ADVERTISEMENT

ವಿಶ್ವ ಗ್ರಾಹಕರ ದಿನಾಚರಣೆ: ₹50 ಲಕ್ಷದವರೆಗೆ ಪರಿಹಾರ

ವಿಶ್ವ ಗ್ರಾಹಕರ ದಿನಾಚರಣೆ, ಗ್ರಾಹಕರ ಕಾಯ್ದೆಯಲ್ಲಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:47 IST
Last Updated 16 ಮಾರ್ಚ್ 2022, 16:47 IST
ಯಾದಗಿರಿಯಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಸಾಹಿಲ್ ಅಹ್ಮದ್ ಎಸ್ ಕುನ್ನಿಭಾವಿ ಉದ್ಘಾಟಿಸಿದರು
ಯಾದಗಿರಿಯಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಸಾಹಿಲ್ ಅಹ್ಮದ್ ಎಸ್ ಕುನ್ನಿಭಾವಿ ಉದ್ಘಾಟಿಸಿದರು   

ಯಾದಗಿರಿ: ಗ್ರಾಹಕರ ಹಿತರಕ್ಷಣಾ ಕಾಯ್ದೆ 1986 ರ ಪ್ರಕಾರ ₹20 ಲಕ್ಷದವರೆಗೆ ಗ್ರಾಹಕರ ಪರಿಹಾರ ಕಲ್ಪಿಸಿಕೊಡುವ ಹಾಗೂ ಗ್ರಾಹಕರ ಹಿತರಕ್ಷಣಾ ಕಾಯ್ದೆ 2019 ರ ಪ್ರಕಾರ ₹50 ಲಕ್ಷದವರೆಗೆ ಗ್ರಾಹಕರ ಪರಿಹಾರ ಕಲ್ಪಿಸಿಕೊಡುವ ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಎಂ. ಲೋಕೇಶ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರ ಹಿತರಕ್ಷಣಾ ಕಾಯ್ದೆ 1986 ಈ ಕಾಯಿದೆಯಲ್ಲಿ ಮೋಸ ಹೋಗಿರುವ ಗ್ರಾಹಕರು ಎಲ್ಲಿ ವಸ್ತುಗಳನ್ನು ಖರೀದಿ ಮಾಡಿರುತ್ತಾರೊ ಅಲ್ಲಿಗೆ ಹೋಗಿ ದೂರು ನೀಡುವುದು ಜಾರಿಯಲ್ಲಿತ್ತು. ಹೊಸ ಕಾಯ್ದೆಯ ಪ್ರಕಾರ ಖರೀದಿಸಿದ ವಸ್ತುಗಳ ಜಾಗದಿಂದಲೇ ದೂರು ನೀಡಬಹುದಾಗಿದೆ. ಆದರೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ 2019 ಜಾರಿಗೆ ಬಂದ ನಂತರ ಈ ಕಾಯ್ದೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆಎಂದು ತಿಳಿಸಿದರು.

ADVERTISEMENT

ಈ ಹೊಸ ಕಾಯ್ದೆಯ ಪ್ರಕಾರ ಅಂಗಡಿಯವರು ರಸೀದಿ ಕೊಟ್ಟಿಲ್ಲವೆಂದರೆ ರಸೀದಿ ಕೊಡದೇ ಇರುವ ಅಂಗಡಿಯ ಮಾಲೀಕರ ವಿರುದ್ಧ ನೋಟಿಸ್ ನೀಡುವ ಹಾಗೂ ನಂತರ ಗ್ರಾಹಕರ ವೇದಿಕೆಗೆ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದರು.

ಈ ಹೊಸ ಕಾಯ್ದೆಯ ಪ್ರಕಾರ ವಸ್ತುಗಳನ್ನು ತಯಾರಿಸುವ ಮಾಡುವ, ಮಾರಾಟ ಹಾಗೂ ಖರೀದಿ ಮಾಡುವ ವ್ಯಕ್ತಿಗಳು ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಸಾಹೀಲ್ ಅಹ್ಮದ್ ಎಸ್ ಕುನ್ನಿಭಾವಿ ಮಾತನಾಡಿ, ಗ್ರಾಹಕರು ಯಾವುದೇ ವಸ್ತುಗಳನ್ನು ತೆಗೆದುಕೊಳ್ಳುವಾಗ ರಸೀದಿ ತುಂಬಾ ಮುಖ್ಯವಾಗಿರುತ್ತದೆ. ನ್ಯಾಯಾಲಯಕ್ಕೆ ದಾಖಲೆಗಳು ಅವಶ್ಯಕವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾನೂನು ನೆರವಿನಲ್ಲಿ ಯಾವುದೇ ಪ್ರಕರಣಗಳು ಆಗಿರಲಿ ಬಡವರಿಗೆ, ಕಾರ್ಮಿಕರಿಗೆ ₹50 ಸಾವಿರಕ್ಕಿಂತ ಕಡಿಮೆ ಆದಾಯ ಇರುವವರಿಗೆ ಉಚಿತವಾಗಿ ಕಾನೂನು ನೆರವು ಕೊಡಲಾಗುತ್ತದೆ ಎಂದು ತಿಳಿಸಿದರು. ಕಾನೂನು ನೆರವು ಪಡೆಯಲು ತಹಶೀಲ್ದಾರ್‌ ಕಚೇರಿ, ನ್ಯಾಯಾಲಯ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದರು.

ಕಾನೂನು ಅರಿವು (ಲೀಗಲ್ ಸರ್ವೀಸ್ ಸೆಲ್ ಅಥಾರಿಟಿ) ಎಂದು ಸರ್ಕಾರ ಆದೇಶ ಮಾಡಿದೆ. ಇದರ ಪ್ರಕಾರ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ನೆರವು ನೀಡುವುದು ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮಾತನಾಡಿ, ಅಂತರ್ಜಾಲದಲ್ಲಿ ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿ ಮಾಡುತ್ತೇವೆ. ಅದರಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕೆ ಖರೀದಿ ಮಾಡುವ ಸಮಯದಲ್ಲಿ ಮುನ್ನಚ್ಚರಿಕೆ ವಹಿಸಬೇಕು. ಚೈನ್‌ಲಿಂಕ್ ಮಾರ್ಕೆಟಿಂಗ್ ಮೂಲಕ ವ್ಯವಹರಿಸುವುದರಿಂದ ಮೋಸ ಹೋಗುವ ಸಂಭವ ತುಂಭವಿರುತ್ತದೆ. ಹೀಗಾಗಿ ಎಚ್ಚರದಿಂದ ವ್ಯವಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್ಯಭಟ್ಟ ಇಂಟರನ್ಯಾಷನಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿ ಸಂಕೇತ ಪಾಲಕಿ ಪ್ರಾರ್ಥಿಸಿದರೆ, ಚಂದ್ರಶೇಖರ ಗೋಗಿ ತಂಡದವರು ಸಂಗೀತಾ ಕಾರ್ಯಕ್ರಮ ನಡೆಸಿದರು. ಗುರುಪ್ರಸಾದ ವೈದ್ಯ ನಿರೂಪಿಸಿದರು.

ಈ ವೇಳೆ ಉಪವಿಭಾಗಾಧಿಕಾರಿ ಶಾಲಂ ಹುಸೇನ್‌, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರಾಜು, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ್, ಭೂ ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ದೇವರಾಜು, ಸಮಾಜ ಕಲ್ಯಾಣಾಧಿಕಾರಿ ಚನ್ನಬಸವ ಎಸ್.ಎಸ್. ಇದ್ದರು.

* ಯಾವುದೇ ವಸ್ತುಗಳನ್ನು ಖರೀದಿಸಿದರೆ ರಸೀದಿ ಚೀಟಿ ಪಡೆಯುವುದು ಬಹಳ ಮುಖ್ಯ. ವಸ್ತುಗಳ ಗುಣಮಟ್ಟವನ್ನು ಹಾಗೂ ಅವಧಿಯ ದಿನಾಂಕವನ್ನು ಪರಿಶೀಲಿಸಿವುದು ಬಹಳ ಮುಖ್ಯವಾಗಿರುತ್ತದೆ.

-ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.