ADVERTISEMENT

ಯಾದಗಿರಿ: ಶತಕದ ಸಮೀಪ ಕೋವಿಡ್‌ ರೋಗಿಗಳ ಸಾವು

ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಸಾವು, ಹುಣಸಗಿ ತಾಲ್ಲೂಕಿನಲ್ಲಿ ಕೇವಲ 3 ಸಾವು

ಬಿ.ಜಿ.ಪ್ರವೀಣಕುಮಾರ
Published 6 ಮೇ 2021, 17:01 IST
Last Updated 6 ಮೇ 2021, 17:01 IST
ಯಾದಗಿರಿ ಜಿಲ್ಲಾ ಕೋವಿಡ್‌ ಆಸ್ಪತ್ರೆ
ಯಾದಗಿರಿ ಜಿಲ್ಲಾ ಕೋವಿಡ್‌ ಆಸ್ಪತ್ರೆ   

ಯಾದಗಿರಿ: ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರ ಸಾವು ವೇಗವಾಗಿದ್ದು, ಶತಕದ ಸಮೀಪದ ಬಂದಿದೆ. ಮೇ 5ರ ತನಕ ಜಿಲ್ಲೆಯಲ್ಲಿ 96 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಕೋವಿಡ್‌ ಮೊದಲ ಅಲೆಯಲ್ಲಿ ವಯಸ್ಸಾದವರು, ಅನಾರೋಗ್ಯಕ್ಕೆ ಒಳಗಾದವರು ಸೋಂಕಿನಿಂದ ಮೃತಪಡುತ್ತಿದ್ದರು. ಆದರೆ, ಈಗ ಯುವಕರು, ಸಣ್ಣವಯಸ್ಸಿನವರು ಕೋವಿಡ್‌ಗೆ ತುತ್ತಾಗುತ್ತಿದ್ದಾರೆ.

ಎಲ್ಲೆಲ್ಲಿ ಹೆಚ್ಚು ಸಾವು?: ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಸಾವುಗಳು ಕೋವಿಡ್‌ನಿಂದ ಸಂಭವಿಸಿವೆ. ಈಗಾಗಲೇ 32 ಜನ ವಿವಿಧ ವಯೋಮಾನದವರು ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದು ಆ ತಾಲ್ಲೂಕಿನ ಜನತೆಗೆ ಭಯಹುಟ್ಟಿಸುವಂತಾಗಿದೆ.

ADVERTISEMENT

2020ರ ಮೇ 12ರಂದು ಜಿಲ್ಲೆಯಲ್ಲಿ ಕೋವಿಡ್‌ ಮೊದಲ ಬಾರಿಗೆ ಪತ್ತೆಯಾಯಿತು. ಆ ನಂತರ ಮೇ 20ರಂದು ಗುರುಮಠಕಲ್‌ ತಾಲ್ಲೂಕಿನ ವೃದ್ಧೆಯೊಬ್ಬರು ಮುಂಬೈನಿಂದ ಯರಗೋಳ ಚೆಕ್‌ಪೋಸ್ಟ್‌ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಅಂದಿನಿಂದ ಆರಂಭವಾದ ಕೋವಿಡ್‌ ಮರಣಗಳು ನವೆಂಬರ್‌ ವರೆಗೆ ನಿಯಂತ್ರಣದಲ್ಲಿದ್ದವು. ಆದರೆ, ಎರಡನೇ ಅಲೆ ಪ‍್ರಾರಂಭವಾದಲಿಂದ 30ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

‘ಕೋವಿಡ್‌ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಜಿಲ್ಲೆಯಲ್ಲಿ ಆಮ್ಲಜನಕ ಸಿಲಿಂಡರ್‌ ಹಾಗೂ ಹಾಸಿಗೆಗಳ ಕೊರತೆಯಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಇದು ಮುಂದೆ
ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜಿಲ್ಲಾಡಳಿತ ಶೀಘ್ರ ಎಚ್ಚೆತ್ತುಕೊಂಡರೆ ಅಪಾಯಪಟ್ಟವನ್ನು ಕಡಿಮೆ ಮಾಡಬಹುದು’ ಎಂದು ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಅವಿನಾಶ ಜಗನ್ನಾಥ ಹೇಳುತ್ತಾರೆ.

‘ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 132 ಆಮ್ಲಜನಕ ಸಿಲಿಂಡರ್‌ ವ್ಯವಸ್ಥೆಯ ಹಾಸಿಗೆ, 16 ವೆಂಟಿಲೇಟರ್‌ ಬೆಡ್‌ಗಳಿವೆ. ಎಲ್ಲವೂ ಭರ್ತಿಯಾಗಿವೆ. 15 ಐಸಿಯು ಬೆಡ್‌ಗಳು ಕಾರ್ಯಾಚರಣೆ ಮಾಡುತ್ತಿತ್ತು. ಒಂದು ದುರಸ್ತಿಗೆ ಬಂದಿದೆ. ಈಗ ಲಾಕ್‌ಡೌನ್‌ ಇರುವುದರಿಂದ ಹೆಚ್ಚುವರಿ
ಬೆಡ್‌ಗಳನ್ನು ಹೊಂದಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ತೋರ್ಪಡಿಸುತ್ತಾರೆ’ ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಚಿಕಿತ್ಸಕ ಎಸ್‌.ಬಿ.ಹಿರೇಮಠ ಹೇಳುತ್ತಾರೆ.

***

ಜಿಲ್ಲೆಯಲ್ಲಿ ಸಂಭವಿಸಿದ ಸಾವುಗಳ ವಿವರ

ತಾಲ್ಲೂಕು; ಸಾವುಗಳು

ಯಾದಗಿರಿ;28

ಗುರುಮಠಕಲ್‌;13

ಶಹಾಪುರ;32

ವಡಗೇರಾ;8

ಸುರಪುರ;12

ಹುಣಸಗಿ;03

ಒಟ್ಟು;96

**

ಸಾವು ಪ್ರಕರಣ ಮುಚ್ಚಿಡುತ್ತಿರುವ ಜಿಲ್ಲಾಡಳಿತ: ಆರೋಪ

ಇಲ್ಲಿಂದ ಬೇರೆ ಜಿಲ್ಲೆಗೆ ಕೋವಿಡ್‌ ರೋಗಿಗಳನ್ನು ಸ್ಥಳಾಂತರ ಮಾಡಿ ಅಲ್ಲಿ ಅವರು ಅಸುನೀಗಿದರೆ ಜಿಲ್ಲೆಯೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇದರಿಂದ ಎಷ್ಟೊ ರೋಗಿಗಳ ಸಾವನ್ನು ಜಿಲ್ಲಾಡಳಿತ ಲೆಕ್ಕದಲ್ಲಿ ಸೇರಿಸಿಕೊಂಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಆಮ್ಲಜನಕ ಬೆಡ್‌ಗಳ ಕೊರತೆಯಾಗಿದೆ. ಹೀಗಾಗಿ ಬೇರೆ ಜಿಲ್ಲೆಗಳಿಗೆ ತೆರಳಲು ಶಿಫಾರಸು ಮಾಡಲಾಗುತ್ತಿದೆ. ಹಣ ಇದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಬಡವರು ಎಲ್ಲಿಗೆ ತೆರಳಬೇಕು ಎನ್ನುವುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.

***

ಹಿರಿಯ ನಾಗರಿಕರು ಕೋವಿಡ್‌ ಕೈ ಮೀರಿದ ಮೇಲೆ ಆಸ್ಪತ್ರೆಗೆ ಬರುತ್ತಿದ್ದಾರೆ. ಶ್ವಾಸಕೋಶ ಸಮಸ್ಯೆ ಇದ್ದವರು ಶೀಘ್ರವೇ ಮರಣಕ್ಕೆ ತುತ್ತಾಗುತ್ತಿದ್ದಾರೆ
ಎಸ್‌.ಬಿ.ಹಿರೇಮಠ,ಜಿಲ್ಲಾ ಚಿಕಿತ್ಸಕ, ಜಿಲ್ಲಾಸ್ಪತ್ರೆ

***

ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಬೆಡ್‌ಗಳ ಕೊರತೆ ಇದೆ. ಜಿಲ್ಲಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೋವಿಡ್‌ ಕೇರ್‌ ಸೆಂಟರ್‌ ಹೆಚ್ಚುಮಾಡಲಿ
ಅವಿನಾಶ ಜಗನ್ನಾಥ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.