್ದು, ಶನಿವಾರ ರಾತ್ರಿ ವೇಳೆಗೆ ಸ್ಥಳಕ್ಕೆ ಆಗಮಿಸಲಿದ್ದಾರೆ. ರಾತ್ರಿ ಕಾರ್ಯಾಚರಣೆ ಸಾಧ್ಯವಾಗದಿದ್ದರೆ ಬೆಳಿಗ್ಗೆ ಕುರಿಗಾಹಿಯನ್ನು ಕರೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.