ADVERTISEMENT

ನಮ್ಮ ಊರು ನಮ್ಮ ಜಿಲ್ಲೆ: ಕೈ ಬೀಸಿ ಕರೆಯುತ್ತಿವೆ ಕಲಾಕೃತಿಗಳು

ಕಲಾವಿದರ ಕೈಯಲ್ಲಿ ಅರಳಿದ ದೃಶ್ಯಕಾವ್ಯ; ಯಾದಗಿರಿ ನಗರದ ಏಕೈಕ ಉದ್ಯಾನ ‘ಲುಂಬಿನಿ’ಗೆ ಹೊಸ ರೂಪ

ಬಿ.ಜಿ.ಪ್ರವೀಣಕುಮಾರ
Published 11 ಜುಲೈ 2021, 4:14 IST
Last Updated 11 ಜುಲೈ 2021, 4:14 IST
ಯಾದಗಿರಿಯ ಲುಂಬಿನಿ ವನದಲ್ಲಿ ಕಲಾವಿದರ ಕೈಚಳಕದಲ್ಲಿ ಮೂಡಿಬಂದ ಆನೆ  (ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ)
ಯಾದಗಿರಿಯ ಲುಂಬಿನಿ ವನದಲ್ಲಿ ಕಲಾವಿದರ ಕೈಚಳಕದಲ್ಲಿ ಮೂಡಿಬಂದ ಆನೆ  (ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ)   

ಯಾದಗಿರಿ: ನಗರದ ಮಧ್ಯದೊಳಗಿರುವ ಲುಂಬಿನಿ ವನದಲ್ಲಿ ಜಿರಾಫೆ, ಆನೆ, ಡೈನೊಸರ್, ಜಿಂಕೆ, ಚೋಟಾ ಭೀಮ್‌ ಸೇರಿದಂತೆ ವಿವಿಧ ಕಲಾಕೃತಿಗಳು ಕೈ ಬಿಸಿ ಕರೆಯುತ್ತಿವೆ.

ಕಲಾವಿದರ ಕೈ ಚಳಕದಲ್ಲಿ ಮೂಡಿ ಬಂದಿರುವ ಕಲಾಕೃತಿಗಳು ಉದ್ಯಾನ ವೀಕ್ಷಣೆಗೆ ಬರುವವರನ್ನು ಮಂತ್ರಮುಗ್ಧಗೊಳಿಸುತ್ತಿವೆ. ಹಲವು ದಿನಗಳಿಂದ ಕಲಾಕೃತಿ ರಚನೆಯಲ್ಲಿ ತೊಡಗಿರುವ ಕಲಾವಿದರು ಅವುಗಳಿಗೆ ಜೀವ ತುಂಬಿದ್ದಾರೆ.

₹50 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ: ನಗರದ ಲುಂಬಿನಿ ವನದಲ್ಲಿ ₹50 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಕಲಾಕೃತಿಗಳ ನಿರ್ಮಾಣವೂ ಇದರಲ್ಲಿ ಸೇರಿದೆ.

ADVERTISEMENT

ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಲಾಕೃತಿಗಳ ನಿರ್ಮಾಣಕ್ಕೆ ಗುತ್ತಿಗೆ ನೀಡಿದ್ದಾರೆ. ಕಳೆದ ಮೂರು ತಿಂಗಳಿಂದ ಘನಶ್ರೀ ಆರ್ಟ್‌ ಕ್ರಿಯೇಷನ್‌ ವತಿಯಿಂದ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಲುಂಬಿನಿ ವನದ ಆಕರ್ಷಣೆ ಹೆಚ್ಚಿಸಲು ಪ‍್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಅದರಂತೆ ಹೊಸದಾದ ಲಾನ್‌ ನಿರ್ಮಿಸಿ ವನ್ಯಜೀವಿಗಳ ಪ್ರತಿಮೆಗಳನ್ನು ವನದಲ್ಲಿ ನಿರ್ಮಿಸುವ ಕೆಲಸಕ್ಕೆ ಕೈಹಾಕಲಾಗಿದೆ.

ವನದಲ್ಲಿ ಏನೇನಿವೆ?: ಲುಂಬಿನಿ ವನದಲ್ಲಿ ಪ್ರವೇಶ ಮಾಡುತ್ತಲೇನೈಸರ್ಗಿಕ ಕೋಣೆ ಮುಂಭಾಗದಲ್ಲಿ ಡೈನೊಸರ್‌ ಕಾಣಿಸುತ್ತದೆ. ಇನ್ನು ಮುಂದೆ ತೆರಳಿದರೆ ಆನೆ ಕಾಣಿಸುತ್ತದೆ.

ಎರಡು ಆನೆ, ಎರಡು ಜಿರಾಫೆ, ಚೋಟಾ ಭೀಮ್‌, ಗಂಡು, ಹೆಣ್ಣು, 3 ಮರಿ ಜಿಂಕೆಗಳ ನಿರ್ಮಾಣ ಕೆಲಸ ಸಾಗಿದ್ದು, ಮುಂದಿನ ದಿನಗಳಲ್ಲಿಡಾಲ್ಫಿನ್, ಪೆಂಗ್ವೀನ್, ಟೆಡ್ಡಿಬೇರ್ ನಿರ್ಮಿಸುವ ಯೊಜನೆ ಇದೆ.

ಒಂದು ಆನೆ ಪ್ರತಿಮೆ ನಿರ್ಮಾಣ ಮಾಡಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ. ಸಿಮೆಂಟ್, ಕಬ್ಬಿಣ, ಮರಳು, ಜಲ್ಲಿಕಲ್ಲು, ಮೆಸ್ ಬಳಸಿ ನಿರ್ಮಾಣ ಮಾಡಲಾಗಿದೆ. 45 ಸಿಮೆಂಟ್ ಚೀಲ,‌ 400 ಕೆ.ಜಿ ಕಬ್ಬಿಣ, ಒಂದು ಟ್ರ್ಯಾಕ್ಟರ್‌ ಮರಳು, ಮೆಸ್‌ ಬಳಸಲಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಂಡಿದ್ದು, 20 ಜನ ಹತ್ತಿ ಕುಳಿತರೂ ಯಾವುದೇ ಧಕ್ಕೆ ಇಲ್ಲ.

ಸದ್ಯ ಪ್ರ‌ವಾಸೋದ್ಯಮ ಇಲಾಖೆಯು ಲುಂಬಿನಿ ವನಕ್ಕೆ ₹5 ಟಿಕೆಟ್‌ ದರ ನಿಗದಿ ಪಡಿಸಲಾಗಿದೆ. ಕಲಾಕೃತಿಗಳು, ವನ ಅಭಿವೃದ್ಧಿ ಮಾಡಿದ ನಂತರ ಟಿಕೆಟ್‌ ದರ ಹೆಚ್ಚಳ ಮಾಡುವ ಬಗ್ಗೆ ಆಲೋಚನೆ ಹೊಂದಿದೆ.

ಮೂರು ತಿಂಗಳ ಹಿಂದೆ ಗುತ್ತಿಗೆ ಪಡೆದಿದ್ದು, ಲಾಕ್‌ಡೌನ್‌ ವೇಳೆ 8 ಜನ ಕೆಲಸ ಮಾಡುತ್ತಿದ್ದರು. ಈಗ ಮೂವರು ಕೆಲಸ ಮಾಡುತ್ತಿದ್ದು, ಕೊನೆ ಹಂತದ ಸ್ಪರ್ಶ ನೀಡುವ ಕೆಲಸದಲ್ಲಿ ಕಲಾವಿದರು ತೊಡಗಿಸಿಕೊಂಡಿದ್ದಾರೆ.

***

ಲುಂಬಿನಿ ವನದಲ್ಲಿ ವನ್ಯಜೀವಿಗಳು ಸೇರಿದಂತೆ ಹಲವು ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ
ಅಯ್ಯನಗೌಡ ಮಾಲಿಪಾಟೀಲ ಸಂತೆಕೊಲ್ಲೂರು, ಕಲಾವಿದ‌

***

ಲುಂಬಿನಿ ವನಕ್ಕೆ ಹೊಸ ರೂಪ ಕೊಡಲಾಗುತ್ತಿದೆ. ಪ್ರಾಣಿಗಳ ಕಲಾಕೃತಿಗಳನ್ನು ನಿರ್ಮಿಸುವ ಮೂಲಕ ವನಕ್ಕೆ ಎಲ್ಲ ವಯೋಮಾನದವರನ್ನು ಸೆಳೆಯುವ ಪ್ರಯತ್ನ ಇದಾಗಿದೆ
ಭೀಮರಾಯ ಕಲ್ಲೂರು, ಪ್ರವಾಸೋದ್ಯಮ ಪ್ರಭಾರಿ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.