ADVERTISEMENT

ಯಾದಗಿರಿ | ‘ಕೋವಿಡ್’ ಚೇತರಿಕೆ ಪ್ರಮಾಣ ಹೆಚ್ಚಳ

2 ವರ್ಷ ಮಗುವಿನಿಂದ 60 ವರ್ಷದ ವೃದ್ಧವರೆಗೂ ಗುಣಮುಖ

ಬಿ.ಜಿ.ಪ್ರವೀಣಕುಮಾರ
Published 29 ಜೂನ್ 2020, 4:20 IST
Last Updated 29 ಜೂನ್ 2020, 4:20 IST
ಯಾದಗಿರಿಯ ಕೋವಿಡ್‌ ಆಸ್ಪತ್ರೆಯಿಂದ ಗುಣಮುಖರಾದವರಿಗೆ ಪ್ರಮಾಣ ಪತ್ರ ನೀಡಲಾಯಿತು (ಸಂಗ್ರಹ ಚಿತ್ರ)
ಯಾದಗಿರಿಯ ಕೋವಿಡ್‌ ಆಸ್ಪತ್ರೆಯಿಂದ ಗುಣಮುಖರಾದವರಿಗೆ ಪ್ರಮಾಣ ಪತ್ರ ನೀಡಲಾಯಿತು (ಸಂಗ್ರಹ ಚಿತ್ರ)   

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ತೀವ್ರಗತಿಯಿಂದ ಏರಿಕೆಯಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಿದೆ. ಭಾನುವಾರ 36ಜನ ಸೇರಿ ಜೂನ್ 28ರ ವರೆಗೆ 821 ಜನ ಗುಣಮುಖರಾಗಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ 45 ದಿನಗಳು ಜಿಲ್ಲೆ ಹಸಿರುವಲಯದಲ್ಲಿ ಗುರುತಿಸಿಕೊಂಡಿತ್ತು. ಆ ನಂತರ ಮೇ 12ರಂದು ಗುಜರಾತ್‌ನ ಅಹಮದಬಾದ್‌ನಿಂದ ಬಂದ ದಂಪತಿಯಲ್ಲಿ ಕೋವಿಡ್‌–19 ಮೊದಲ ಬಾರಿಗೆ ಪತ್ತೆಯಾಯಿತು.ಆ ನಂತರ ಮೇ 17ರಂದು 3, 18ರಂದು 6, 19ರಂದು 1, 22ರಂದು 2, 23ರಂದು 72, 24ರಂದು 24 ಕೋವಿಡ್‌ ಪ್ರಕರಣಗಳು ಪತ್ತೆಯಾಯಿತು. ಅಂದಿನಿಂದ ಇಂದಿನವರೆಗೆ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ.

ಮೊದಲಿಗೆ 9 ಮಂದಿ ಗುಣಮುಖ:ಕೋವಿಡ್‌ ಪತ್ತೆಯಾದ ಎರಡು ವಾರಗಳ ನಂತರ ಅಂದರೆ ಮೇ 26ರಂದು ಒಂದೇ ದಿನ 9 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದರು.ಅಂದಿನಿಂದ ಇಂದಿನವರೆಗೆ ಗುಣಮುಖರಾಗುವರ ಸಂಖ್ಯೆ ಎರುತ್ತಲೆ ಇದೆ. ಇದರಿಂದ ಸೋಂಕು ಹಬ್ಬಿದ ವೇಗದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಿದೆ.

ADVERTISEMENT

ಶೇ.90ರಷ್ಟು ಮಹಾರಾಷ್ಟ್ರದಿಂದ ಬಂದವರು:ಜಿಲ್ಲೆಯಲ್ಲಿ 930 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಶೇಕಡ 90ರಷ್ಟು ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕುಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ ಏರಿಯಾಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಸಾವು ಸಂಭವಿಸಿಲ್ಲ. ಮೇ 20ರಂದು ಮರಣಹೊಂದಿದ ಮಹಿಳೆ ಆಸ್ಪತ್ರೆಗೆ ತರುವ ಮುನ್ನವೇ ನಿಧನರಾಗಿದ್ದರು. ಆ ನಂತರ ಗಂಟಲು ದ್ರವ ಸಂಗ್ರಹಿಸಿದ ನಂತರ ಕೋವಿಡ್‌ ಪತ್ತೆಯಾಗಿತ್ತು. ಒಬ್ಬರನ್ನು ಬಿಟ್ಟರೆ ಸೋಂಕು ಮಾರಾಣಾಂತಿಕವಾಗಿ ಪರಿಣಮಿಸಿಲ್ಲ.

ಚಿಕ್ಕಮಕ್ಕಳಿಗೆ ಆಟವಾಡಲು ಪ್ರತ್ಯೇಕ ಕೋಣೆ:ಯಾದಗಿರಿಯ ಕೋವಿಡ್‌ ಆಸ್ಪತ್ರೆಯಲ್ಲಿ ಕೋವಿಡ್‌ ಪೀಡಿತ ಮಕ್ಕಳಿಗಾಗಿ ಪ್ರತ್ಯೇಕ ಕೊಠಡಿಯನ್ನು ಮೀಸಲೀಡಲಾಗಿದೆ. ಅಲ್ಲದೆ ಮಕ್ಕಳಿಗೆ ಬೇಕಾಗುವ ಆಟದ ಸಾಮಾನು, ಗೊಂಬೆ ಇನ್ನಿತರ ಚಟುವಟಿಕೆ ಕೈಗೊಳ್ಳಲು ಪೂರಕ ವಾತಾವರಣ ಕಲ್ಪಿಸಲಾಗಿದೆ. ಇದರಿಂದ ಮಕ್ಕಳು ಚೇತರಿಕೆ ಕಾಣುತ್ತಿದ್ದಾರೆ.

ಸೋಂಕಿತರಲ್ಲಿ ಲಕ್ಷಣಗಳೇ ಇಲ್ಲ!:ಜಿಲ್ಲೆಯಲ್ಲಿ ಕಂಡು ಬಂದ ಕೋವಿಡ್‌ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಇಲ್ಲ. ಇದರಿಂದ ಹೆಚ್ಚೆನೂ ಸಮಸ್ಯೆ ಉಂಟಾಗಿಲ್ಲ. ಇದರಿಂದ ಹೆಚ್ಚಿನ ಅನಾಹುತವೂ ಆಗಿಲ್ಲ. ಕ್ವಾರಂಟೈನ್‌ಗಳಲ್ಲಿ ಕೂಡಿ ಹಾಕಿದ್ದರಿಂದ ಒಬ್ಬರಿಂದ ಒಬ್ಬರಿಗೆ ಹರಡಿ ಸಂಖ್ಯೆ ಜಾಸ್ತಿಯಾಗಿತ್ತು.

ಜಿಂಕ್, ವಿಟಮಿನ್‌ ಮಾತ್ರ:ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮಾಹಿತಿ ಅನುಗುಣವಾಗಿ ಸೋಂಕಿತರಿಗೆ ವಿಟಮಿನ್‌, ಜಿಂಕ್‌ ಔಷಧಿಯನ್ನು ನೀಡಲಾಗುತ್ತಿದೆ. ಇದರಿಂದ ರೋಗಿಗಳು ಶೀಘ್ರ ಚೇತರಿಸಿಕೊಳ್ಳುತ್ತಾರೆ ಎನ್ನುತ್ತಾರೆ ವೈದ್ಯರು.

‘ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವರ ಸೋಂಕಿನ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ರೋಗಿಗಳು ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಬೆಳಿಗ್ಗೆ ತಿಂಡಿ, ಎರಡು ಬಾರಿ ಊಟ, ಚಹಾ, ಬಿಸ್ಕತ್‌, ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಗುಣಮಟ್ಟದ ಆಹಾರದಿಂದಲೂ ಚೇತರಿಕೆ ಕಾಣಬಹುದು’ ಎಂದು ಕೋವಿಡ್‌ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಸಂಜೀವ ಕುಮಾರ ರಾಯಚೂರಕರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.