ಸುರಪುರ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ದೊಡ್ಡ ಅಂಕಣಗಳ ಮನೆಗಳಿಗೆ ಮರದ ಸುಂದರ ಕುಸುರಿ ಕೆತ್ತನೆಯಿಂದ ಆಕರ್ಷಿತಗೊಳಿಸುವುದು ಒಂದು ರೀತಿಯ ಪ್ರತಿಷ್ಠೆ.
ಮೋಹಕ ಕಂಬಗಳ ಚಿತ್ತಾರ. ಸೂಕ್ಷ್ಮ ಕೆತ್ತನೆಯ ತೊಲೆಗಳು, ಅವುಗಳ ಮುಂದೆ ಕುಸುರಿ ಕಲೆಯ ಹಯದ ವದನಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ. ಬಹುತೇಕ ಕಡೆ ಇಂತಹ ಕಾಷ್ಠ ಶಿಲ್ಪ ಅರಳಿದ್ದು ತಾಲ್ಲೂಕಿನ ದೇವಪುರ ಗ್ರಾಮದ ದೇವಿಂದ್ರಪ್ಪ ಶಿವಣ್ಣ ವಿಶ್ವಕರ್ಮ ಕೈಯಲ್ಲಿ.
80ರ ಹರೆಯದ ದೇವಿಂದ್ರಪ್ಪ ಕಳೆದ 60 ವರ್ಷಗಳಿಂದ ನಿರಂತರವಾಗಿ ಕಾಷ್ಠ ಶಿಲ್ಪದ ಕಲಾಯಾನ ನಡೆಸಿದ್ದಾರೆ. ನೀಳಕಾಯದ ಶರೀರ, ಪಂಚೆ, ಬನೀನಿನ ಮೇಲೆ ಒಂದು ಟವಲ್ ಹಾಕಿಕೊಂಡು, ಒಂದು ಕೈಯಲ್ಲಿ ಉಳಿ, ಇನ್ನೊಂದು ಕೈಯಲ್ಲಿ ಸುತ್ತಿಗೆ ಹಿಡಿದುಕೊಂಡು ಕೆಲಸಕ್ಕೆ ನಿಂತರೆ ತಮಗೆ ಗೊತ್ತಿಲ್ಲದಂತೆ ಕೆತ್ತನೆಯಲ್ಲಿ ತಲ್ಲೀನರಾಗಿ ಬಿಡುತ್ತಾರೆ.
4ನೇ ತರಗತಿವರೆಗೆ ಅಭ್ಯಾಸ ಮಾಡಿದ ನಂತರ ಓದು ರುಚಿಸಲಿಲ್ಲ. ಪೋಷಕರ ಅಸಮಾಧಾನದ ನಡುವೆಯೂ ಕೋನ್ಹಾಳ ಗ್ರಾಮದ ದೇವಿಂದ್ರಪ್ಪ ಬಡಿಗೇರ ಅವರ ಹತ್ತಿರ ಕಲೆಯ ಎಲ್ಲ ಒಳ ಸುಳಿವುಗಳನ್ನು ಕರಗತ ಮಾಡಿಕೊಂಡರು.
ತಮ್ಮ 20ನೇ ವಯಸ್ಸಿನಲ್ಲಿ ಸ್ವತಂತ್ರವಾಗಿ ಉದ್ಯೋಗದಲ್ಲಿ ತೊಡಗಿಕೊಂಡ ಅವರು ಹಿಂತಿರುಗಿ ನೋಡಲಿಲ್ಲ. ನಿತ್ಯ ಕನಿಷ್ಠ 6 ಗಂಟೆ ಕಾಯಕದಲ್ಲಿ ತೊಡಗುತ್ತಾರೆ.
ಮೊದ ಮೊದಲು ಬೇಸಾಯದ ಸಾಮಗ್ರಿಗಳಾದ ನೇಗಿಲು, ಕೂರಿಗೆ, ಕುಂಟಿ ಇತರ ಸಾಮಾನುಗಳನ್ನು ಮಾಡಿಕೊಡುತ್ತಿದ್ದರು. ಕ್ರಮೇಣ ನವಿರಾದ ಕೆತ್ತನೆಯತ್ತ ತಮ್ಮ ಚಿತ್ತವನ್ನು ಬದಲಿಸಿಕೊಂಡರು.
ಸಾಗವಾನಿ, ಹೊನ್ನೆ, ರತ್ನಮಂಡಲ ಕಟ್ಟಿಗೆಗಳನ್ನು ಬಳಸಿ ಇದುವರೆಗೆ 30ಕ್ಕೂ ಹೆಚ್ಚು ವಿವಿಧ ದೇವರ ಮೂರ್ತಿಗಳಾದ ಕೆಂಚಮ್ಮ, ಮರಗಮ್ಮ, ದುರ್ಗಮ್ಮ, ಪಾಲಕಮ್ಮ ಇತರ ಕಲಾಕೃತಿಗಳನ್ನು ಕೆತ್ತಿದ್ದಾರೆ.
ಕಂಬಗಳು, ತೊಲೆಗಳು, ಕುದುರೆಮುಖ, ಸಿಂಹಾಸನ, ಮೇಜು, ಮಂಚ, ಕುರ್ಚಿ, ಬಾಗಿಲು, ಕಿಟಕಿ, ಪಲ್ಲಕ್ಕಿ ಇತರ ಸಾಮಾನುಗಳನ್ನು ಕೆತ್ತಿದ್ದಾರೆ.
ಸುರಪುರ, ಶಹಾಪುರ, ಯಾದಗಿರಿ, ಲಿಂಗಸುಗೂರು, ದೇವದುರ್ಗದ ಗ್ರಾಮೀಣ ಭಾಗದ ಮನೆಗಳಲ್ಲಿ, ದೇಗುಲಗಳಲ್ಲಿ ಇವರ ಕಲಾಕೃತಿಗಳು ಇವೆ.
ಸಾಮಾನ್ಯವಾಗಿ 3 ಅಡಿಯಿಂದ 7 ಅಡಿಯವರೆಗೆ ಮೂರ್ತಿಗಳನ್ನು ಕೆತ್ತುತ್ತಾರೆ. ಕೆತ್ತನೆಯ ಸೂಕ್ಷ್ಮತೆ, ಕಟ್ಟಿಗೆ ಇದರ ಆಧಾರದಲ್ಲಿ ₹50 ಸಾವಿರದಿಂದ ₹4 ಲಕ್ಷದವರೆಗೂ ಬೆಲೆ ಇದೆ. ಒಂದು ಮೂರ್ತಿಯ ಕೆಲಸದ ಅವಧಿ 2 ತಿಂಗಳಿಂದ 6 ತಿಂಗಳು.
ಕಾಷ್ಠ ಶಿಲ್ಪ ತಮ್ಮ ನೆಮ್ಮದಿಯ ಸಂಸಾರಕ್ಕೆ ನೆರವಾಗಿದೆ ಎನ್ನುವ ದೇವಿಂದ್ರಪ್ಪ ತಮ್ಮ ಕಲೆಯನ್ನು ತಮ್ಮ ಇಬ್ಬರು ಮಕ್ಕಳಿಗೆ ಧಾರೆ ಎರೆದಿದ್ದಾರೆ. ಇಂತಹ ಅನನ್ಯ ಕಲಾವಿದನ್ನು ಇದುವರೆಗೂ ಸರ್ಕಾರ, ಸಂಘ, ಸಂಸ್ಥೆಗಳು ಗುರುತಿಸದಿರುವುದು ವಿಪರ್ಯಾಸ.
ದೇವಿಂದ್ರಪ್ಪ ಅವರ ಸಂಪರ್ಕ ಸಂಖ್ಯೆ: 9902115358
ಕಾಷ್ಠ ಶಿಲ್ಪ ನವಿರಾದ ಕೆಲಸ. ಕಲಾವಿದರು ಮರವನ್ನು (ಕಟ್ಟಿಗೆ) ವಿವಿಧ ಆಕಾರಗಳಲ್ಲಿ ಕೆತ್ತಿ ಕಲಾಕೃತಿಗಳನ್ನು ರಚಿಸುತ್ತಾರೆ. ಏಕಾಗ್ರತೆ ತಲ್ಲೀನತೆ ಕಲಾವಿದನಿಗೆ ಅವಶ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಇಡೀ ಕಲಾಕೃತಿ ಹಾಳಾಗಿ ಹೋಗುತ್ತದೆ. ಕಂಬ ತೊಲೆಗಳಿಗೆ ಆಕರ್ಷಕ ಕೆತ್ತನೆ ಮೊದಲ ನೋಟದಲ್ಲೇ ಭಕ್ತಿ ಸೂಸುವ ಮೂರ್ತಿಯನ್ನು ಕೆತ್ತುವ ಕಾಷ್ಠ ಶಿಲ್ಪಿಗೆ ಬೇಡಿಕೆ ಇರುತ್ತದೆ. ತಮ್ಮ ಪರಿಣತಿ ಬುದ್ಧಿಮತ್ತೆಯಿಂದ ಕಲಾಕೃತಿಗಳಲ್ಲಿ ಜೀವ ತುಂಬುತ್ತಾರೆ. ಈ ಕಲೆ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ.
ಜೀವನದ ನಿರ್ವಹಣೆಗೆ ಕಾಷ್ಠ ಶಿಲ್ಪದ ಮೊರೆ ಹೋದೆ. ಇದು ನನ್ನ ಕೈ ಹಿಡಿದಿದೆ. ಪ್ರಶಸ್ತಿಗಾಗಿ ಕೆಲಸ ಮಾಡುತ್ತಿಲ್ಲ. ನನ್ನ ಕೃತಿಗಳು ಜನ ಮನಗೆದ್ದರೆ ಅದುವೇ ದೊಡ್ಡ ಪ್ರಶಸ್ತಿ-ದೇವಿಂದ್ರಪ್ಪ, ವಿಶ್ವಕರ್ಮ ಕಾಷ್ಠಶಿಲ್ಪಿ
ದೇವಿಂದ್ರಪ್ಪ ಅಪರೂಪದ ಕಾಷ್ಠ ಶಿಲ್ಪಿ. ನಮ್ಮ ಪರಂಪರೆ ಸಂಸ್ಕೃತಿಯ ಪ್ರತೀಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗುರುತಿಸಬೇಕು.-ವಿದ್ಯಾಕಣ್ವ ವಿರಾಜತೀರ್ಥರು, ಕಣ್ವಮಠಾಧೀಶರು ಹುಣಸಿಹೊಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.