ಯಾದಗಿರಿ: ‘ಸಾಮಾಜಿಕ ಪಿಡುಗಾಗಿರುವ ಮಾನವ ಕಳ್ಳ ಸಾಗಾಣಿಕೆಯಲ್ಲಿ ಮಹಿಳೆಯರು ಮತ್ತು ಮಕ್ಕಳೇ ಅತಿ ಹೆಚ್ಚು ಗುರಿಯಾಗುತ್ತಿದ್ದಾರೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಸ್ತ್ರೀ ಶಕ್ತಿ ಭವನದಲ್ಲಿ ಈಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಸಮಗ್ರ ಶಿಶು ಸಂರಕ್ಷಣಾ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರು ಮತ್ತು ಮಕ್ಕಳ ಮೇಲೆ ವಿಪರೀತ ದೌರ್ಜನ್ಯಗಳು ನಡೆಯುತ್ತಿವೆ. ಮಕ್ಕಳಿಗೆ ಆಸೆ ತೋರಿಸಿ ಅವರನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವ ಇಂತಹ ದುಷ್ಕೃತ್ಯಗಳನ್ನು ತೊಲಗಿಸಲು ನಾವೆಲ್ಲರೂ ಎಚ್ಚೆತ್ತುಕೊಂಡು ಸಮಾಜದ ಒಳತಿಗಾಗಿ ಕೆಲಸ ಮಾಡಬೇಕಿದೆ’ ಎಂದರು.
ವಕೀಲರಾದ ಲತಾ ನಾಯಕ್ ಮಾತನಾಡಿ, ‘ಸಮಾಜದಲ್ಲಿನ ಎಲ್ಲಾ ವರ್ಗಗಗಳಲ್ಲಿನ ವಯಸ್ಸಾದವರು ಸಹ ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದಾರೆ. ತಂದೆ– ತಾಯಿಯನ್ನು ಖಾಸಗಿ ಮಕ್ಕಳ ಪಾಲನೆ ಕೇಂದ್ರಗಳಿಗೆ ಕಳುಹಿಸುವುದು ಸಹ ಮಾನವ ಕಳ್ಳ ಸಾಗಣಿಕೆ ಎನ್ನಬಹುದು. ನಮ್ಮ ಪಕ್ಕದಲ್ಲಿಯೇ ಗಮನಕ್ಕೆ ಬಾರದ ರೀತಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿರುತ್ತದೆ. ಹೆಣ್ಣು ಮಕ್ಕಳ ವಿಷಯದಲ್ಲಿ ಪೋಷಕರು ಸ್ನೇಹ ಪರವಾಗಿ ಇರಬೇಕಾಗುತ್ತದೆ’ ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆಯು ಗುಲಾಮಗಿರಿಯ ರೂಪವಾಗಿದ್ದು, ಲಕ್ಷಾಂತರ ಅಮಾಯಕರು ಬಲಿಯಾಗುತ್ತಿದ್ದಾರೆ. ನಮ್ಮ ಸಮಾಜ ಎಷ್ಟೇ ಮುಂದುವರೆದಿದ್ದರೂ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಬಾಲ ಗರ್ಭಿಣಿಯಂತಹ ಸಾಮಾಜಿಕ ಪಿಡುಗು ಜೀವಂತವಾಗಿದೆ. ಮದುವೆ ನೆಪದಲ್ಲಿಯೂ ಮಾನವ ಸಾಗಾಣಿಕೆ ನಡೆಯುತ್ತದೆ’ ಎಂದರು.
‘ಬೇರೆ ರಾಜ್ಯಗಳಿಂದ ಕೆಲಸದ ನೆಪದಲ್ಲಿ ಕರ್ನಾಟಕಕ್ಕೆ ಬಂದ ಕೆಲವರು ವಧು ದಕ್ಷಿಣೆ, ಊಡುಗೋರೆ, ಆಭರಣಗಳ ಆಸೆ ತೋರಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ರೀತಿಯ ಚಟುವಟಿಕೆಗಳಿಗೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳು, ಬಡವರು ಸುಲಭವಾಗಿ ಬಲಿಯಾಗುತ್ತಿದ್ದಾರೆ. ಇಂತಹ ಕೃತ್ಯಗಳನ್ನು ತಡೆಯಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಾವಲು ಸಮಿತಿಗಳನ್ನು ರಚನೆ ಮಾಡಿ, ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು’ ಎಂದು ಹೇಳಿದರು.
ಪಿಎಂ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕಿ ಆಶಾ ಬೇಗಂ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗುರುರಾಜ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ದೀಪಿಕಾ, ಜಿಲ್ಲಾ ಮಿಷನ್ ಸಂಯೋಜಕ ಯಲ್ಲಪ್ಪ.ಕೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಶಿಶು ಅಭಿವೃದ್ಧಿ ಯೋಜನೆ ಹಿರಿಯ ಮೇಲ್ವಿಚಾರಕಿ ಉಷಾ ಬಳಗನೂರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.