ADVERTISEMENT

ಯಾದಗಿರಿ: ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್‌ ಲಸಿಕೆ ನೀಡಿಕೆಯಲ್ಲಿ ಜಿಲ್ಲೆ ನಂ.1

85 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ, ಒಂದು ವಾರದಿಂದ ಹೆಚ್ಚಳ

ಬಿ.ಜಿ.ಪ್ರವೀಣಕುಮಾರ
Published 19 ಮಾರ್ಚ್ 2021, 19:31 IST
Last Updated 19 ಮಾರ್ಚ್ 2021, 19:31 IST
ನಂ.1 ಸ್ಥಾನಕ್ಕೇರಿದ್ದರಿಂದ ಡಾ.ಶಾಲಿನಿ ರಜನೀಶ ಅವರು ಫೇಸ್‌ಬುಕ್‌ನಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆ ತಿಳಿಸಿರುವುದು
ನಂ.1 ಸ್ಥಾನಕ್ಕೇರಿದ್ದರಿಂದ ಡಾ.ಶಾಲಿನಿ ರಜನೀಶ ಅವರು ಫೇಸ್‌ಬುಕ್‌ನಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆ ತಿಳಿಸಿರುವುದು   

ಯಾದಗಿರಿ: ಜಿಲ್ಲೆಯ ಸಾರ್ವಜನಿಕರು ಅತಿ ಹೆಚ್ಚು ಕೋವಿಡ್‌ ಲಸಿಕೆ ಹಾಕಿಕೊಂಡಿದ್ದರಿಂದ ಶೇ 95ರಷ್ಟು ಪ್ರತಿಶತ ದಾಖಲಾಗಿದೆ. ಇದರಿಂದ ಜಿಲ್ಲೆಯು ರಾಜ್ಯದಲ್ಲೇ ನಂ.1 ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ ಮಾರ್ಚ್‌ 11ರಿಂದ 45ರಿಂದ 60 ವರ್ಷ, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ನೀಡಲು ಆರಂಭಿಸಿದ್ದು, ಇದರಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ನಂಬರ್‌ ಒನ್‌ ಸ್ಥಾನಕ್ಕೆ ಏರಿಕೆಯಾಗಿದೆ. ಇದಕ್ಕಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಯಾದಗಿರಿ ಜಿಲ್ಲಾಧಿಕಾರಿ ಮತ್ತು ತಂಡಕ್ಕೆ ಅಭಿನಂದಿಸಿದ್ದಾರೆ.

85 ಸಾವಿರ ಲಸಿಕೆ ನೀಡುವ ಗುರಿ:

ADVERTISEMENT

ಜಿಲ್ಲೆಯಲ್ಲಿ 85 ಸಾವಿರ ಸಾರ್ವಜನಿಕರಿಗೆ ಕೋವಿಡ್‌ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮೊದಲ ಹಂತ, ಎರಡನೇ ಹಂತದ ಲಸಿಕೆ ನೀಡಲಾಗಿದೆ. ಈಗ 45, 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಲಸಿಕೆ ನೀಡಲು ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್‌ ಕಾರ್ಯಕರ್ತರು, ಪಂಚಾಯತ್‌ ರಾಜ್‌ ಇಲಾಖೆ, ಪೊಲೀಸ್‌, ಹೋಂ ಗಾರ್ಡ್‌, ನಗರಸಭೆ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಇದರಿಂದ ಶೇಕಡವಾರು ಬೇರೆ ಜಿಲ್ಲೆಗಳಿಗಿಂತ ಹೆಚ್ಚಾಗಿದೆ.

ನಗರದಲ್ಲಿ ಎರಡು ಲಸಿಕೆ ಕೇಂದ್ರ:

ಯಾದಗಿರಿ ನಗರದಲ್ಲಿ ಎರಡು ಕಡೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಹಳೆ ಜಿಲ್ಲಾಸ್ಪತ್ರೆ ಮತ್ತು ಬೀಡಿ ಕಾರ್ಮಿಕರ ಇಎಸ್‌ಐ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಇನ್ನುಳಿದಂತೆ ಶಹಾಪುರ, ಸುರಪುರ ತಾಲ್ಲೂಕು ಆಸ್ಪತ್ರೆ, ದೋರನಹಳ್ಳಿ, ವಡಗೇರಾ, ಹುಣಸಗಿ, ಅರಕೇರಾ ಬಿ, ಗುರುಮಠಕಲ್‌,ಸೈದಾಪುರ, ಬೆಂಡೆಬೆಂಬಳಿ, ಚಾಮನಾಳ, ಚಟ್ನಳ್ಳಿ, ಗೋಗಿ, ಹತ್ತಿಗೂಡೂರು, ಐಯಾಳ (ಬಿ), ಕುರಕುಂದ, ಸಗರ, ಶಿರವಾಳ, ತಡಿಬಿಡಿ, ವನದುರ್ಗಾ, ದೇವರಗೋನಾಲ, ವಿಬಿಆರ್‌ ಮುದ್ನಾಳ ಆಸ್ಪತ್ರೆ ಸೇರಿದಂತೆ 54 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

ಮಾರ್ಚ್‌ 16ರಂದು ಒಂದೇ ದಿನ ಜಿಲ್ಲೆಯ 54 ಆಸ್ಪತ್ರೆಗಳಲ್ಲಿ 6,640 ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಇದರಿಂದ ಅಂದು ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್‌ ಲಸಿಕೆ ಪಡೆದ ನಂ.1 ಜಿಲ್ಲೆಯಾಗಿ ಹೊರಹೊಮ್ಮಿದೆ. ಮಾರ್ಚ್‌ 18ರಂದು ಮೊದಲ ಹಂತದಲ್ಲಿ 3,341 ಜನ, 59 ಎರಡನೇ ಹಂತದಲ್ಲಿ ಲಸಿಕೆ ಪಡೆದಿದ್ದಾರೆ.

* ಮಾರ್ಚ್‌ 11ರಿಂದ ಸಾರ್ವಜನಿಕರಿಗೆ ಲಸಿಕೆ ನೀಡುವ ಅಭಿಯಾನ ಮಾಡಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕಾಗಿ ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಲಾಗುತ್ತಿದೆ.

–ಡಾ.ಇಂದುಮತಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

* ನಗರಸಭೆ ಸಿಬ್ಬಂದಿ ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಗಳ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ.

–ಡಾ.ರಾಗಪ್ರಿಯಾ ಆರ್, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.