ADVERTISEMENT

ಶಿಕ್ಷಣ, ಆರೋಗ್ಯಕ್ಕೆ ಆದ್ಯತೆಯಲ್ಲಿ ಕೆಲಸ: ಶಾಸಕ ಶರಣಗೌಡ ಕಂದಕೂರ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 7:14 IST
Last Updated 10 ಜುಲೈ 2025, 7:14 IST
ಗುರುಮಠಕಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು
ಗುರುಮಠಕಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು   

ಗುರುಮಠಕಲ್: ‘ಶೈಕ್ಷಣಿಕವಾಗಿ ನಮ್ಮ ಭಾಗದಲ್ಲಿ ಇನ್ನೂ ಉತ್ತಮ ಫಲಿತಾಂಶ ನಿರೀಕ್ಷಿಸುತ್ತಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತದೆ. ಕಾಲೇಜಿನ ಅವಶ್ಯಕತೆಗಳ ಪಟ್ಟಿ ತಯಾರಿಸಿದರೆ ಅದನ್ನು ಪೂರೈಸಲಾಗುವುದು. ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವ ಕೆಲಸ ಮಾಡುವೆ’ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ತಾಳ್ಮೆಯನ್ನು ಅಳವಡಿಸಿಕೊಂಡರೆ ಯಶಸ್ವಿಯಾಗುವಿರಿ’ ಎಂದು ಸಲಹೆ ನೀಡಿದರು.

ಬಸ್ ಸಮಸ್ಯೆ, ಕಾಲೇಜಿನ ಶೌಚಾಲಯದ ಸಮಸ್ಯೆ, ತರಗತಿಗಳು ಸೋರಿಕೆ, ಹಾಸ್ಟೆಲ್ ನೀರಿನ ಸಮಸ್ಯೆ, ಕಾಲೇಜಿ ಆವರಣದಲ್ಲಿ ಮದ್ಯ ಸೇವನೆ, ತರಗತಿಗಳಲ್ಲಿ ಧ್ವನಿವರ್ಧಕಗಳ ಅಳವಡಿಕೆ, ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಗಳ ಪೂರೈಕೆ, ವಿಶ್ವವಿದ್ಯಾಲಯದಿಂದ ಸಮಸ್ಯೆ, ಸಿಸಿಟಿವಿ ಕ್ಯಾಮೆರಾ, ಹೈಮಾಸ್ಟ್ ಅಳವಡಿಕೆ, ಕ್ರೀಡಾಂಗಣದ ಧ್ವನಿವರ್ಧಕದಿಂದ ಸಮಸ್ಯೆ, ಉಪನ್ಯಾಸಕರ ಕೊರತೆ ಕುರಿತು ವಿದ್ಯಾರ್ಥಿಗಳು ವಿವರಿಸಿದರು.

ADVERTISEMENT

ನಿಮ್ಮ ಮನೇಲಿ ನೀರಿನ ಸಮಸ್ಯೆ ಇದೆಯಾ?: ಸರ್ಕಾರಿ ಬಾಲಕಿಯರ ವಸತಿನಿಲಯ(ಬಿಸಿಎಂ)ದ ನೀರಿನ ಸಮಸ್ಯೆ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಕರೆಮಾಡಿದ ಶಾಸಕರು, ‘ಸಾರ್ ನಿಮ್ಮ ಮನೇಲಿ ನೀರಿನ ಸಮಸ್ಯೆಯಿದೆಯಾ? ಹಾಸ್ಟೆಲ್‌ನಲ್ಲಿ ನೀರಿನ ಸಮಸ್ಯೆಯಿದೆ. ನೀವು ಈವರೆಗೂ ಯಾಕೆ ಪರಿಹರಿಸಿಲ್ಲ? ಕೂಡಲೇ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಿ’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕರೆ ಮಾಡಿ, ಪಟ್ಟಣದ ಹಾಸ್ಟೆಲ್‌ಗಳಿಗೆ ಖುದ್ದಾಗಿ ನೀವು ಭೇಟಿ ನೀಡಿ, ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದರು.

ಬಸ್ ವ್ಯವಸ್ಥೆ ಮಾಡಿ: ಕೆಕೆಆರ್‌ಟಿಸಿ ಜಿಲ್ಲಾ ಅಧಿಕಾರಿಗೆ ಕರೆ ಮಾಡಿದ ಶಾಸಕರು,‘ಗ್ರಾಮೀಣ ವಿದ್ಯಾರ್ಥಿನಿಯರಿಗೆ ಬಸ್ ಸಮಸ್ಯೆಯಿದೆ. ಪ್ರಾಂಶುಪಾಲರು ನಿಮಗೆ ವಿವರಿಸುತ್ತಾರೆ. ಕೂಡಲೇ ಮಕ್ಕಳ ಅನುಕೂಲಕ್ಕೆ ವ್ಯವಸ್ಥೆ ಮಾಡಿ’ ಎಂದು ಹೇಳಿದರು.

ಪ್ರಾಂಶುಪಾಲ ಜೆ.ವಿ. ಪುರುಷೋತ್ತಮ ಜೋಶಿ, ಐಸಿಎಫ್‌ಕ್ಯೂ ಮುಖ್ಯಸ್ಥ ಇಮ್ರಾನ್ದ ಖಾಜಿ, ಅಂಜನೇಯ ಸೇರಿದಂತೆ ಸಿಡಿಸಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಸಮಸ್ಯೆಗಳನ್ನು ಶಾಸಕರು ಆಲಿಸಿದರು
ಪ್ರಾಂಶುಪಾಲರೊಂದಿಗೆ ಕೆಲ ಉಪನ್ಯಾಸಕರ ಸಮನ್ವಯತೆಯಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ನಿಮ್ಮಲ್ಲಿ ಮನವಿ ಮಾಡುವೆ ಸಮನ್ವಯತೆಯಿಂದ ಕೆಲಸಮಾಡಿ
ಶರಣಗೌಡ ಕಂದಕೂರ ಶಾಸಕ
ಬೇಬಿ ಮೇಡಂ ಊಟಕ್ಕಷ್ಟೇ ಬರುತ್ತಾರೆ’
‘ ‘ನಮ್ಮ ಹಾಸ್ಟೆಲ್ (ಎಸ್.ಸಿ)ನಲ್ಲಿ ನಾವು ಪಿಯು ಪರೀಕ್ಷೆ ಬರೆಯುವಾಗ ಬಿಸಿ ನೀರಿನ ವ್ಯವಸ್ಥೆ ಹಾಳಾಗಿದೆ. ನಾನೀಗ ಬಿಎ 4ನೇ ಸೆಮಿಸ್ಟರ್‌ ಈವರೆಗೂ ಬಿಸಿ ನೀರು ನೀಡುತ್ತಿಲ್ಲ. ಬೇಬಿ ಮೇಡಂ ಅವರು ಬಂದು ಸಮಸ್ಯೆಗಳನ್ನು ಹೇಳಿ ಎಂದು ಕೇಳುತ್ತಾರೆ. ಆದರೆ ಸಮಸ್ಯೆ ಮಾತ್ರ ಪರಿಹಾರವಾಗಲ್ಲ. ಅವರು ಹಾಸ್ಟೆಲ್‌ಗೆ  ಊಟಕ್ಕಷ್ಟೆ ಬರುತ್ತಾರೆ ಸಾರ್’ ಎಂದು ವಿದ್ಯಾರ್ಥಿನಿಯರು ಅಲವತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.