ADVERTISEMENT

ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿ: ಪಿಎಸ್‌ಐ ಶಹಾಪುರಕರ್

ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಪಿಎಸ್‌ಐ ಶಹಾಪುರಕರ್ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 16:12 IST
Last Updated 2 ಏಪ್ರಿಲ್ 2025, 16:12 IST
ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು
ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು   

ಯಾದಗಿರಿ: ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಜತೆಗೆ ಇಲಾಖೆಯ ಗೌರವ ಕಾಪಾಡಿಕೊಂಡು ಕಪ್ಪುಚುಕ್ಕೆ ಇಲ್ಲದೇ ಕೆಲಸ ಮಾಡುವುದು ಪ್ರತಿಯೊಬ್ಬ ಪೊಲೀಸರ ಆದ್ಯ ಕರ್ತವ್ಯ ಎಂದು ನಿವೃತ್ತ ಪಿಎಸ್‌ಐ ವೆಂಕಣ್ಣ ಶಹಾಪುರಕರ್ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಕವಾಯತು ಪರಿವೀಕ್ಷಣೆ, ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದ ನೆಮ್ಮದಿ ಕಾಪಾಡಿ, ಅಪರಾಧ ಮುಕ್ತ ಸಮಾಜ ನಿರ್ಮಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ. ಇಲಾಖೆಯಲ್ಲಿ ಪ್ರತಿದಿನ ಕರ್ತವ್ಯಗಳಲ್ಲಿ ಸವಾಲುಗಳಿರುತ್ತವೆ. ಪ್ರತಿ ಹಂತದಲ್ಲೂ ಪೊಲೀಸ್ ವ್ಯವಸ್ಥೆ ಅವಶ್ಯಕ. ಸಮಾಜದ ಅವಿಭಾಜ್ಯ ಅಂಗವಾಗಿದೆ ಎಂದರು.

ADVERTISEMENT

ತಾವು ಸೇವೆಗೆ ಸೇರಿದ ಆ ದಿನಗಳಿಗೆ ಹೋಲಿಸಿದರೆ ಇಲಾಖೆ ಎಲ್ಲ ರೀತಿಯಿಂದಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ಸರ್ಕಾರ ಮತ್ತು ಇಲಾಖೆ ಹಾಕಿಕೊಟ್ಟ ನಿಯಮಗಳ ಪ್ರಕಾರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲರೂ ಕೆಲಸ ಮಾಡುವ‌ ಮೂಲಕ ವೃತ್ತಿ ಗೌರವ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕ್ಷೇಮ‌ ನಿಧಿ ಸ್ಥಾಪಿಸಲಾಗಿದ್ದು, ಇದಕ್ಕೆ ಸಂಪನ್ಮೂಲ ಸಂಗ್ರಹಿಸಲು ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ, ಬಂದ ಹಣ ಸಂಗ್ರಹಿಸಿ, ನಿವೃತ್ತ ಪೊಲೀಸ್‌ ಅಧಿಕಾರಿಗಳ ಕಲ್ಯಾಣ ನಿಧಿಗೆ ಶೇ 50ರಷ್ಟು ಜಮಾ ಮಾಡಿ, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುವುದು. ಕೇಂದ್ರ ಕಲ್ಯಾಣ ನಿಧಿಗೂ ಶೇ 50ರಷ್ಟು ಜಮಾ ಮಾಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ‌ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳಾದ ಚಂದ್ರಶೇಖರ, ಹಸನ್ ಪಟೇಲ್, ತಿಪ್ಪಣ್ಣ, ಕಲ್ಯಾಣಿ, ನಿಂಗಣ್ಣ ಮತ್ತು ಬಸವರಾಜ ಅವರನ್ನು ಸನ್ಮಾನಿಸಲಾಯಿತು.‌ ನಂತರ ಐದು ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿಗಳಾದ ಅರುಣಕುಮಾರ, ಜಾವೇದ್ ಇನಾಂದಾರ, ಮಹಿಳಾ ಅಧಿಕಾರಿ ಶ್ರೀದೇವಿ ಬಿರಾದಾರ, ಪಿಎಸ್ಐ ಮಂಜೇಗೌಡ, ಭಾವೈಕ್ಯ ಸಮಿತಿ ಪ್ರಮುಖರಾದ ವಿಶ್ವನಾಥ ಶಿರವಾಳ, ಮರೆಪ್ಪ ಚಟ್ಟರಕರ್‌, ಬಸವರಾಜ, ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿ ಭಾಗವಹಿಸಿದ್ದರು.

ಡಿವೈಎಸ್ಪಿ ಭರತ್ ಕುಮಾರ ಸ್ವಾಗತಿಸಿದರು. ಡಿವೈಎಸ್‌ಪಿ ನಾಗರಾಜ ವಂದಿಸಿದರು. ಕಾನ್‌ಸ್ಟೆಬಲ್‌ ಸಂತೋಷ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.