
ಯಾದಗಿರಿ: ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಹುಣಸಗಿ ಠಾಣೆಯ ಪೊಲೀಸರು 4 ಗಂಟೆಯಲ್ಲಿ ಪತ್ತೆಹಚ್ಚಿ ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.
ಹುಣಸಗಿ ತಾಲ್ಲೂಕಿನ ಯುಕೆಪಿ ಕ್ಯಾಂಪ್‌ನ ತವರು ಮನೆಯಲ್ಲಿ ಉಳಿದುಕೊಂಡಿದ್ದ ಪೂಜ್ಯಾ ಮಣ್ಮದರಾವ (26) ಕೊಲೆಯಾದವರು. ಇದೇ ಕ್ಯಾಂಪ್‌ನ ಅಂಬರೇಶ ಚಂದ್ರಶೇಖರ ಬಂಧಿತ ಆರೋಪಿ. ಹುಣಸಗಿ ಸಿಪಿಐ ರವಿಕುಮಾರ್ ಹಾಗೂ ಪಿಎಸ್‌ಐ ಭಾಗಣ್ಣ ಅವರಿದ್ದ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಾಣತನಕ್ಕೆ ತವರು ಮನೆಗೆ ಬಂದಿದ್ದ ಪೂಜ್ಯಾ ಅವರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಮಕ್ಕಳನ್ನು ನೋಡಿಕೊಳ್ಳಲು ತೊಂದರೆ ಆಗುತ್ತದೆ ಎಂದು ತವರು ಮನೆಯಲ್ಲೇ ಉಳಿದುಕೊಂಡಿದ್ದರು. ಆಗಾಗ ಮನೆಗೆ ಬರುತ್ತಿದ್ದ ಅಂಬರೇಶ, ಮಹಿಳೆಯ ಜತೆಗೆ ಸಲಿಗೆಯಿಂದ ಮಾತನಾಡುತ್ತಿದ್ದನು. ಜೊತೆಗೆ ಬೈಕ್‌ನಲ್ಲಿ ಕರೆದುಕೊಂಡು ತಿರುಗಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 4ರ ಸುಮಾರಿಗೆ ಮಹಿಳೆಯು ಚಪ್ಪಲಿ ತರಲು ಬಜಾರ್‌ಗೆ ಹೋಗುವುದಾಗಿ ಹೇಳಿ ತೆರಳಿದ್ದರು. ಆದರೆ, ಅಂಬರೇಶ ಅವರು ಪೂಜ್ಯಾ ಅವರನ್ನು ಯುಕೆಪಿ ಕ್ಯಾಂಪ್‌ನಲ್ಲಿ ಇರುವ ಮನೆಗೆ ಕರೆದೊಯ್ದು, ಅಲ್ಲಿಯೇ ಕೊಲೆ ಮಾಡಿದರು. ಬಳಿಕ ಅಲ್ಲಿಂದ ಪರಾರಿಯಾದರು ಎಂದರು.
‘ಕೊಲೆ ಮಾಡುವುದು ಗೊತ್ತಾಗುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು. ಆರೋಪಿ ಸಾಗಿದ ಜಾಡು ಹಿಡಿಯಲಾಯಿತು. ಮುಂಬೈಗೆ ತೆರಳಲು ಹೊಂಚು ಹಾಕಿ ದಾಬಾ ಒಂದರಲ್ಲಿ ಕುಳಿತ್ತಿದ್ದ ಆರೋಪಿ ಅಂಬರೇಶನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಬೇರೆಯವನೊಂದಿಗೆ ಸಂಬಂಧ ಆರೋಪ: ‘ಒಂದೂವರೆ ವರ್ಷದಿಂದ ನನ್ನೊಂದಿಗೆ ಇದ್ದು ನನ್ನಿಂದ ಸಾಕಷ್ಟು ಹಣವನ್ನು ಪಡೆದಿದ್ದಳು. ಈಗ ಬೇರೆ ವ್ಯಕ್ತಿಯ ಜೊತೆಗೆ ಸಂಬಂಧ ಬೆಳೆಸಿ, ಆತನಿಂದ ಹಣ ಪಡೆಯುತ್ತಿದ್ದಳು. ಈ ಸಂಬಂಧ ನಮ್ಮ ನಡುವೆ ವಾಗ್ವಾದ ನಡೆಯಿತು. ಓಡ್ನಿಯಿಂದ ಕುತ್ತಿಗೆ ಹಿಸುಕು ಕೊಲೆ ಮಾಡಿದ್ದಾಗಿ ಆರೋಪಿಯು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಕಾಣೆಯಾದ ಬಾಲಕಿ ಶವವಾಗಿ ಪತ್ತೆ ಕಾಣೆಯಾಗಿದ್ದ 17 ವರ್ಷದ ಬಾಲಕಿಯೊಬ್ಬರು ಸೇವಾ ನಾಯಕ ತಾಂಡಾ ಸಮೀಪದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಹುಣಸಗಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಗಂಗಾವತಿಯ ಕಾಲೇಜು ಒಂದರಲ್ಲಿ ಪಿಯು ಓದುತ್ತಿದ್ದಳು. ಬಾಲಕಿ ಕಾಣೆಯದ ಬಗ್ಗೆ ಪೋಷಕರು ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿದ್ದರು. ಬಾಲಕಿಯ ಮೃತ ದೇಹವು ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸೇವಾ ನಾಯಕ ತಾಂಡಾ ಸಮೀಪದ ಬೋರಕಾ ಗೇಟ್ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿದೆ. ಬಾಲಕಿಯು ಶವವಾಗಿ ಪತ್ತೆ ಆಗಿದ್ದು ಗೊತ್ತಾಗುತ್ತಿದ್ದಂತೆ ಆಕೆಯ ಸಂಬಂಧಿಕರು ಕೆಲ ಗ್ರಾಮಸ್ಥರು ಕೊಡೆಕಲ್ ಪೊಲೀಸ್ ಠಾಣೆಯ ಮುಂದೆ ಕೆಲ ಹೊತ್ತು ಜಮಾಯಿಸಿದರು.
ಬಯಲು ಬಹಿರ್ದೆಸೆ: ಕೆನಾಲ್‌ಗೆ ಬಿದ್ದು ಸಾವು ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದ ಸಮೀಪದಲ್ಲಿ ಬಯಲು ಬಹಿರ್ದೆಸೆಗೆ ಹೋಗಿದ್ದ ವ್ಯಕ್ತಿಯೊಬ್ಬರು ನೀರಿಗಾಗಿ ಕೆನಾಲ್‌ಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬಿಳೆಬಾವಿಯ ಕೆಇಬಿ ಲೈನ್‌ಮನ್ ಸುಭಾಷಚಂದ್ರ ಯಮನಪ್ಪ (30) ಮೃತರು. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಭಾಷಚಂದ್ರ ಅವರು ದೀಪಾವಳಿ ಹಬ್ಬಕ್ಕೆ ಪತ್ನಿಯ ತವರು ಮನೆಗೆ ಬಂದಿದ್ದರು. ಶುಕ್ರವಾರ ಬೆಳಿಗ್ಗೆ ಬೈಕ್ ಮೇಲೆ ಬಯಲು ಬಹಿರ್ದೆಸೆಗೆ ತೆರಳಿದ್ದರು. ನೀರು ತುಂಬಿಕೊಳ್ಳಲು ಕೆನಾಲ್ ಬಳಿ ಹೋದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಕೆನಾಲ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.