ADVERTISEMENT

ಯಾದಗಿರಿ: ಆಭರಣ, ಬಟ್ಟೆ ವ್ಯಾಪಾರದಲ್ಲಿ ಕುಸಿತ

ಅಗತ್ಯವಿದ್ದಷ್ಟೆ ಚಿನ್ನ ಖರೀದಿ, ದರ ಹೆಚ್ಚಳದಿಂದ ಖರೀದಿಗೆ ನಿರಾಸಕ್ತಿ

ಬಿ.ಜಿ.ಪ್ರವೀಣಕುಮಾರ
Published 12 ಜೂನ್ 2020, 15:35 IST
Last Updated 12 ಜೂನ್ 2020, 15:35 IST
ಯಾದಗಿರಿಯ ಗಾಂಧಿ ವೃತ್ತದ ಬಳಿ ಇರುವ ಬಟ್ಟೆ ಅಂಗಡಿ
ಯಾದಗಿರಿಯ ಗಾಂಧಿ ವೃತ್ತದ ಬಳಿ ಇರುವ ಬಟ್ಟೆ ಅಂಗಡಿ   

ಯಾದಗಿರಿ: ‘ಜಿಲ್ಲೆಯಲ್ಲಿ ಜೂನ್‌ 8ರಿಂದ ಲಾಕ್‌ಡೌನ್‌ಸಂಪೂರ್ಣ ಸಡಿಲಿಕೆ ಮಾಡಿದ್ದರೂ‌ಜ್ಯುವೆಲ್ಲರಿ, ಬಟ್ಟೆ ವ್ಯಾಪಾರ ಕುಸಿತಗೊಂಡಿದೆ. ಚೇತರಿಕೆಗೆ ಮತ್ತೆ ಮದುವೆ ಸೀಸನ್‌ ಆರಂಭವಾಗುವುದೇ ಮಾರ್ಗ’ ಎನ್ನುತ್ತಾರೆ ವ್ಯಾಪಾರಿಗಳು.

ನಗರದಲ್ಲಿ 50-60 ಚಿನ್ನದ ಅಂಗಡಿಗಳಿವೆ. ಜಿಲ್ಲೆಯಲ್ಲಿ ಅಂದಾಜು 300 ಮಳಿಗೆಗಳಿವೆ. ಆದರೂ ಕೆಲ ಕಡೆ ಮದುವೆ ಮಾಡುತ್ತಿದ್ದರಿಂದ ಚಿನ್ನಾಭರಣ ಖರೀದಿಗೆ ಮುಗಿಬಿದ್ದಿದ್ದಾರೆ. ಚಿಕ್ಕಪುಟ್ಟ ಅಂಗಡಿಗಳಲ್ಲಿ ಜನರು ಇಲ್ಲದಂತೆ ಪರಿಸ್ಥಿತಿ ಇದೆ.

‘ಜಿಲ್ಲೆಯಲ್ಲಿ ಗ್ರಾಮೀಣ ಭಾಗದವರು ಹೆಚ್ಚಿನ ಚಿನ್ನಾಭರಣ ಖರೀದಿ ಮಾಡುತ್ತಾರೆ. ಆದರೆ, ಲಾಕ್‌ಡೌನ್‌ ಪರಿಣಾಮ ಸೀಸನ್‌ ವೇಳೆ ಬಂದ್‌ ಆಗಿತ್ತು. ಈಗ ಆರಂಭವಾದರೂ ಮೊದಲಿನಷ್ಟು ವ್ಯಾಪಾರ ಇಲ್ಲ. ಈಗ ಮುಂಗಾರು ಹಂಗಾಮು ಶುರುವಾಗಿದ್ದರಿಂದ ರೈತರಿಗೆ ಬಿತ್ತನೆ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಮದುವೆ ಇದ್ದವರು ಮಾತ್ರ ಚಿನ್ನಾಭರಣ ಅಂಗಡಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಜ್ಯುವೆಲ್ಲರಿ ಸಂಘದ ಅಧ್ಯಕ್ಷಅಶೋಕ‌ ಚಂಡ್ರಕಿ.

ADVERTISEMENT

‘ಯುಗಾದಿ, ಅಕ್ಷಯ ತೃತೀಯದಲ್ಲಿ ಚಿನ್ನ ಹೆಚ್ಚು ಮಾರಾಟವಾಗುತ್ತಿತ್ತು. ಆದರೆ, ಆಗ ಬಂದ್‌ ಆಗಿದ್ದು, ಈಗ ಪರಿಣಾಮ ಬೀರಿದೆ. ಮದುವೆಗಳು ಕಡಿಮೆಯಾಗಿವೆ. ಚಿನ್ನದ ದರವೂ ಹೆಚ್ಚಾಗಿದೆ. ಇದರಿಂದ ಜನರು ಖರೀದಿಗೆ ಮುಂದೆಬರುತ್ತಿಲ್ಲ’ ಎನ್ನುತ್ತಾರೆ ಅವರು.

‘ನಗರದಲ್ಲಿ ಶುಕ್ರವಾರ ಪ್ರತಿ 10 ಗ್ರಾಂಗೆ ಚಿನ್ನ ₹ 48 ಸಾವಿರ, ಒಂದು ಗಟ್ಟಿ ಬೆಳ್ಳಿಗೆ ₹ 500 ಇತ್ತು. ಗಣನೀಯವಾಗಿ ಚಿನ್ನದ ಬೆಲೆ ಏರಿಕೆ ಆಗಿದ್ದರಿಂದ ಖರೀದಿಸುವವರ ಸಂಖ್ಯೆಯೂ ಕಡಿಮೆ ಇದೆ. ಆದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಚೇತರಿಕೆಯ ನಿರೀಕ್ಷೆ ಇದೆ’ ಎಂದು ವ್ಯಾಪಾರಿಗಳು ತಿಳಿಸಿದರು.

‘ಸೋಮವಾರದಿಂದ ಹೆಚ್ಚು ಚಿನ್ನ, ಬೆಳ್ಳಿ ಮಾರಾಟವಾಗುತ್ತಿದೆ. ಮಧ್ಯಾಹ್ನ ತನಕ ಅಂಗಡಿಗಳಲ್ಲಿ ವ್ಯಾಪಾರ ಇರುತ್ತದೆ.ಆ ನಂತರ ಕಡಿಮೆ ಆಗುತ್ತಿದೆ. ಈಗೀಗ ಜನರು ಖರೀದಿಗೆ ಬರುತ್ತಿದ್ದಾರೆ’ ಎನ್ನುತ್ತಾರೆಗಣೇಶ ಜ್ಯುವೆಲ್ಲರಿ ಮಾಲಿಕಉದಯ ನಾಗೂರ.

ಬಟ್ಟೆ ವ್ಯಾಪಾರವೂ ಕುಸಿತ:

ಸಿದ್ದ ಉಡುಪುಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಹೊಲಿಗೆ ಮಾಡಿಸುವ ಬಟ್ಟೆಗಳನ್ನು ಜನರು ಖರೀದಿಸುತ್ತಿಲ್ಲ. ಎರಡೂವರೆ ತಿಂಗಳು ಅಂಗಡಿ ಬಂದ್‌ ಆಗಿದ್ದು, ನಮಗೆ ತುಂಬಾ ನಷ್ಟವಾಗಿದೆ ಎಂದು ಬಟ್ಟೆ ವ್ಯಾಪಾರಿಗಳು ಅವಲತ್ತುಕೊಂಡರು.

‘ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಜಿಲ್ಲೆಯಲ್ಲಿ ಮೇ 4ರಂದು ಲಾಕ್‌ಡೌನ್‌ ಸಡಿಲಿಕೆ ಮಾಡಿ ಜಿಲ್ಲಾಡಳಿತ ಆದೇಶಿಸಿತ್ತು. ಅದರಂತೆ ಮೇ 10ರವರೆಗೆ ಬಟ್ಟೆ, ಚಿನ್ನದ ವ್ಯಾಪಾರ ನಡೆದಿತ್ತು. ಆದರೆ, ಮೇ 12ರಂದು ಜಿಲ್ಲೆಯಲ್ಲಿ ಕೋವಿಡ್‌ ಪತ್ತೆಯಾದ್ದರಿಂದ ಮತ್ತೆ ಚಿನ್ನಾಭರಣ, ಬಟ್ಟೆ ಅಂಗಡಿಗಳನ್ನು ಮುಚ್ಚಿಸಲಾಯಿತು. ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಯಿತು’ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡರು.

ಜೂನ್ 8 ರಿಂದ ಮಾರಾಟ ಚುರುಕು

ಮದುವೆ ಮಾಡುವವರು ಚಿನ್ನಾಭರಣವನ್ನು ಅವಶ್ಯವಿದ್ದಷ್ಟು ಮಾತ್ರ ಖರೀದಿ ಮಾಡುತ್ತಿದ್ದಾರೆ. ಜೂನ್‌ 8ರಿಂದ ಚಿನ್ನಾಭರಣ ಮಾರಾಟ ಚುರುಕು ಪಡೆದಿದೆ ಎಂದು ಗಣೇಶ ಜ್ಯುವೆಲ್ಲರಿ ಮಾಲಿಕ ಉದಯ ನಾಗೂರ ಹೇಳುತ್ತಾರೆ.

ಖರೀದಿಗೆ ಜನ ಬರುತ್ತಿಲ್ಲ

ಬಟ್ಟೆ ವ್ಯಾಪಾರ ಅಷ್ಟಾಗಿ ನಡೆಯುತ್ತಿಲ್ಲ. ಖರೀದಿಗೆ ಜನ ಬರುತ್ತಿಲ್ಲ. ಆದರೂ ಕೆಲಸಗಾರರಿಗೆ ವೇತನ ನೀಡಲಾಗಿದೆ. ಮುಂದೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಬಟ್ಟೆ ವ್ಯಾಪಾರಿ ಸಂಗಮೇಶ್ವರ ಪ್ಯಾರಸಬಾದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.